ಯಲಹಂಕ: ಅಂತಾರಾಷ್ಟ್ರೀಯ ವಿಮಾನನಿಲ್ದಾಣ ರಸ್ತೆಯ ವಾಹನ ದಟ್ಟಣೆ ಕಡಿಮೆ ಮಾಡಲು ಏರ್‌ಪೋರ್ಟ್‌ಗೆ ಮೆಟ್ರೋ ಸಂಪರ್ಕ ಕಲ್ಪಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ನಗರಾಭಿವೃದ್ದಿ ಸಚಿವರಾದ ಕೆ.ಜೆ.ಜಾರ್ಜ್ ಹೇಳಿದರು.
ಜಾಲ ಹೋಬಳಿಯ ಬೇಗೂರು ಗ್ರಾಮದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಿಲಾನ್ಯಾಸ ಹಾಗೂ ಸಂಕೇತಿಕ ಭೂ ಪರಿಹಾರ ವಿತರಣೆ ಮಾಡಿ ಮಾತನಾಡಿದ ಅವರು “ಏರ್ ಪೋರ್ಟ್ ರಸ್ತೆ ಬಳಕೆ ಮಾಡುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಶೇ.20ರಷ್ಟು ಹೆಚ್ಚಾಗುತ್ತಿದೆ. ವಾಹನ ದಟ್ಟಣೆ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಏರ್‌ಪೋರ್ಟ್‌ಗೆ ಮೆಟ್ರೋ ಸಂಪರ್ಕ ಕಲ್ಪಿಸಲು ಸರ್ಕಾರ ನಿರ್ಧರಿಸಿದ್ದು, ಈ ಕುರಿತು ನೀಲನಕ್ಷೆ ಮಂಜೂರಾತಿ ಪ್ರಗತಿಯಲ್ಲಿದೆ,” ಎಂದು ವಿವರಿಸಿದರು.
“ಇದರ ಜತೆಗೇ, ವಿಮಾನ ನಿಲ್ದಾಣ ರಸ್ತೆಗೆ ತಲುಪುವ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಉದ್ದೇಶವೂ ಇದೆ. ಇದರ ಮೂಲಕ ಏರ್‌ಪೋರ್ಟ್ ರಸ್ತೆಯ ದಟ್ಟಣೆಯನ್ನು ಕಡಿಮೆ ಮಾಡಲು ಸಾಧ್ಯವಿದೆ. ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಜನರ ಸಹಕಾರ ಅಗತ್ಯ,” ಎಂದರು.
ಕೃಷಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ ಕೆಂಪೇಗೌಡ ವಿಮಾನ ನಿಲ್ದಾಣ ಸುತ್ತ ಮುತ್ತಲ ಪರ್ಯಾಯ ರಸ್ತೆ ಅಭಿವೃದ್ದಿಗೆ ಭೂಮಿ ನೀಡಿರುವ ರೈತರಿಗೆ 65ಕೋಟಿ ರೂ. ಪರಿಹಾರ ನೀಡಲಾಗುತ್ತಿದೆ. ರೈತರ ಮನವಿ ಮೇರೆಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಒಂದು ಎಕರೆಗೆ 44ಲಕ್ಷ ರೂ. ಹೆಚ್ಚುವರಿ ಪರಿಹಾರ ನೀಡಲು ನಿರ್ಧರಿಸಲಾಗಿದೆ ಎಂದರು.
ಕಾಂಗ್ರೆಸ್‌ಗೆ ಮಸಿ ಬಳಿಯಲು ನಕಲಿ ಡೈರಿ ಬಿಡುಗಡೆ: ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಮಸಿ ಬಳಿಯಲು ಬಿಜೆಪಿಯವರು ಸುಳ್ಳು ಆರೋಪಗಳನ್ನು ಮಾಡುತ್ತಿದೆ. ಹೈಕಮಾಂಡ್ ಸಲ್ಲಿಸಿರುವ ಕಪ್ಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಬಿಡುಗಡೆ ಮಾಡಿರುವ ಡೈರಿ ನಕಲಿ. ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಕಾಂಗ್ರೆಸ್ ಸರ್ಕಾರದ ವಿರುದ್ದ ಸುಳ್ಳು ಆರೋಪ ಮಾಡುತ್ತಿದೆ ಎಂದು ವಾಗಾœಳಿ ನಡೆಸಿದರು.
ಉಕ್ಕಿನ ಸೇತುವೆ ನಿರ್ಮಾಣಕ್ಕೆ ಲಂಚ ಪಡೆಯಲಾಗಿದೆ ಎಂದು ಬಿಜೆಪಿ ಆರೋಪ ಮಾಡುತ್ತಿದೆ. ಆದರೆ, ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಈ ವರೆಗೆ ದಾಖಲೆಯನ್ನೇ ಬಿಡುಗಡೆ ಮಾಡಿಲ್ಲ. ಇದು ನಿಜವಾದರೆ ದಾಖಲೆ ಬಿಡುಗಡೆ ಮಾಡಲಿ
-ಕೆ.ಜೆ ಜಾರ್ಜ್, ಬೆಂಗಳೂರು ಅಭಿವೃದ್ಧಿ ಸಚಿವ