Advertisement

ಗಿಡ ನೆಡುವುದರ ಜತೆಗೆ ಸಂರಕ್ಷಣೆಯೂ ಮುಖ್ಯ : ಕಾರಂತ

06:00 AM Jun 08, 2018 | |

ಮಧೂರು: ಪರಿಸರವನ್ನು ಉಳಿಸಿ ಬೆಳೆಸುವ ಮೂಲಕ ವ್ಯಕ್ತಿತ್ವ ಮನುಷ್ಯ ತನ್ನ ಭವಿಷ್ಯದ ಅನೇಕ ಅಪಾಯಗಳನ್ನು ತಪ್ಪಿಸಬಹುದು. ಪರಂಪರಾಗತವಾಗಿ ಬಂದ ಸಂಪತ್ತಾದ ಪರಿಸರವನ್ನು ಉಳಿಸಿ ಮುಂದಿನ ತಲೆಮಾರಿಗೆ ಹಸ್ತಾಂತರಿಸುವುದು ಪ್ರತಿಯೊಬ್ಬನ ಕರ್ತವ್ಯ. 

Advertisement

ಪರಿಸರವನ್ನು ಉಳಿಸುವುದು ಪ್ರತಿಯೊಬ್ಬನ ಮೂಲಭೂತ ಹಕ್ಕು ಎಂದು ಪರಿಗಣಿಸದಿದ್ದಲ್ಲಿ ಅದು ಪ್ರಕೃತಿಯ ಅಧೋಗತಿಗೆ ಕಾರಣವಾಗುತ್ತೆ. ವಿಶ್ವ ಪರಿಸರ ದಿನ ಗಿಡಗಳನ್ನು ನೆಡುವುದು ಮುಖ್ಯ ವಿಷಯವಲ್ಲ. ನೆಟ್ಟ ಗಿಡಗಳನ್ನು ಸಂರಕ್ಷಿಸಿ ಉಳಿಸಿಕೊಳ್ಳುವುದು ಅತೀಅಗತ್ಯ. ಆ ಕೆಲಸವನ್ನು ಕಾಸರಗೋಡಿನ ಸಿರಿ ಚಂದನ ಕನ್ನಡ ಯುವ ಬಳಗ ಮಾಡುತ್ತಿರುವುದು ನಿಜವಾಗಿಯೂ ಶ್ಲಾಘನೀಯ ಎಂದು ಕೃಷಿಕ, ಪರಿಸರ ಪ್ರೇಮಿ ದೇಶಮಂಗಲ ಜಯರಾಮ ಕಾರಂತ ಅವರು ನುಡಿದರು.

ಸಿರಿ ಚಂದನ ಕನ್ನಡ ಯುವ ಬಳಗದ ನೇತೃತ್ವದಲ್ಲಿ ಮಧೂರು ಸಮೀಪದ ಕರೋಡಿಯ ವೆಂಕಟೇಶ ನಿಲಯದಲ್ಲಿ ನಡೆದ “ಕನ್ನಡ ಕಂದನ ಸಿರಿ ಚಂದನ ಗಿಡ‌’ ಯೋಜನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಿರಿಚಂದನ ಕನ್ನಡ ಯುವಬಳಗ‌ದ ಪರಿಸರ ಸಂರಕ್ಷಣಾ ಸಮಿತಿ  ಸಂಚಾಲಕ ಕೀರ್ತನ್‌ ಕುಮಾರ್‌ ಸಿ.ಎಚ್‌ ಮಾತನಾಡಿ ಪ್ರಸಕ್ತ ಕಾಲಘಟ್ಟದ ಅನಿವಾರ್ಯತೆಗಳಲ್ಲಿ ಒಂದಾದ ಪರಿಸರ ಸಂರಕ್ಷಣೆಯನ್ನು ಕೈಲಾದ ರೀತಿಯಲ್ಲಿ ಮತ್ತು ಅರ್ಥಪೂರ್ಣವಾಗಿ ನಡೆಸಲು ತೀರ್ಮಾನಿಸಿದ್ದೇವೆ. ಈ ಪ್ರಯುಕ್ತ ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ಜಿಲ್ಲೆಯ ಬೇರೆ ಬೇರೆ ಭಾಗದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿಯುತ್ತಿರುವ ಆರು ಮಂದಿ ಕನ್ನಡ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ಅವರ ಮನೆಗಳಿಗೆ ತೆರಳಿ ಆಯಾ  ಮಗುವಿನ ಹೆಸರಲ್ಲಿ,  ಮಗುವಿನ ಮನೆಯ ಹಿತ್ತಲಲ್ಲಿಯೇ ತಲಾ ಎರಡೆರಡು ಗಿಡಗಳನ್ನು ನೆಡುವ ಯೋಜನೆಯೊಂದನ್ನು ಬಳಗವು ಈ ವರ್ಷದಿಂದ ಹಮ್ಮಿಕೊಂಡಿದೆ. ಸಾಮಾನ್ಯವಾಗಿ ಇಂತಹ ವಿಶೇಷ ಆಚರಣೆಗಳು  ಇಂದು ಬರೇ ಆಚರಣೆ ಯಾಗಿ ಮಾತ್ರ ಉಳಿದಿದ್ದು, ಗಿಡ ನೆಡುವ ಕಾರ್ಯ ಮಾತ್ರ ಇಂದು ಪರಿಸರ ದಿನಾಚರಣೆಯ ಬಾಬ್ತು ನಡೆಯುತ್ತಿದೆಯೇ ವಿನಾ ಅದರ ಸಂರಕ್ಷಣೆಯ ಬಗೆಗೆ ಯಾವ ಯೋಚನೆ, ಯೋಜನೆಯೂ ಇಲ್ಲದ ಕಾರಣ ನೆಟ್ಟಗಿಡ ಕೆಲವೇ ದಿನಗಳಲ್ಲಿ ನಾಶವಾಗಿ ಹೋಗುವುದನ್ನು ಕಾಣುತ್ತೇವೆ. ಬಳಗ ಮಾಡುವ ಕಾರ್ಯಇತರರಿಗೆ ಪ್ರೇರಣೆಯಾಗಬೇಕೆಂಬ ಇಚ್ಛೆಯಿಂದ ಶ್ರಮದಾಯಕವಾದರೂ   ನಾವೆಲ್ಲ    ನಮ್ಮ ಸ್ವಲ್ಪ ಸಮಯವನ್ನು ಇದಕ್ಕಾಗಿ ಮೀಸಲಾಗಿರಿಸಿದ್ದೇವೆ ಎಂದರು.

ಬಳಗದ ಮಾರ್ಗದರ್ಶಕರೂ ಪ್ರಾಧ್ಯಾಪಕರೂ ಆದ ಡಾ| ರತ್ನಾಕರ ಮಲ್ಲಮೂಲೆ ಮಾತನಾಡಿ ಸಿರಿಚಂದನ ಕನ್ನಡ ಯುವ ಬಳಗವು ಮಾಡಿದ ಕೆಲಸ ಕಾರ್ಯಗಳು ಔಚಿತ್ಯಪೂರ್ಣವಾಗಿರಬೇಕೆಂಬ ಉದ್ದೇಶದಿಂದ ಮತ್ತು ಸಾಮಾನ್ಯ ಶಾಲೆಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಸದುದ್ದೇಶದಿಂದ ಇಂತಹ ಯೋಜನೆಯೊಂದನ್ನು ಬಳಗವು ಹಮ್ಮಿಕೊಂಡಿದ್ದು, ಜಿಲ್ಲೆಯ ವಿವಿಧ ಭಾಗಗಳ ವಿದ್ಯಾರ್ಥಿಗಳ ಮನೆಗೆ ತೆರಳಿ ಅವರ ಹೆಸರಿನಲ್ಲಿಯೇ ಅವರ ಹಿತ್ತಲಲ್ಲಿ ಗಿಡ ನೆಡುವ ಯೋಜನೆಯನ್ನು ಮಾಡಿದ್ದೇವೆ. ಈ ಪ್ರಕ್ರಿಯೆಯನ್ನು ಪ್ರತಿ ವರ್ಷ ಮುಂದುವರಿಸಿಕೊಂಡು ಹೋಗುವ ಯೋಜನೆ ಬಳಗದೆದುರಿಗಿದೆ. ಆ ಗಿಡದ ಸಂರಕ್ಷಣೆಯ ಹೊಣೆಯನ್ನು ಮಗುವಿಗೆ ವಹಿಸಿಕೊಟ್ಟು ಮಗುವಿಗೆ ಗಿಡದ ಬಗ್ಗೆ ಸದಾ ನೆನಪಿಡಲು ಮನೆಯ ಗೋಡೆಗೆ ತೂಗು ಹಾಕಲು ನೆನಪಿನ ಪ್ರಮಾಣ ಪತ್ರವೊಂದನ್ನು  ನೀಡಲಾಗುತ್ತದೆ. ಬಳಿಕ ಮೂರು ವರ್ಷ ಕಳೆದು ಅದೇ ಮನೆಗೆ ಬಳಗದ ಕಾರ್ಯಕರ್ತರು ಭೇಟಿ ನೀಡಿ, ನೆಡಲಾದ “ಕನ್ನಡ ಕಂದನ ಸಿರಿಚಂದನ’ಎಂಬ ಹೆಸರಿನ ಈ ಎರಡು ಗಿಡಗಳಲ್ಲಿ ಕನಿಷ್ಠ ಒಂದರ ಸಂರಕ್ಷಣೆಯಾದರೂ ಸಮರ್ಪಕವಾಗಿದ್ದಲ್ಲಿ ಆ ವಿದ್ಯಾರ್ಥಿಯನ್ನು ಬಳಗವು ಸಾರ್ವಜನಿಕ ಕಾರ್ಯಕ್ರಮದಲ್ಲಿ ಅಭಿನಂದಿಸುವುದು ಈ ಮೂಲಕ ಮಗುವಿನಲ್ಲಿ ಪರಿಸರದ ಕುರಿತು ಎಳವೆಯಲ್ಲಿಯೇ ಕಾಳಜಿ ಮೂಡಿಸುವುದು ಬಳಗದ ಮತ್ತೂಂದು ಉದ್ದೇಶ ಎಂದರು.

ಮಧೂರು ಸರಕಾರಿ ಕಿರಿಯ ಬುನಾದಿ ಶಾಲೆಯ ಅಧ್ಯಾಪಿಕೆಯರಾದ ದೇವಕಿದೇವಿ, ಪ್ರಮೀಳಾ, ಬಳಗದ ಅಧ್ಯಕ್ಷ ರಕ್ಷಿತ್‌ ಪಿ.ಎಸ್‌., ಗೌರವ ಸಲಹೆಗಾರ ಸುಕುಮಾರ ಕುದ್ರೆಪ್ಪಾಡಿ ನಲು°ಡಿಗಳನ್ನಾಡಿದರು. ಗಿಡದ ಸಂರಕ್ಷಣೆಯನ್ನು ಮನೆಯವರ ಸಹಾಯದೊಂದಿಗೆ ಜವಾಬ್ದಾರಿಯಿಂದಲೇ ಮಾಡುವುದಾಗಿ ಕುಮಾರಿ ಹಿತಾ ಭರವಸೆ ನೀಡಿದರು. ಸುಕುಮಾರ ಕುದ್ರೆಪ್ಪಾಡಿ ಪ್ರಮಾಣ ಪತ್ರವನ್ನು ಹಿತಾ ಅವರಿಗೆ ಹಸ್ತಾಂತರಿಸಿದರು. ಬಳಗದ ಪರಿಸರ ಸಂರಕ್ಷಣಾ ಸಮಿತಿ ಸಹ ಸಂಯೋಜಕ‌ ಸುಜಿತ್‌ ಉಪ್ಪಳ ಪ್ರಾರ್ಥಿಸಿದರು. 

Advertisement

ಬಳಗದ ಪರಿಸರ ಸಂರಕ್ಷಣಾ ಸಮಿತಿ ಸಹ ಸಂಯೋಜಕ ಪ್ರದೀಪ್‌ ಬಿ.ಎಸ್‌. ಸ್ವಾಗತಿಸಿ, ಸಿರಿ ಚಂದನ ಕನ್ನಡ ಯುವ ಬಳಗದ ಉಪಾಧ್ಯಕ್ಷ ಪ್ರಶಾಂತ್‌ ಹೊಳ್ಳ ವಂದಿಸಿದರು. ಜತೆ ಕಾರ್ಯದರ್ಶಿ ಸೌಮ್ಯಾ ಪ್ರಸಾದ್‌ ಕಾರ್ಯಕ್ರಮ ನಿರೂಪಿಸಿದರು. ಹಿತಾ ಅವರ ಮನೆಯ ಹಿತ್ತಲಲ್ಲಿ ಹಲಸು ಮತ್ತು ಸೀತಾಫಲಗಳ ಗಿಡಗಳನ್ನು ನೆಡಲಾಯಿತು. ಬಾಲಕೃಷ್ಣ ಬೆಳಿಂಜ, ಸುಶ್ಮಿತಾ ಆರ್‌, ವಿನೋದ್‌ಕುಮಾರ್‌ ಸಿ.ಎಚ್‌., ಅಜಿತ್‌ ಶೆಟ್ಟಿ ಬೋವಿಕಾನ, ಕಲ್ಯಾಣಿ, ಚಿದಂಬರ ಕೆ., ಪ್ರವೀಣ, ಸುನೀತಾ, ವೀಣಾ, ಜೀವಾ, ಜಿತಾಲಿ, ಗುರುಪ್ರಸಾದ್‌ ಸಿ., ಕಮಲಾ, ಶರಣ್ಯ, ಸಂದೀಪ್‌ ಮುಂತಾದವರು ಉಪಸ್ಥಿತರಿದ್ದರು.

ಪರಿಸರ ಸಂರಕ್ಷಣೆಯ ಕುರಿತು ಭಾಷಣಗಳಿಗೆ ಇವತ್ತೇನೂ ಕೊರತೆಯಿಲ್ಲ. ಜಾಗೃತಿಯೂ ನಡೆಯುತ್ತದೆ. ಗಿಡ ವಿತರಣೆಯಂತೂ ಒಂದು ದಿನ ಎಗ್ಗಿಲ್ಲದೆ ನಡೆಯುತ್ತದೆ. ಆದರೆ ಗಿಡ ನೆಡುವ ಮತ್ತು ನೆಟ್ಟಗಿಡವನ್ನು ಉಳಿಸುವ ಪ್ರಕ್ರಿಯೆ ಮಾತ್ರ ನಡೆಯುವುದಿಲ್ಲ. ತಳಮಟ್ಟಕ್ಕಿಳಿದು ಯೋಚಿಸುವ ಹಾಗೂ ಪ್ರಾಮಾಣಿಕವಾಗಿ ದುಡಿಯುವ ಮನಸ್ಸುಗಳಿಗೆ ಇಂದು ಕೊರತೆಯಿದೆ. ಎಷ್ಟು ಗಿಡಗಳನ್ನು ನೆಟ್ಟಿದ್ದೇವೆ ಎಂಬುದು ಮುಖ್ಯವಲ್ಲ.  ನೆಟ್ಟ ಗಿಡಗಳಲ್ಲಿ ಎಷ್ಟು ಬದುಕಿವೆ ಎಂಬುದು ಮುಖ್ಯ. ಜೈವಿಕ ಕೃಷಿಯ ಬಗ್ಗೆ ಅದರ ಮಹತ್ವಗಳ ಬಗ್ಗೆ ಭಾಷಣ ಮತ್ತು ಅದರ ಒಳಿತುಗಳ ಸಂದೇಶ ತಿಳಿಸುವುದರ ಜತೆಗೆ ನಾವೂ ನಮ್ಮ ಹಿತ್ತಿಲಲ್ಲಿ ಅದನ್ನು ಸಾಕಾರಗೊಳಿಸಬೇಕು. ಕಾಸರಗೋಡಿನ ಯುವಕರು ಪ್ರಾಧ್ಯಾಪಕರೊಬ್ಬರ ನೇತೃತ್ವದಲ್ಲಿ ಇಂತಹ ಪರಿಣಾಮಕಾರಿ ಯೋಜನೆಗಳನ್ನು ಹಮ್ಮಿ ಕೊಂಡು ಅದನ್ನು ಮನೆಮನೆಗೂ ತಲುಪಿಸುತ್ತಿರುವುದು ಉಳಿದವರಿಗೆ ಪ್ರೇರಣೆಯಾಗಿದೆ.
– ದೇಶಮಂಗಲ ಜಯರಾಮ ಕಾರಂತ

Advertisement

Udayavani is now on Telegram. Click here to join our channel and stay updated with the latest news.

Next