Advertisement

ನಾಳಿನ ಮತ ಎಣಿಕೆಗೆ ಸಕಲ ಸಿದ್ಧತೆ

05:22 PM May 14, 2018 | Team Udayavani |

ದಾವಣಗೆರೆ: ಮಂಗಳವಾರ (ಮೇ 15) ರಂದು ನಡೆಯುವ 8 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯಕ್ಕೆ ತೋಳಹುಣಸೆಯ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

Advertisement

ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ವಿದ್ಯುನ್ಮಾನ ಮತಯಂತ್ರಗಳನ್ನು ಭದ್ರತಾ ಕೊಠಡಿಗಳಲ್ಲಿ ಬಿಗಿ ಭದ್ರತೆಯಲ್ಲಿ ಇರಿಸಲಾಗಿದೆ. ಅರೆ ಸನಾ ಪಡೆ, ಗಡಿ ಭದ್ರತಾ ಪಡೆ, ಕೆಎಸ್‌ ಆರ್‌ಪಿ ಹಾಗೂ ಸ್ಥಳೀಯ ಪೊಲೀಸರು ಹದ್ದಿನ ಕಣ್ಣಿನಲ್ಲಿ ಮತಯಂತ್ರಗಳ ಕಾವಲು ಕಾಯುತ್ತಿದ್ದಾರೆ.

ಮಂಗಳವಾರ ಬೆಳಗ್ಗೆ 8ಕ್ಕೆ ಮತ ಎಣಿಕೆ ಕಾರ್ಯ ಪ್ರಾರಂಭವಾಗಲಿದೆ. ವಿದ್ಯುನ್ಮಾನ ಮತಯಂತ್ರಗಳ ಮತ ಎಣಿಕೆಗೂ ಮುನ್ನ ಅಂಚೆ ಮತಪತ್ರಗಳ ಎಣಿಕೆ ನಡೆಯಲಿದೆ. ವಿವಿಧ ಪಕ್ಷಗಳ ಅಭ್ಯರ್ಥಿಗಳು, ಏಜೆಂಟರ ಸಮಕ್ಷಮದಲ್ಲಿ
ಭದ್ರತಾ ಕೊಠಡಿ ತೆರೆದು, ಮತಯಂತ್ರಗಳನ್ನು ಬಿಗಿ ಭದ್ರತೆಯಲ್ಲಿ ಮತ ಎಣಿಕಾ ಕೊಠಡಿಗೆ ತರಲಾಗುವುದು. ಮತಯಂತ್ರಗಳನ್ನು ತರುವ ಮಾರ್ಗದುದ್ದಕ್ಕೂ ಸಿಸಿ ಟಿವಿ, ಸರ್ವಲೈನ್‌ ವ್ಯವಸ್ಥೆ ಮಾಡಲಾಗಿದೆ.

ಒಂದು ಕೊಠಡಿಯಲ್ಲೇ ಕುಳಿತು ಅಭ್ಯರ್ಥಿಗಳು, ಏಜೆಂಟರು ಮತಯಂತ್ರ ತರುವುದನ್ನು ನೋಡುವ ವ್ಯವಸ್ಥೆಯನ್ನೂ
ಮಾಡಲಾಗಿದೆ. ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರ ಬೀಳಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ
ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎಲ್ಲ ಎಂಟು ಕ್ಷೇತ್ರಕ್ಕೆ ಸೇರಿ ಒಟ್ಟು 112 ಟೇಬಲ್‌ ಸಿದ್ಧಪಡಿಸಲಾಗಿದೆ. 400ಕ್ಕೂ ಹೆಚ್ಚು ಸಿಬ್ಬಂದಿ ಮತ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಮತ ಎಣಿಕೆಗೆ ನಿಯೋಜಿಸಲಾಗಿರುವ ಅಧಿಕಾರಿ, ಸಿಬ್ಬಂದಿಗೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಎಣಿಕಾ ಕೇಂದ್ರಕ್ಕೆ ಬಂದು, ಹೋಗಲು ಅನುಕೂಲವಾಗಲಿ ಎಂದು ದಾವಣಗೆರೆ ಸಾರಿಗೆ ಬಸ್‌ ನಿಲ್ದಾಣದಿಂದ ನಿಗದಿತ ಅವಧಿಯಲ್ಲಿ ಬಸ್‌ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. 

Advertisement

ಮತ ಎಣಿಕೆ ಅಧಿಕಾರಿ, ಸಿಬ್ಬಂದಿ ಸೇರಿದಂತೆ ಯಾರಿಗೂ ಮೊಬೈಲ್‌ ತರಲು ಮತ್ತು ಬಳಸಲು ಅವಕಾಶವಿಲ್ಲ. ಒಂದರ್ಥದಲ್ಲಿ ನಿಷೇಧಿಸಲಾಗಿದೆ. ಅಭ್ಯರ್ಥಿಗಳಿಗೆ ಮೊಬೈಲ್‌ ಇಡಲು ಪ್ರತ್ಯೇಕ ಕೌಂಟರ್‌ ವ್ಯವಸ್ಥೆ ಮಾಡಿಕೊಡಲಾಗಿದೆ.

ಮೊಬೈಲ್‌ ಅಲ್ಲಿಟ್ಟು ಅಲ್ಲಿಯೇ ಮಾತನಾಡಬೇಕು. ಬೇರೆ ಎಲ್ಲಿಯೂ ಬಳಕೆಗೆ ಅವಕಾಶವೇ ಇಲ್ಲ. ಮಾಧ್ಯಮದವರಿಗೂ ಒಂದು ಸ್ಥಿರ ದೂರವಾಣಿ ಹಾಗೂ ಮೊಬೈಲ್‌ ಬಳಕೆಗೆ ನಿಗದಿತ ಜಾಗದ ವ್ಯವಸ್ಥೆ ಮಾಡಲಾಗುವುದು. ಆನ್‌ಲೈನ್‌ನಲ್ಲಿ ಪ್ರತಿ ಸುತ್ತಿನ ಮತ ಎಣಿಕೆ ಪ್ರದರ್ಶನವಾಗುವ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಸುತ್ತಿನ ಮತ ಎಣಿಕೆಯ ಮಾಹಿತಿ
ನೀಡಲಾಗುವುದು ಎಂದು ತಿಳಿಸಿದರು. 

ಜಿಲ್ಲಾ ರಕ್ಷಣಾಧಿಕಾರಿ ಆರ್‌. ಚೇತನ್‌ ಮಾತನಾಡಿ, ಮತ ಎಣಿಕೆ ಕಾರ್ಯ ನಡೆಯುವ ದಾವಣಗೆರೆ ವಿಶ್ವವಿದ್ಯಾಲಯ ಮೂಲಕ ಸಂಚರಿಸುವ ಬಸ್‌, ವಾಹನಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಲೋಕಿಕೆರೆ-ಹದಡಿ ಮಾರ್ಗದ ಮುಖಾಂತರ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ನಗರದಲ್ಲಿ 144 ಸೆಕ್ಷನ್‌ ಪ್ರಕಾರ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಚುನಾವಣೆ ಫಲಿತಾಂಶ ಘೋಷಣೆ ನಂತರ ಸಂಭ್ರಮಾಚರಣೆ ಮಾಡಬಹುದಾಗಿದ್ದರೂ ಮೆರವಣಿಗೆಗೆ ಅವಕಾಶ ಇರುವುದಿಲ್ಲ. ಮತ ಎಣಿಕೆ ಕೇಂದ್ರವಾದ ವಿಶ್ವವಿದ್ಯಾಲಯದ ಮುಂದೆ ಎರಡು ಕಡೆ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಎಲ್ಲ ಕಡೆಗಳಲ್ಲಿ 4 ಕೆಎಸ್‌ಆರ್‌ಪಿ ತುಕಡಿಗಳು, ಹೆಚ್ಚುವರಿ ಹೋಂಗಾರ್ಡ್ಸ್‌ಗಳು(3 ಕಂಪೆನಿಗಳ ಹೋಂ ಗಾರ್ಡ್ಸ್‌ ಆಗಮಿಸಿದ್ದಾರೆ), ಕೇಂದ್ರದ ಪಡೆ ನಿಯೋಜಿಸಲಾಗುವುದು
ಎಂದರು. ಎಣಿಕೆ ಕೇಂದ್ರದ ಸುತ್ತ ಬಂದೋಬಸ್ತಗೆ 3 ಜನ ಡಿಎಸ್‌ಪಿ, 7 ಜನ ಸಿಪಿಐ, 15 ಜನ ಸಬ್‌ ಇನ್ಸ್‌ಪೆಕ್ಟರ್‌, 250 ಹಿರಿಯ, ಕಿರಿಯ ಪೇದೆ, ಮಹಿಳಾ ಸಿಬ್ಬಂದಿ, ಹೋಂಗಾರ್ಡ್‌ ನಿಯೋಜಿಸಲಾಗುವುದು ಎಂದು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next