ವಾಷಿಂಗ್ಟನ್: ವಿಶ್ವವನ್ನೇ ಕಂಗಾಲಾಗಿಸಿರುವ ಮಾರಕ ಕೊರೊನಾ ವೈರಸ್ ವಿಶ್ವದ ದೊಡ್ಡಣ್ಣ ಎಣಿಸಿಕೊಂಡಿರುವ ಅಮೆರಿಕಾ ದೇಶವನ್ನೂ ಸಹ ಕಂಗೆಡಿಸುತ್ತಿದೆ. ಈ ದೇಶದಲ್ಲಿ ಈಗಾಗಲೇ 1701 ಕೊರೊನಾ ಪ್ರಕರಣಗಳು ಖಚಿತಪಟ್ಟಿದ್ದು 40 ಜನರು ಈ ಮಹಾಮಾರಿಗೆ ಜೀವತೆತ್ತಿದ್ದಾರೆ.
ಈ ಹಿನ್ನಲೆಯಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಾಷ್ಟ್ರಾದ್ಯಂತ ಕೊರೊನಾ ತುರ್ತು ಸ್ಥಿತಿಯನ್ನು ಘೋಷಿಸಿದ್ದಾರೆ. ಈ ಘೋಷಣೆಯ ಮೂಲಕ ಅಮೆರಿಕಾ ಸರಕಾರಕ್ಕೆ ಈ ಮಾರಕ ವೈರಸ್ ವಿರುದ್ಧ ಸಮರ ಸಾರಲು 50 ಬಿಲಿಯನ್ ಡಾಲರ್ ನಷ್ಟು ಪರಿಹಾರ ಮೊತ್ತವನ್ನು ವಿನಿಯೋಗಿಸಲು ಸಾಧ್ಯವಾಗಲಿದೆ.
ಟ್ರಂಪ್ ಸರಕಾರದ ಈ ಕ್ರಮದಿಂದಾಗಿ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿರುವ ತೊಡಕು ಮತ್ತು ಮಿತಿಗಳು ನಿವಾರಣೆಯಾಗಲಿವೆ ಮಾತ್ರವಲ್ಲದೇ ಆ ಮೂಲಕ ಕೊರೊನಾ ಪ್ರಕರಣ ಪತ್ತೆ ಕಾರ್ಯಕ್ಕೆ ಅಮೆರಿಕಾದ್ಯಂತ ಇನ್ನಷ್ಟು ವೇಗ ಲಭಿಸಲಿದೆ.
ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಮೆರಿಕಾದ ಹಲವಾರು ರಾಜ್ಯಗಳು ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಇದರಲ್ಲಿ ಬೃಹತ್ ಸಭೆ ಸಮಾರಂಭಗಳಿಗೆ ನಿಷೇಧ, ಕ್ರೀಡಾಕೂಟಗಳ ರದ್ದು ಮತ್ತು ಶಾಲೆಗಳಿಗೆ ರಜೆ ಘೋಷಣೆ ಸೇರಿದೆ.