ಉದಯವಾಣಿ ಸಮಾಚಾರ
ಲಕ್ಷ್ಮೇಶ್ವರ: ಪ್ರಧಾನಿ ಮೋದಿಯವರು ಮುಂದಿನ ಐದು ವರ್ಷಗಳಲ್ಲಿ ಬಡತನ ಮುಕ್ತ ಭಾರತ ಮಾಡಲಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.ಅವರು ತಾಲೂಕಿನ ಅಡರಕಟ್ಟಿ, ಗೊಜನೂರು ಗ್ರಾಮಗಳಲ್ಲಿ ರೋಡ್ ಶೋ ಮೂಲಕ ಚುನಾವಣಾ ಪ್ರಚಾರ ಮಾಡಿ ಮಾತನಾಡಿದರು.
ಪ್ರಧಾನಿ ಅವರು ಅಸಾಧ್ಯವಾದದ್ದನ್ನು ಸಾಧ್ಯ ಮಾಡಿದ್ದಾರೆ. ಅವರ ಜೆಜೆಎಂ ಯೋಜನೆಯಿಂದ ದೇಶದ ಪ್ರತಿ ಮನೆಗೂ ನಳದ ಮೂಲಕ ನೀರು ಬರುತ್ತಿದೆ. ನಮ್ಮ ಅವಧಿಯಲ್ಲಿ ರಾಜ್ಯದಲ್ಲಿ ಜೆಜೆಎಂ ಯೋಜನೆಗೆ 20 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದ್ದು, ಸುಮಾರು 75 ಲಕ್ಷ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ.
ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷವಾದರು ಯಾರೂ ಈ ರೀತಿ ಯೋಚಿಸಿರಲಿಲ್ಲ. ಸೂರಿಲ್ಲದ ಬಡವರಿಗೆ ಶಾಶ್ವತ ಮನೆ ನಿರ್ಮಾಣ, ಮನೆಗಳಿಗೆ ಉಜ್ವಲ ಗ್ಯಾಸ್, ಶೌಚಾಲಯ ನಿರ್ಮಾಣ ಮಾಡುವ ಮೂಲಕ ಮೋದಿ ಶಾಶ್ವತ ಗ್ಯಾರಂಟಿ ನೀಡಿದ್ದಾರೆ.ಮೋದಿಯವರು ಮುಂದಿನ ಐದು ವರ್ಷ ಮತ್ತೆ ಪ್ರಧಾನಿಯಾದರೆ ಬಡತನ ಮುಕ್ತ ಭಾರತ ಮಾಡುತ್ತಾರೆ ಎಂದರು.
ಕಾಂಗ್ರೆಸ್ ತಾತ್ಕಾಲಿಕ ಗ್ಯಾರಂಟಿ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಿತ್ರಾರ್ಜಿತ ಆಸ್ತಿ ಹಂಚಿಕೆ ಮಾಡುವುದಾಗಿ ಹೇಳುತ್ತಿದ್ದಾರೆ. ತಂದೆ ಆಸ್ತಿ ಮಗನಿಗೆ ಬರಬೇಕಾದರೆ ಸರ್ಕಾರಕ್ಕೆ ಶೇ 55ರಷ್ಟು ತೆರಿಗೆ ಕಟ್ಟಬೇಕು. ಇಲ್ಲದಿದ್ದರೆ ಅಷ್ಟು ಮೊತ್ತದ ಆಸ್ತಿ ಸರ್ಕಾರಕ್ಕೆ ಬಿಟ್ಟು ಕೊಡಬೇಕು. ನಮ್ಮ ತಾತ ಮುತ್ತಾತನ ಕಾಲದ ಆಸ್ತಿ ಸರ್ಕಾರಕ್ಕೆ ಕೊಡಿ ಎಂದು ಕೇಳಿದರೆ ಯಾರು ಕೊಡುತ್ತಾರೆ ಎಂದರು.
ನಮ್ಮ ಅವಧಿಯಲ್ಲಿ ಪ್ರವಾಹ ಬಂದಾಗ ನಾವು ಒಂದೇ ತಿಂಗಳಲ್ಲಿ 17 ಲಕ್ಷ ರೈತರ ಖಾತೆಗೆ ಪರಿಹಾರದ ಮೊತ್ತ ಜಮೆ ಮಾಡಿದ್ದೇವು. ಇವರು ಹತ್ತು ತಿಂಗಳಾದರೂ ಸರಿಯಾಗಿ ಪರಿಹಾರ ನೀಡಿಲ್ಲ. ರೈತರಿಗೆ ಪರಿಹಾರವಾಗಿ ಎರಡು ಸಾವಿರ ರೂಪಾಯಿ ಭಿಕ್ಷೆ ನೀಡಿದಂತೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ರೋಡ್ ಶೋನಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ಡಾ| ಚಂದ್ರು ಲಮಾಣಿ, ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಸುನಿಲ ಮಹಾಂತಶೆಟ್ಟರ, ಪ್ರವೀಣ ಬಾಳಿಕಾಯಿ, ಸೇರಿ ಮತ್ತಿತರಿದ್ದರು.