Advertisement

ಕ್ರೀಡಾಂಗಣದಲ್ಲಿನ ಕಾಮಗಾರಿಗಳಿಗೆ ಪ್ರಥಮಾದ್ಯತೆ ನೀಡಿ

10:41 AM Dec 02, 2018 | Team Udayavani |

ಕಲಬುರಗಿ: ನಗರದ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಎಚ್‌.ಕೆ.ಆರ್‌.ಡಿ.ಬಿ. ಅನುದಾನದಿಂದ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳಿಗೆ ಪ್ರಥಮಾದ್ಯತೆ ನೀಡಿ ಪೂರ್ಣಗೊಳಿಸಬೇಕು ಎಂದು ಅನುಷ್ಠಾನ ಏಜೆನ್ಸಿಗಳಿಗೆ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಹಾಗೂ ಎಚ್‌.ಕೆ.ಆರ್‌ .ಬಿ. ಕಾರ್ಯದರ್ಶಿ ಸುಬೋಧ ಯಾದವ ಸೂಚಿಸಿದರು. 

Advertisement

ನಗರದ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಕುರಿತು ಅನುಷ್ಠಾನ ಏಜೆನ್ಸಿ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕ್ರೀಡಾಂಗಣದಲ್ಲಿ ವಿವಿಧ ಮೂಲಭೂತ ಮತ್ತು ಕ್ರೀಡಾ ಚಟುವಟಿಕೆಗೆ ಪೂರಕವಾಗಿ ಹೈಕ ಮಂಡಳಿ ಹೆಚ್ಚಿನ ಅನುದಾನ ಖರ್ಚು ಮಾಡುತ್ತಿದೆ. ಆದರೆ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳದ ಕಾರಣ ಕ್ರೀಡಾಳುಗಳಿಗೆ ಇದರ ಸೌಲಭ್ಯ ದೊರಕುತ್ತಿಲ್ಲ. ಬ್ಯಾಡ್‌ಮಿಂಟನ್‌ ಹಾಲ್‌ಗೆ ಆರ್‌.ಸಿ.ಸಿ.ಶೀಟ್‌ ಅಳವಡಿಸಬೇಕಾಗಿದ್ದು, ಕೂಡಲೆ ಅಂದಾಜು ಪಟ್ಟಿ ಸಲ್ಲಿಸುವಂತೆ ಕೆ.ಆರ್‌.ಐ.ಡಿ.ಎಲ್‌ ಕಾರ್ಯನಿರ್ವಾಹಕ
ಅಭಿಯಂತರರಿಗೆ ಸೂಚಿಸಿದರು.

ಕ್ರೀಡಾಂಗಣದಲ್ಲಿ 5.06 ಲಕ್ಷ ರೂ. ವೆಚ್ಚದಲ್ಲಿ ಕ್ಯಾಂಟಿನ್‌ ನಿರ್ಮಿಸಲಾಗಿದ್ದು, ಕೂಡಲೆ ಟೆಂಡರ್‌ ಕರೆದು ಕ್ಯಾಂಟಿನ್‌ ಆರಂಭಿಸಿ. ಅಲ್ಲದೆ 11.20 ಲಕ್ಷ ರೂ. ವೆಚ್ಚದಲ್ಲಿ 8 ಕುಡಿಯುವ ನೀರಿನ ವಾಟರ್‌ ಕೂಲರ್‌ ಖರೀದಿಗೆ ಟೆಂಡರ್‌ ಕರೆಯಲಾಗಿದ್ದು, ಕ್ರೀಡಾಳುಗಳಿಗೆ ಅನುಕೂಲವಾಗುವಂತೆ ಆಯ್ದ ಸ್ಥಳದಲ್ಲಿ ಇವುಗಳನ್ನು ಅಳವಡಿಸಬೇಕು. ಕ್ರೀಡಾಂಗಣದ ಭದ್ರತೆಗೆ ಹೆಚ್ಚಿನ ಒತ್ತು ನೀಡಬೇಕೆಂದ ಪ್ರಾದೇಶಿಕ ಆಯುಕ್ತರು ಗೃಹ ರಕ್ಷಕ ದಳ ಸಿಬ್ಬಂದಿಯನ್ನು 24 ಗಂಟೆಗಳ ಕಾಲ ಭದ್ರತೆಗೆ ನಿಯೋಜಿಸಬೇಕು ಹಾಗೂ ಕ್ರೀಡಾಂಗಣದಲ್ಲಿ
ಎಚ್‌.ಕೆ.ಆರ್‌.ಡಿ.ಬಿ. ಅನುದಾನದಿಂದ ಕೈಗೊಂಡಿರುವ ಎಲ್ಲಾ ಕಾಮಗಾರಿಗಳ ಈಗಿನ ವಸ್ತುಸ್ಥಿತಿ ವರದಿಯನ್ನು ಮಂಡಳಿಗೆ
ಸಲ್ಲಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭೀಮರಾವ ನಂದ್ರೆ ಅವರಿಗೆ ನಿರ್ದೇಶನ ನೀಡಿದರು.

ಜುಡೋ ಹಾಲ್‌ ನಿರ್ಮಾಣ: ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಜುಡೋ, ಬಾಕ್ಸಿಂಗ್‌ ಮತ್ತು ರೆಸ್ಟಲಿಂಗ್‌ಗಾಗಿ ಜುಡೋ ಹಾಲ್‌ ನಿರ್ಮಿಸಲು ಉದ್ದೇಶಿಸಲಾಗಿದ್ದು, ಇದಕ್ಕೆ ಸ್ಥಳೀಯ ಶಾಸಕ, ಸಂಸದರ ನಿಧಿಯಿಂದ ಅನುದಾನ ಪಡೆಯಬೇಕು. ಅವಶ್ಯಕವಿದ್ದಲ್ಲಿ ಮಂಡಳಿಯಿಂದ ಹೆಚ್ಚಿನ ಅನುದಾನ ಒದಗಿಸಲಾಗುವುದು ಎಂದರು.

ಲೋಕೋಪಯೋಗಿ ಇಲಾಖೆಯ ಕಾರ್ಯನಿವಾಹಕ ಅಭಿಯಂತ ಅಮೀನ ಮುಕ್ತಾರ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಭೀಮರಾವ್‌, ಕೆ.ಆರ್‌.ಐ.ಡಿ.ಎಲ್‌ ಕಾರ್ಯನಿರ್ವಾಹಕ ಅಭಿಯಂತ ಧನ್ಯಕುಮಾರ, ಪಿ.ಆರ್‌.ಇ.ಡಿ. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ಇನ್ನಿತರ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next