Advertisement

ತಂಗಾಳಿಯ ಅನುಭವ ನೀಡಿದ ಬಿರುಗಾಳಿ 

06:00 AM Aug 03, 2018 | Team Udayavani |

ದ್ವೇಷ ಮತ್ತು ಸೇಡನ್ನು ಸಮುದಾಯೀಕರಿಸುವ ವಿಕ್ಷಿಪ್ತ ವ್ಯಕ್ತಿಯ ನಿಯಂತ್ರಣಕ್ಕೆ ಸಿಲುಕುವ ಸಮುದಾಯವು ಕೊನೆಗೆ ಎಲ್ಲವನ್ನು ಮರೆತು ದ್ವೇಷವನ್ನು ಮೆರೆಯುವ, ಪ್ರೀತಿಗೆ ತಲೆಬಾಗುವ , ಸ್ನೇಹಕ್ಕೆ ಕೈಚಾಚುವುದರೊಂದಿಗೆ ಬಿರುಗಾಳಿ ಶಮನವಾಗುತ್ತದೆ. ಯುವ ಪ್ರೇಮಿಗಳ ಪ್ರೀತಿಯೇ ದ್ವೇಷವನ್ನು ಮರೆಮಾಡಲು ಕಾರಣವಾಯಿತು. 

Advertisement

ಮಂಗಳೂರಿನ ಸೈಂಟ್‌ ಅಲೋಶಿಯಸ್‌ ಕಾಲೇಜಿನ ನಾಟಕ ಸಂಘದ ವಿದ್ಯಾರ್ಥಿಗಳು ಇತ್ತೀಚೆಗೆ ಬಿರುಗಾಳಿಯನ್ನು ರಂಗಕ್ಕೆ ತಂದಿದ್ದರು. ಶೇಕ್ಸ್‌ಪೀಯರ್‌ನ ಟೆಂಪೆಸ್ಟ್‌ ನಾಟಕದ ಕನ್ನಡ ರೂಪಾಂತರವಾದ ಕುವೆಂಪು ರಚಿಸಿದ ಬಿರುಗಾಳಿ ನಾಟಕವನ್ನು ಯುವ ನಿರ್ದೇಶಕಿ ರಂಗಾಯಣದ ಜಯಶ್ರೀ ಇಡ್ಕಿದು ನಿರ್ದೇಶಿಸಿದ್ದರು. ಬಿರುಗಾಳಿ ಆರಂಭವಾಗುವುದೇ ದ್ವೇಷ , ವೈರತ್ವ , ಸೇಡಿನ ಸಂಚಿನ ಕಟ್ಟೆಯೊಡೆಯುವ ಮೂಲಕ . ಬಿರುಗಾಳಿಗೆ ಸಿಲುಕುವ ನಾವೆ , ಅದರಲ್ಲಿರುವ ಮಂದಿ ದಿಕ್ಕಾಪಾಲಾಗುವ ದೃಶ್ಯ ಸಂಯೋಜನೆ ರಂಗದಲ್ಲಿ ಬಿರುಗಾಳಿಯನ್ನೆ ಎಬ್ಬಿಸುವಂತೆ ಮೂಡಿ ಬಂದಿತ್ತು. 

 ದ್ವೇಷ ಮತ್ತು ಸೇಡನ್ನು ಸಮುದಾಯೀಕರಿಸುವ ವಿಕ್ಷಿಪ್ತ ವ್ಯಕ್ತಿಯ ನಿಯಂತ್ರಣಕ್ಕೆ ಸಿಲುಕುವ ಸಮುದಾಯವು ಕೊನೆಗೆ ಎಲ್ಲವನ್ನು ಮರೆತು ದ್ವೇಷವನ್ನು ಮೆರೆಯುವ , ಪ್ರೀತಿಗೆ ತಲೆಬಾಗುವ , ಸ್ನೇಹಕ್ಕೆ ಕೈಚಾಚುವುದರೊಂದಿಗೆ ಬಿರುಗಾಳಿ ಶಮನವಾಗುತ್ತದೆ. ಅಷ್ಟಕ್ಕೂ ಯುವ ಪ್ರೇಮಿಗಳ ನಿರ್ಮಲ ಪ್ರೀತಿಯೇ ಅಲ್ಲಿ ದ್ವೇಷವನ್ನು ಮರೆ ಮಾಡಲು ಕಾರಣವಾಯಿತು. 

ಕೆಳದಿಯ ರಾಜನಾದ ರಾಜೇಂದ್ರ ನಾಯಕನ ನೌಕೆಯು ಬಿರುಗಾಳಿಯ ಅಬ್ಬರಕ್ಕೆ ಸಿಲುಕುತ್ತದೆ. ನೌಕೆಯಲ್ಲಿದ್ದ ರಾಜನ ಪರಿವಾರ ದಿಕ್ಕಾಪಾಲಾಗುತ್ತದೆೆ. ಸಾಗರ ತೀರದ ಅರಣ್ಯದ ಗುಹೆಯೊಂದರಲ್ಲಿ ತಂದೆ ಮಗಳ ವಾಸವಿರುತ್ತದೆ. ಬಿರುಗಾಳಿಯ ಹೊಡೆತಕ್ಕೆ ಸಿಲುಕಿದ ನೌಕೆಯನ್ನು ಮಂತ್ರದಂಡದಿಂದ ಕಾಪಾಡುವಂತೆ ಮಗಳು ಗೌರ ತಂದೆ ಭೈರವ ನಾಯಕನ್ನು ಅಂಗಾಲಾಚುತ್ತಾಳೆ . ಆದರೆ ಭೈರವ ನಾಯಕ ಸ್ಪಂದಿಸುವುದಿಲ್ಲ. ರಾಜೇಂದ್ರ ನಾಯಕ ಸಹೋದರರೊಂದಿಗೆ ಒಂದು ತೀರ ಸೇರಿಕೊಂಡ , ಇನ್ನೊಂದು ತೀರದಲ್ಲಿ ಮಗ ಶಿವ ನಾಯಕನ ಅಲೆದಾಟ , ಮತ್ತೂಂದೆಡೆ ಬಾಣಸಿಗರ ಅಲೆದಾಟ. ಸಾಗರ ತೀರದ ಈ ಅಸಹಾಯಕ ಅಲೆದಾಟವು ಹಸಿವಿನ ಪ್ರಾಣ ಸಂಕಟದ ನಡುವೆ ಪ್ರತಿಯೊಬ್ಬರಲ್ಲಿಯೂ ರಾಜ ಗದ್ದುಗೆ ಏರುವ ಲೋಭವನ್ನು ಹುಟ್ಟುಹಾಕಿತ್ತು, ಅತ್ತ ತೀರದಲ್ಲಿ ಬಾಣಸಿಗರು ಕೂಡ ಗದ್ದುಗೆಯ ಮೇಲೆ ಕಣ್ಣಿಟ್ಟವರು. ಅಷ್ಟರಲ್ಲಿ ಕಪಿ ಶನಿಯೊಂದು ಬಾಣಸಿಗರ ಕೂಟ ಸೇರಿಕೊಳ್ಳುತ್ತದೆ. ಈ ಕಪಿಯಾದರೋ ತಂತ್ರಗಾರ ಗುಹೆಯಲ್ಲಿನ ನಿವಾಸಿಯಾಗಿರುವ ಭೈರವ ನಾಯಕನ ಗುಹೆಯ ಮೂಲ ನಿವಾಸಿ. ಅದಕ್ಕೆ ಬಾಣಸಿಗರ ಕೈಯಿಂದ ಸುರಪಾನಕ್ಕೆ ಕೈವೊಡ್ಡುವುದಷ್ಟೇ ಆಸೆ .

ಇತ್ತ ಯುವರಾಜ ಶಿವನಾಯಕ ತಂದೆಯನ್ನು ಅರಸುತ್ತಾ ಅಲೆದಾಡಿದವನು ಭೈರವ ನಾಯಕನ ಗುಹೆಯ ಸನಿಹ ತಲುಪುತ್ತಾನೆ. ಅಲ್ಲಿ ಮೊದಲ ನೋಟದಲ್ಲೇ ಭೈರವನ ಮಗಳು ಗಿರಿಕನ್ಯೆ ಗೌರಳೊಂದಿಗೆ ಪ್ರೇಮಪಾಶಕ್ಕೆ ಬೀಳುವ ಶಿವನಾಯಕ ತನಗರಿವಿಲ್ಲದಂತೆಯೇ  ಭೈರವ ನಾಯಕನ ಗೃಹಬಂಧಿಯಾಗುತ್ತಾನೆ. ಅಷ್ಟರಲ್ಲಿ ತನ್ನ ಮಂತ್ರದಂಡದ ಶಕ್ತಿಯಿಂದ ಎಲ್ಲವೂ ತಾಳಕ್ಕೆ ತಕ್ಕಂತೆ ನಡೆಯುತ್ತಿದೆ ಎಂಬ ಹುಮ್ಮಸ್ಸು ಭೈರವ ನಾಯಕನ ತಂತ್ರ-ಕುತಂತ್ರದ ಉತ್ಸಾಹವನ್ನು ಇಮ್ಮಡಿಗೊಳಿಸುತ್ತಲೇ ಇರುತ್ತದೆ. 

Advertisement

ಇನ್ನೂ ಅಲೆದಾಟದಲ್ಲೇ ಇರುವ ರಾಜೇಂದ್ರ ನಾಯಕ ಜನವಸತಿಯನ್ನು ಹುಡುಕುತ್ತಾ ಬಂದು ಭೈರವನ ಗುಹೆಯ ಮುಂದೆ ನಿಲ್ಲುತ್ತಾನೆ. ಅಲ್ಲಿ ಭೈರವ ನಾಯಕನನ್ನು ಕಂಡು ಅರಸ ರಾಜೇಂದ್ರ ನಾಯಕನಿಗೆ ಹಾಗೂ ಪರಿವಾರದವರಿಗೆ ಅಚ್ಚರಿಯಾಗುತ್ತದೆ. ವರ್ಷಗಳ ಹಿಂದಿನ ಘಟನೆಗಳು ನೆನಪಾಗುತ್ತವೆ. ಕೆಳದಿ ಸಂಸ್ಥಾನದ ಅರಸು ಪೀಠದ ಆಸೆಗಾಗಿ ರಾಜೇಂದ್ರ ನಾಯಕ ತನ್ನ ಸಹೋದರ ಭೈರವ ನಾಯಕನನ್ನು ಕೊಲ್ಲುವ ಸಂಚು ನಡೆಸಿದ್ದ. ಸಂಚು ಅರಿತ ಭೈರವ ನಾಯಕ ಪುಟ್ಟ ಮಗುವಿನೊಂದಿಗೆ ತಪ್ಪಿಸಿಕೊಂಡು ಅಡವಿ ಸೇರಿ ಕಪಿಯ ಗುಹೆಯಲ್ಲಿ ವಾಸವಾಗಿದ್ದ. ತಾನು ಮಾಡಿದ ದ್ರೋಹವನ್ನು ಕ್ಷಮಿಸುವಂತೆ ಅರಸ ರಾಜೇಂದ್ರ ನಾಯಕ ಬೇಡುತ್ತಾನೆ. ಇಷ್ಟರವೆಗೆ ರುಧ್ರ ಭಯಾನಕನಾಗಿದ್ದ ಭೈರವ ನಾಯಕ ಕರುಣಾಮಯಿಯಾಗುತ್ತಾನೆ. ಸಹೋದರನನ್ನು ಕ್ಷಮಿಸುತ್ತಾನೆ, ಜೊತೆಗೆ ರಾಜೇಂದ್ರ ನಾಯಕನ ಮಗ ಶಿವ ನಾಯಕನನ್ನು ಗೃಹಬಂಧನದಿಂದ ಬಿಡುಗಡೆ ಮಾಡಿ ಮಗಳು ಗೌರನನ್ನು ಶಿವನಾಯಕನ ಮದುಮಗಳಾನ್ನಾಗಿಸುತ್ತಾನೆ. 

ಭೈರವ ನಾಯಕನಾಗಿ ಮಿಂಚಿದ ಸುರೇಂದ್ರ ಕೊನೆ ತನಕ ಬಿರುಗಾಳಿಯನ್ನೇ ತನ್ನ ಹಿಡಿತದಲ್ಲಿ ಇರಿಸಿಕೊಂಡಿದ್ದರು , ಗೌರ ಪಾತ್ರಕ್ಕೆ ಶ್ವೇತಾ ಅರೆಹೊಳೆ ಹೊಳಪು ನೀಡಿದ್ದರು . ಬಾಣಸಿಗನ ಪಾತ್ರದಲ್ಲಿದ್ದ ಮೇಘನಾ ಕುಂದಾಪುರ ಅವರದ್ದು ಭರವಸೆ ಮೂಡಿಸಿದ ನಟನೆ . ವಿದ್ಯಾರ್ಥಿಗಳೇ ಶ್ರಮವಹಿಸಿ ರಂಗಪರಿಕರವನ್ನು ಸಿದ್ದಗೊಳ್ಳಿಸಿದ್ದರು. ಉತ್ತಮ ಬೆಳಕಿನ ಸಂಯೋಜನೆ ಇತ್ತು, ಬಿರುಗಾಳಿಗೆ ತಕ್ಕಂತೆ ಏರಿಳಿತ ಕಾಣುತ್ತಿದ್ದ ಸಂಗೀತ ಹಿತವಾಗಿತ್ತು. ಬಿರುಗಾಳಿಯ ಕೊನೆಗೆ ತಂಗಾಳಿಯ ಅನುಭವವಾಯಿತು. 

ತಾರಾನಾಥ್‌ ಗಟ್ಟಿ ಕಾಪಿಕಾಡ್‌ 

Advertisement

Udayavani is now on Telegram. Click here to join our channel and stay updated with the latest news.

Next