Advertisement

20 ಸಾವಿರ ಶಾಲೆಗಳಲ್ಲಿ ಎನ್‌ಇಪಿ ಜಾರಿಗೆ ಸಿದ್ಧತೆ

02:14 AM Feb 16, 2022 | Team Udayavani |

ಉಡುಪಿ: ಮುಂದಿನ ಶೈಕ್ಷಣಿಕ ಸಾಲಿನಿಂದ ರಾಜ್ಯದ 20 ಸಾವಿರ ಸರಕಾರಿ ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನುಷ್ಠಾನವಾಗಲಿದ್ದು, ಶಾಲೆಗಳ ಆಯ್ಕೆ ಪ್ರಕ್ರಿಯೆಯು ವಿಧಾನಮಂಡಲ ಅಧಿವೇಶನದ ಬಳಿಕ ಆರಂಭವಾಗುವ ಸಾಧ್ಯತೆಯಿದೆ. ಪದವಿ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನಿಂದಲೇ ಎನ್‌ಇಪಿ ಅನುಷ್ಠಾನ ಮಾಡಲಾಗಿದೆ.

Advertisement

ಶಾಲಾ ಹಂತದಲ್ಲಿ ಎನ್‌ಇಪಿ ಅನು ಷ್ಠಾನಕ್ಕೆ ಸಂಬಂಧ ನಿವೃತ್ತ ಐಎಎಸ್‌ ಅಧಿಕಾರಿ ಡಾ| ಮದನ್‌ಗೊàಪಾಲ್‌ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಇದರ ಶಿಫಾರಸಿನಂತೆ ಅನುಷ್ಠಾನ ಪ್ರಕ್ರಿಯೆಗಳು ನಡೆಯಲಿವೆ ಎಂದು ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಸುಮಾರು 42 ಸಾವಿರಕ್ಕೂ ಅಧಿಕ ಸರಕಾರಿ ಶಾಲೆಗಳಿವೆ. ಇತ್ತೀಚೆಗೆ ಆರಂಭವಾಗಿರುವ ಕರ್ನಾಟಕ ಪಬ್ಲಿಕ್‌ ಶಾಲೆಗಳ ಸಹಿತ ಕೆಲವೇ ಸರಕಾರಿ ಶಾಲೆಗಳಲ್ಲಿ ಮಾತ್ರ ಪೂರ್ವ ಪ್ರಾಥಮಿಕ ತರಗತಿಗಳಿವೆ. ಎನ್‌ಇಪಿ ಪೂರ್ವ ಪ್ರಾಥಮಿಕ ಹಂತದಿಂದಲೇ ಅನುಷ್ಠಾನ ಮಾಡಬೇಕಿರುವುದರಿಂದ ಶಿಕ್ಷಕರಿಗೆ ತರಬೇತಿ ಅತಿ ಅಗತ್ಯವಾಗಿದೆ.

ಪಠ್ಯಕ್ರಮ ಸಿದ್ಧತೆ
ಎನ್‌ಇಪಿ ಅನುಷ್ಠಾನದ ಹಿನ್ನೆಲೆಯಲ್ಲಿ ಹೊಸ ಪಠ್ಯಕ್ರಮ ಸಿದ್ಧಪಡಿಸಲಾಗುತ್ತಿದೆ. ಪಠ್ಯಕ್ರಮಗಳನ್ನು ಎನ್‌ಇಪಿ ಜಾರಿಗೆ ಬರುವ ಶಾಲೆಗಳಿಗೆ ಕಳುಹಿಸಿಕೊಡಲಾಗುತ್ತದೆ. ಸದ್ಯ 1ರಿಂದ 3ನೇ ತರಗತಿ ಮಕ್ಕಳಿಗೆ ನಲಿ-ಕಲಿ ಪಠ್ಯಕ್ರಮ ಇದೆ. ಹೊಸ ಪಠ್ಯಕ್ರಮದಲ್ಲೂ ನಲಿ-ಕಲಿ ಪಠ್ಯದ ಕೆಲವು ಭಾಗವನ್ನು ಉಳಿಸಿಕೊಂಡು ಇನ್ನಷ್ಟು ರಚನಾತ್ಮಕವಾಗಿ ಪಠ್ಯಕ್ರಮ ಸಿದ್ಧಪಡಲಾಗುತ್ತದೆ. ಯಾವೆಲ್ಲ ತರಗತಿಗೆ ಎನ್‌ಇಪಿ ಅನುಷ್ಠಾನ ಆಗಲಿದೆಯೋ ಅವೆಲ್ಲ ತರಗತಿಯ ಪಠ್ಯಕ್ರಮ ಬದಲಾವಣೆಯಾಗಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದ್ದಾರೆ.

ಖಾಸಗಿ ಶಾಲೆಗೆ ಒತ್ತಡವಿಲ್ಲ
ಎನ್‌ಇಪಿ ಜಾರಿಗೆ ತರುವ ನಿಟ್ಟಿನಲ್ಲಿ ಖಾಸಗಿ ಶಾಲೆಗಳಿಗೆ ಸರಕಾರದಿಂದ ಯಾವುದೇ ಒತ್ತಡ ಹೇರುವುದಿಲ್ಲ. ಸರಕಾರಿ ಶಾಲೆಗಳಲ್ಲಿ ಅನುಷ್ಠಾನಕ್ಕೆ ಆದ್ಯತೆ ನೀಡುತ್ತಿದ್ದೇವೆ. ಯಾವುದೇ ಖಾಸಗಿ ಅಥವಾ ಅನುದಾನಿತ ಶಾಲಾಡಳಿತ ಮಂಡಳಿ ಎನ್‌ಇಪಿ ಅನುಷ್ಠಾನಕ್ಕೆ ಮುಂದೆ ಬಂದಲ್ಲಿ, ಸಿದ್ಧಪಡಿಸಿರುವ ಪಠ್ಯಕ್ರಮವನ್ನು ನೀಡಲಿದ್ದೇವೆ. ನಿಯ
ಮಾನುಸಾರ ಆ ಶಾಲಾಡಳಿತ ಮಂಡಳಿಗಳು ಅದನ್ನು ಅನುಷ್ಠಾನ ಮಾಡಬೇಕಾಗುತ್ತದೆ ಎಂದು ಶಿಕ್ಷಣ ಇಲಾಖೆ ಉನ್ನತ ಮೂಲಗಳು ತಿಳಿಸಿವೆ.

Advertisement

ತರಬೇತಿ ಅಗತ್ಯ
ಎನ್‌ಇಪಿ ಅನುಷ್ಠಾನಕ್ಕೆ ಸರಕಾರ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದರೂ ಶಿಕ್ಷಕರಿಗೆ ಇನ್ನೂ ತರಬೇತಿ ನೀಡಿಲ್ಲ. ಕೇಂದ್ರ ಸರಕಾರದ ಮಹತ್ವದ ನಿರ್ಧಾರಗಳಲ್ಲಿ ಎನ್‌ಇಪಿ ಅನುಷ್ಠಾನವೂ ಒಂದು. ಪದವಿ ಕಾಲೇಜುಗಳಲ್ಲಿ ಅನುಷ್ಠಾನ ಮಾಡಿದ್ದರೂ ಹಲವು ತಾಂತ್ರಿಕ ಸಮಸ್ಯೆಗಳು ಈಗಲೂ ಜೀವಂತ ವಾಗಿವೆ. ಪ್ರಾಥಮಿಕ ಹಂತದಲ್ಲಿ ಅನುಷ್ಠಾನ ಮಾಡುವಾಗ ಯಾವುದೇ ತಾಂತ್ರಿಕ ಸಮಸ್ಯೆ ಎದುರಾಗದಂತೆ ಎಚ್ಚರ ವಹಿ ಸುವುದು ಅಗತ್ಯ. ಈ ನಿಟ್ಟಿನಲ್ಲಿ ಶಿಕ್ಷಕರಿಗೆ ನಿರಂತರ ತರಬೇತಿ ಅಗತ್ಯ. ಜತೆಗೆ ಪೂರ್ವ ಪ್ರಾಥಮಿಕ ತರಗತಿಗೆ ಈಗ ಶಿಕ್ಷಕರಿಲ್ಲ. ಅದಕ್ಕೂ ವ್ಯವಸ್ಥೆ ಮಾಡಿಕೊಳ್ಳಬೇಕು ಎಂಬ ಆಗ್ರಹ ಶಿಕ್ಷಕರ ವಲಯದಿಂದ ಕೇಳಿ ಬರುತ್ತಿದೆ.

ಇಲಾಖೆಯಿಂದ ಶಾಲೆಯ ಆಯ್ಕೆ ಸಂಬಂಧ ಯಾವುದೇ ಸೂಚನೆ ಇನ್ನೂ ಬಂದಿಲ್ಲ. ಶಿಕ್ಷಕರಿಗೆ ಈಗಾಗಲೇ ಒಂದು ಹಂತದ ತರಬೇತಿಯನ್ನು ನೀಡಲಾಗಿದೆ. ವಿಧಾನಮಂಡಲ ಅಧಿವೇಶನ ಮುಗಿದ ಅನಂತರ ಈ ಬಗ್ಗೆ ಮಾರ್ಗಸೂಚಿ ಬರುವ ಸಾಧ್ಯತೆಯಿದೆ. ಎನ್‌ಇಪಿ ಅನುಷ್ಠಾನಕ್ಕೆ ಸಂಬಂಧಿಸಿ ಪ್ರಾಥಮಿಕ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ.
-ಸುಧಾಕರ್‌ ಕೆ., ಗೋವಿಂದ ಮಡಿವಾಳ
ಡಿಡಿಪಿಐ, ದಕ್ಷಿಣ ಕನ್ನಡ ಮತ್ತು ಉಡುಪಿ

ಮೊದಲ ಹಂತದಲ್ಲಿ 20 ಸಾವಿರ ಸರಕಾರಿ ಶಾಲೆಗಳಲ್ಲಿ ಎನ್‌ಇಪಿ ಅನುಷ್ಠಾನ ಮಾಡಿದ್ದೇವೆ. ಇದಕ್ಕೆ ಪೂರಕವಾಗಿ ಪಠ್ಯಕ್ರಮಗಳನ್ನು ತಯಾರಿಸು ತ್ತಿದ್ದೇವೆ. ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ತಜ್ಞರ ಸಮಿತಿಯ ಸಲಹೆ ಅನುಸಾರ ಎನ್‌ಇಪಿ ಜಾರಿಗೆ ತರಲಿದ್ದೇವೆ.
-ಬಿ.ಸಿ. ನಾಗೇಶ್‌, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next