ಮಂಗಳೂರು: ರಾಜ್ಯ ಸರಕಾರದಿಂದ ಒಪ್ಪಿಗೆ ಪಡೆದು ಕೇಂದ್ರಕ್ಕೆ ರವಾನೆಯಾಗಿದ್ದ ಪರಿಷ್ಕೃತ ಕಂಬಳ ಮಸೂದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ.
ಮುಂದಿನ ಕೆಲವೇ ದಿನಗಳಲ್ಲಿ ಅದು ಗೃಹ ಸಚಿವಾಲಯದ ಮೂಲಕ ರಾಜ್ಯ ಸರಕಾರಕ್ಕೆ ಮರಳಿ ಕಾನೂನು ಆಗಿ ಜಾರಿಗೊಳ್ಳಲಿದೆ. ಹೀಗಾಗಿ ಭವಿಷ್ಯ ದಲ್ಲಿ ಕಂಬಳ ಕ್ರೀಡೆ ಆಯೋಜಿಸಲು ಯಾವುದೇ ಕಾನೂನು ತೊಡಕು ಎದುರಾಗದು. ಇದು ರಾಜ್ಯದಲ್ಲಿ ಸುಮಾರು ಎರಡು ವರ್ಷಗಳಿಂದ ಕಂಬಳ ಆಯೋಜಿಸುವ ವಿಚಾರದಲ್ಲಿ ಉದ್ಭವಿಸಿದ್ದ ಎಲ್ಲ ರೀತಿಯ ಕಾನೂನು ಸಂಘರ್ಷ ಹಾಗೂ ಅಡ್ಡಿ- ಆತಂಕ ಗಳನ್ನು ಕೊನೆಗಾಣಿಸಿದೆ.
ಕಳೆದ ನವೆಂಬರ್‌ನಲ್ಲಿ ಬೆಳಗಾವಿ ಯಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಪರಿಷ್ಕೃತ ಕಂಬಳ ಮಸೂದೆ ಮಂಡನೆಯಾಗಿ ಉಭಯ ಸದನಗಳ ಅಂಗೀಕಾರ ಪಡೆದಿತ್ತು. ಬಳಿಕ ಮಸೂದೆಯನ್ನು ರಾಷ್ಟ್ರಪತಿ ಗಳ ಅಂಕಿತಕ್ಕಾಗಿ ಕೇಂದ್ರ ಗೃಹ ಸಚಿ ವಾಲಯದ ಮೂಲಕ ಕಳುಹಿಸಲಾ ಗಿತ್ತು. ಮಸೂದೆಯನ್ನು ಕಾನೂನಾ ಗಿಸುವ ಪ್ರಕ್ರಿಯೆಗಳು ನಡೆದು ಅದನ್ನು ರಾಷ್ಟ್ರಪತಿಯವರ ಸಹಿ ಗಾಗಿ ಸಲ್ಲಿಸಲಾಗಿತ್ತು. ಈಗ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಈ ಕಂಬಳ ಮಸೂದೆಗೆ ಅಂಕಿತ ಹಾಕಿ ದ್ದಾರೆ. ಇನ್ನಿರುವುದು ಮಸೂದೆ ಕಾನೂನು ಆಗಿ ಜಾರಿಗೊಳ್ಳುವುದಕ್ಕೆ ದಿನಗಣನೆ. ಕಳೆದ ಒಂದೆರಡು ವರ್ಷಗಳಿಂದ ಕಂಬಳ ಕ್ರೀಡೆ ಆಯೋಜಿಸು ವುದಕ್ಕೆ ಎದುರಾಗಿದ್ದ ಅಡೆತಡೆಗಳು ನಿವಾರಣೆಗೊಂಡು, ರಾಷ್ಟ್ರಪತಿಗಳ ಅಂಕಿತದೊಂದಿಗೆ ಕಂಬಳ ಪರ ಕಾನೂನು ಜಾರಿಗೊಳ್ಳಲಿರುವುದು ಸಹಜವಾಗಿ ಕಂಬಳ ಅಭಿಮಾನಿಗಳು ಮತ್ತು ಬೆಂಬಲಿಗರಿಗೆ ಖುಷಿ ನೀಡಿದೆ.
ಪರಿಷ್ಕೃತ ಮಸೂದೆ: 2017ರ ಫೆಬ್ರವರಿಯಲ್ಲಿ ಕರ್ನಾಟಕ ವಿಧಾನ ಮಂಡಲದಲ್ಲಿ ಅನುಮೋದನೆಗೊಂಡಿದ್ದ ಪ್ರಾಣಿ ಹಿಂಸೆ ತಡೆ (ಕರ್ನಾಟಕ ತಿದ್ದುಪಡಿ) ಮಸೂದೆ ರಾಷ್ಟ್ರಪತಿಗಳ ಅಂಕಿತಕ್ಕೆ ರವಾನೆಯಾಗಿದ್ದರೂ ಕೆಲವು ತಾಂತ್ರಿಕ ನ್ಯೂನತೆಗಳ ಹಿನ್ನೆಲೆಯಲ್ಲಿ ಮಸೂದೆಯನ್ನು ವಾಪಸ್ ಕಳುಹಿಸಲಾಗಿತ್ತು. ರಾಜ್ಯ ಸರಕಾರ ಲೋಪಗಳನ್ನು ಸರಿಪಡಿಸಿ ಪರಿಷ್ಕೃತ ಮಸೂದೆಗೆ ಅಂಗೀಕಾರ ಪಡೆದು, ರಾಷ್ಟ್ರಪತಿಗಳಿಗೆ ಕಳುಹಿಸಿತ್ತು. ಇದರ ನಡುವೆ ಕಂಬಳ ನಡೆಸುವುದಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ಸರಕಾರವು ತುರ್ತಾಗಿ ಅಧ್ಯಾದೇಶವನ್ನು ಹೊರಡಿಸಿತ್ತು. ಕಳೆದ ಆ.20ರಂದು ಈ ಅಧ್ಯಾದೇಶ ಗಜೆಟ್ ನೋಟಿಫಿಕೇಶ್ ಆಗಿ ಜ. 20ರ ವರೆಗೆ ಉರ್ಜಿತದಲ್ಲಿತ್ತು.
ಕಂಬಳ ಪ್ರಮುಖರ ಕೃತಜ್ಞತೆ: ಮಸೂದೆ ರಚನೆಯಾಗಿ ರಾಷ್ಟ್ರಪತಿಗಳ ಅಂಕಿತ ಪಡೆಯುವಲ್ಲಿಯ ವರೆಗಿನ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ ರಾಜ್ಯ ಮತ್ತು ಕೇಂದ್ರ ಸರಕಾರದ ಸಚಿವರು, ಅಧಿಕಾರಿಗಳು, ಮಸೂದೆಗೆ ಅನುಮೋದನೆ ಪಡೆಯುವಲ್ಲಿ ಶ್ರಮಿಸಿದ, ಸಹಕರಿಸಿದ, ಬೆಂಬಲಿಸಿದ ಎಲ್ಲ ಜನಪ್ರತಿನಿಧಿಗಳಿಗೆ, ಸಂಘ-ಸಂಸ್ಥೆಗಳಿಗೆ, ಕಂಬಳ ಸಂಘಟಕರಿಗೆ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಬಾಕೂìರು ಶಾಂತಾ ರಾಮ ಶೆಟ್ಟಿ, ಕಂಬಳ ಅಕಾಡೆಮಿ ಸಂಚಾಲಕ ಕೆ. ಗುಣಪಾಲ್ ಕಡಂಬ, ಉಪ್ಪಿನಂಗಡಿ ವಿಜಯ ವಿಕ್ರಮ ಕಂಬಳ ಸಮಿತಿ ಅಧ್ಯಕ್ಷ , ಕಂಬಳದ ಬಗ್ಗೆ ಕಾನೂನು ಸಮರ ನಡೆಸುತ್ತಿರುವ ಅಶೋಕ್ ರೈ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.