ಧಾರವಾಡ : ಮಕ್ಕಳ ವ್ಯಕ್ತಿತ್ವದ ಬಗ್ಗೆ ಅವರ ಬಾಲ್ಯದಲ್ಲಿಯೇ ಸಮಾಜ, ಶಿಕ್ಷಕರು ಮತ್ತು ಪಾಲಕರು ಗಮನಹರಿಸಿ ಮೌಲ್ಯಯುತ ಆರೋಗ್ಯಪೂರ್ಣ ಉತ್ತಮ ನಾಗರಿಕ ಪ್ರಜ್ಞೆಯ ಮಕ್ಕಳನ್ನು ರೂಪಿಸಬೇಕು ಎಂದು ಅಥಣಿಯ ಅಪ್ಪಾಸಾಹೇಬ ಅಲಿಬಾದಿ ಹೇಳಿದರು.
ಕವಿಸಂನಲ್ಲಿ ಕವಿ ಬಿ.ಕೆ. ಹೊಂಗಲ ದತ್ತಿ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಮಕ್ಕಳ ಶ್ರೇಷ್ಠ ಕವಿ ಪ್ರಶಸ್ತಿ-2020 ಹಾಗೂ 2021 ಪ್ರದಾನ ಸಮಾರಂಭ ಹಾಗೂ ಸದ್ಯದ ಪರಿಸ್ಥಿತಿಯಲ್ಲಿ ಮಕ್ಕಳ ಸಾಹಿತ್ಯ ಎಂಬ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಕ್ಕಳು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಬೆಳೆಯಬೇಕು. ಜಾತಿವಾದ, ಮೂಢನಂಬಿಕೆ ಹೊರತುಪಡಿಸಿ ಬೆಳೆಯಬೇಕು.
ಸಂಕೋಚಿತ ಮನೋಭಾವನೆಯಿಂದ ದೂರವಿರಬೇಕು. ಆ ನಿಟ್ಟಿನಲ್ಲಿ ಮಕ್ಕಳ ಸಾಹಿತ್ಯ ಸೃಷ್ಟಿಯಾಗಬೇಕು. ಮಕ್ಕಳ ವಯಸ್ಸಿಗೆ ಹಾಗೂ ಮುಂದಿನ ಭವಿಷ್ಯಕ್ಕನುಗುಣವಾಗಿ ಸಾಹಿತ್ಯ ಹುಟ್ಟಬೇಕು ಎಂದರು. ಪ್ರಶಸ್ತಿ ಪ್ರದಾನ ಮಾಡಿದ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಮಾತನಾಡಿ, ಮಕ್ಕಳ ಸಾಹಿತ್ಯ ವಿಶಿಷ್ಟವಾದ ಸಾಹಿತ್ಯವಾಗಿದೆ.
ಮಕ್ಕಳನ್ನು ಬಾಲ್ಯದಲ್ಲಿಯೇ ಸಾಹಿತ್ಯ, ಸಂಸ್ಕೃತಿ, ಕಲೆ, ನಮ್ಮ ನಾಡು-ನುಡಿಯೆಡೆಗೆ ಆಕರ್ಷಣೆ ಮಾಡಿ, ಮಕ್ಕಳಲ್ಲಿ ಈ ಕುರಿತು ಕೆಚ್ಚನ್ನು ಹುಟ್ಟಿಸುವ ಸಾಮರ್ಥ್ಯ ಮಕ್ಕಳ ಸಾಹಿತ್ಯಕ್ಕಿದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಮಾಜಿ ಸಂಸದ ಪ್ರೊ| ಐ.ಜಿ. ಸನದಿ ಮಾತನಾಡಿ, ಮಗು ಮೊದಲು ಸಮಾಜದ ಒಳ್ಳೆಯ ಮಾನವನಾಗಿ ಬೆಳೆಯಬೇಕು. ಅಂದಾಗ ಮಾತ್ರ ಆ ಮಗುವಿನ ಹುಟ್ಟಿಗೆ ಸಾರ್ಥಕತೆ ಬರುತ್ತದೆ. ಮಗು ದೇಶಪ್ರೇಮಿಯಾಗಬೇಕು. ಮಗು ದಯಾಗುಣವನ್ನು ಹೊಂದಿರಬೇಕು. ಮಗು ತಾಯಿಯ ಹೃದಯವಂತಿಕೆ ಹೊಂದಿರಬೇಕು. ಮಗು ಬಸವಣ್ಣನವರ ಕಾಯಕವೇ ಕೈಲಾಸ ನಾಣ್ಣುಡಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಗು ಸಮಾಜದಲ್ಲಿ ಎಲ್ಲರಿಗಿಂತ ಸಣ್ಣವ ಎನ್ನುವ ಮನೋಭಾವನೆಯಿಂದ ಬೆಳೆಯಬೇಕು.
ಅಂದಾಗ ಮಾತ್ರ ಆ ಮಗು ದೇಶದ ಸಂಪತ್ತಾಗಿ ಪರಿವರ್ತನೆಗೊಳ್ಳುತ್ತದೆ ಎಂದರು. ಕಸಾಪ ಜಿಲ್ಲಾಧ್ಯಕ್ಷ ಡಾ| ಲಿಂಗರಾಜ ಅಂಗಡಿ ಮಾತನಾಡಿದರು. ಲಕ್ಷ್ಮೇಶ್ವರದ ಮಹಾದೇವಪ್ಪ ಕೊತ್ತಲ ಅವರಿಗೆ 2020ನೇ ಸಾಲಿನ ಮಕ್ಕಳ ಶ್ರೇಷ್ಠ ಕವಿ ಪ್ರಶಸ್ತಿ ಹಾಗೂ ತುರಮರಿಯ ಬಿ.ವಿ. ನೇಸರಗಿ ಅವರಿಗೆ 2021ನೇ ಸಾಲಿನ ಮಕ್ಕಳ ಶ್ರೇಷ್ಠ ಕವಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಕವಿ ಬಿ.ಕೆ. ಹೊಂಗಲ ಇದ್ದರು. ಶಿ.ಮ. ರಾಚಯ್ಯನವರ ಸ್ವಾಗತಿಸಿದರು. ಸತೀಶ ತುರಮರಿ ಪರಿಚಯಿಸಿ, ನಿರೂಪಿಸಿದರು. ಪ್ರೊ| ಸೋಮು ದೊಡಮನಿ ವಂದಿಸಿದರು.