Advertisement

ಜಿಲ್ಲೆಯಲ್ಲಿನ ಸಾಂಪ್ರದಾಯಿಕ ಜಲಮೂಲ ಸಂರಕ್ಷಿಸಿ

09:57 PM Aug 28, 2019 | Lakshmi GovindaRaj |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಉಲ್ಬಣಿಸಿರುವ ತೀವ್ರ ಬರಗಾಲವನ್ನು ಸಮರ್ಥವಾಗಿ ಎದುರಿಸಬೇಕಾದರೆ ಶಾಶ್ವತ ಜಲಮೂಲಗಳ ಸಂರಕ್ಷಣೆ ಜೊತೆಗೆ ಸಾಂಪ್ರದಾಯಿಕ ಜಲ ಮೂಲಗಳಾದ ಕೆರೆ, ಕುಂಟೆ, ಜಲಾಶಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಒತ್ತು ಕೊಡಬೇಕಿದೆ ಎಂದು ಕೇಂದ್ರ ಜಲಶಕ್ತಿ ತಂಡದ ಮುಖ್ಯಸ್ಥ ಕೇಂದ್ರ ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಪರ ಕಾರ್ಯದರ್ಶಿ ಪಂಕಜ್‌ ಕುಮಾರ್‌ ಜಿಲ್ಲಾಡಳಿತಕ್ಕೆ ಸಲಹೆ ನೀಡಿದರು.

Advertisement

ಜಿಲ್ಲೆಯ ವಿವಿಧ ತಾಲೂಕುಗಳಿಗೆ ಬುಧವಾರ ಭೇಟಿ ನೀಡಿದ ಬಳಿಕ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಂಜೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಜಿಲ್ಲೆಯ ಅಂತರ್ಜಲ ಪರಿಸ್ಥಿತಿ ಕುರಿತು ಸಭೆ ನಡೆಸಿ ಜಿಲ್ಲೆಯ ಕೆರೆ, ಕುಂಟೆಗಳ ಸದ್ಯದ ಪರಿಸ್ಥಿತಿ, ನೀರಿನ ಸಂಗ್ರಹ, ಕುಡಿಯುವ ನೀರಿನ ಸಮಸ್ಯೆ ಕುರಿತು ಪ್ರಾತ್ಯಕ್ಷಿಕೆ ಪಡೆದ ಬಳಿಕ ಅವರು ಮಾತನಾಡಿದರು.

ಶಾಶ್ವತ ಜಲ ಸಂರಕ್ಷಣೆಗೆ ಯೋಜನೆ ಅಗತ್ಯ: ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಮಳೆ ಪ್ರಮಾಣ ಕುಸಿದಿರುವುದರಿಂದ ಕುಡಿಯುವ ನೀರಿನ ಅಭಾವ ತೀವ್ರವಾಗಿದೆ. ಮಳೆಯ ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿ ಎದುರಿಸಬೇಕಾಗುತ್ತದೆ. ಆದ್ದರಿಂದ ಈಗಿನಿಂದಲೇ ಎದುರಾಗುವ ನೀರಿನ ಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಶಾಶ್ವತ ಜಲ ಸಂರಕ್ಷಣೆಗೆ ಯೋಜನೆ ರೂಪಿಸುವುದರ ಜೊತೆಗೆ ಸಾಂಪ್ರದಾಯಿಕ ಜಲ ಮೂಲಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕಿದೆ ಎಂದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡುವ ಅನುದಾನದಲ್ಲಿ ಹೆಚ್ಚಿನ ಹಣವನ್ನು ಅಂತರ್ಜಲ ವೃದ್ಧಿಸುವ ಕಾಮಗಾರಿಗಳಿಗೆ ಬಳಸಿಕೊಳ್ಳಬೇಕು. ಜಿಲ್ಲೆಯ ನೀರಿನ ಪರಿಸ್ಥಿತಿ ಹಾಗೂ ಅಂತರ್ಜಲ ಪರಿಸ್ಥಿತಿ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.

403 ಹಳ್ಳಿಗಳಲ್ಲಿ ನೀರಿನ ಸಮಸ್ಯೆ: ಸಭೆಯಲ್ಲಿ ಉಪಸ್ಥಿತರಿದ್ದ ಜಿಪಂ ಸಿಇಒ ಬಿ.ಫೌಜಿಯಾ ತರನ್ನುಮ್‌ ಮಾತನಾಡಿ, ಜಿಲ್ಲೆಯಲ್ಲಿ 1,513 ಹಳ್ಳಿಗಳಿದ್ದು, 403 ಹಳ್ಳಿಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ. 162 ಟ್ಯಾಂಕರ್ ಮೂಲಕ ದಿನಕ್ಕೆ ಒಟ್ಟಾರೆ 352 ಟ್ರಿಪ್‌ಗ್ಳ ನೀರು ಸರಬರಾಜು ಮಾಡಲಾಗುತ್ತಿದೆ. 241 ಖಾಸಗಿ ಬೋರ್‌ವೆಲ್‌ಗ‌ಳ ಮತ್ತು 162 ಟ್ಯಾಂಕರ್ಗಳು ಮೂಲಕ ಹಳ್ಳಿಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಕೇಂದ್ರದ ಜಲಶಕ್ತಿ ಮಾದರಿಯಲ್ಲಿಯೇ ಜಲಾಮೃತ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ ಎಂದು ತಿಳಿಸಿದರು.

ನೀರಿನ ಸಂರಕ್ಷಣೆ ಕುರಿತು ಅರಿವು: ಜಲಶಕ್ತಿ ಮತ್ತು ಜಲಾಮೃತ ಕಾರ್ಯಕ್ರಮಗಳನ್ನು ಒಗ್ಗೂಡಿಸಿ ಜಿಲ್ಲೆಯ ಜಲ ಮೂಲಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಈಗಾಗಲೇ ಅನೇಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಧಿಕಾರಿಗಳು, ಸಿಬ್ಬಂದಿ ಹಳ್ಳಿ ಹಳ್ಳಿಗೆ ಭೇಟಿ ನೀಡಿ ನೀರಿನ ಸಂರಕ್ಷಣೆ ಕುರಿತು ಅರಿವು ಮೂಡಿಸುತ್ತಿದ್ದಾರೆ ಎಂದರು.

Advertisement

ಮಳೆ ನೀರು ಕೊಯ್ಲುಗೆ ಪ್ರೋತ್ಸಾಹಧನ: ನೀರು ಸಂರಕ್ಷಣೆಗಾಗಿ ಜಿಲ್ಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಮಳೆ ನೀರು ಕೊಯ್ಲು ಅಳವಡಿಕೆ ಕಡ್ಡಾಯಗೊಳಿಸಿ ಅ.10 ರೊಳಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ. ಈ ಸಂಬಂಧ ಚಿಲುಮೆ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಇದರಡಿ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳು ಶೇ.3 ರಷ್ಟು ಅನುದಾನವನ್ನು ಕಾಮಗಾರಿಗಳಿಗೆ ಹಾಗೂ ಶೇ.5 ರಷ್ಟು ಅನುದಾನ ನೀರು ಸಂರಕ್ಷಣಾ ಕಾಮಗಾರಿಗೆ ಮೀಸಲಿಡಲಾಗಿದೆ. ಮೀಸಲಿರಿಸಿರುವ ಹಣವನ್ನು ಎಲ್ಲಾ ಮನೆಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಕೆಗೆ ಪ್ರೋತ್ಸಾಹಧನವನ್ನಾಗಿ ನೀಡಲಾಗುತ್ತದೆ ಎಂದರು.

44 ಚೆಕ್‌ ಡ್ಯಾಂಗಳು ಪೂರ್ಣ: ಜಿಲ್ಲೆಯಲ್ಲಿ ಈಗಾಗಲೇ 228 ಮಲ್ಟಿ ಚೆಕ್‌ ಡ್ಯಾಂಗಳನ್ನು ಪೂರ್ಣಗೊಳಿಸಲಾಗಿದೆ. 479 ಚೆಕ್‌ ಡ್ಯಾಂಗಳನ್ನು ಕಾಮಗಾರಿಗೆ ಗುರುತಿಸಲಾಗಿದೆ. ಆ ಪೈಕಿ 97 ಚೆಕ್‌ ಡ್ಯಾಂಗಳ ಕಾಮಗಾರಿ ಪ್ರಾರಂಭಿಸಲಾಗಿದೆ. ಈಗಾಗಲೇ 44 ಚೆಕ್‌ ಡ್ಯಾಂಗಳು ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ ಒಟ್ಟು 149 ಕಲ್ಯಾಣಿಗಳಿದ್ದು, 107 ಕಲ್ಯಾಣಿಗಳನ್ನು ಸ್ವತ್ಛಗೊಳಿಸಿದ್ದು, 42 ಕಲ್ಯಾಣಿಗಳನ್ನು ಸ್ವತ್ಛಗೊಳಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.

ಸಭೆಯಲ್ಲಿ ಕೇಂದ್ರ ಆಯುಷ್‌ ಸಚಿವಾಲಯದ ನಿರ್ದೇಶಕ ಶಶಿ ರಂಜನ್‌ ಕುಮಾರ್‌, ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ನಿರ್ದೇಶಕ ಮನೋಜ್‌ ಕುಮಾರ್‌ ಗಂಗೇಯಾ, ಕೇಂದ್ರ ಅಂತರ್ಜಲ ಮಂಡಳಿಯ ತಾಂತ್ರಿಕ ಅಧಿಕಾರಿ ಆರ್‌ ರಾಕಿ, ದಿಲೀಪ್‌, ಅಪರ ಜಿಲ್ಲಾಧಿಕಾ ಆರತಿ, ಜಿಲ್ಲಾ ನಗರಾಭಿವೃದ್ಧಿ ಯೋಜನಾಧಿಕಾರಿ ರೇಣುಕಾ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ರೂಪಾ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನೀರಿನ ಸಂರಕ್ಷಣೆಗಾಗಿ ಸಾಂಪ್ರದಾಯಿಕ ಕಲ್ಯಾಣಿಗಳನ್ನು ಶುದ್ಧೀಕರಣ ಮಾಡಿರುವುದು ಮಹತ್ವವಾಗಿದೆ. ಚೆಕ್‌ ಡ್ಯಾಂಗಳ ನಿರ್ಮಾಣ, ಮಳೆ ನೀರು ಕೊಯ್ಲು ಅಳವಡಿಕೆ ಸೇರಿದಂತೆ ಜಲಮೂಲ ಸಂರಕ್ಷಣೆಗೆ ಮುಂದಾಗಿರುವುದು ಶ್ಲಾಘನೀಯ. ಶಾಶ್ವತ ಜಲ ಮೂಲ ರಕ್ಷಣೆಗೂ ಆದ್ಯತೆ ನೀಡಿ ಜನರಲ್ಲಿ ನೀರು ಸಂರಕ್ಷಣೆ ಕುರಿತು ಅರಿವು ಮೂಡಿಸಲು ಕ್ರಮ ವಹಿಸಬೇಕು.
-ಪಂಕಜ್‌ ಕುಮಾರ್‌, ಕೇಂದ್ರ ಜಲಶಕ್ತಿ ತಂಡದ ಮುಖ್ಯಸ್ಥರು

Advertisement

Udayavani is now on Telegram. Click here to join our channel and stay updated with the latest news.

Next