Advertisement

ತಿಪ್ಪೇರುದ್ರಸ್ವಾಮಿ ಜಾತ್ರೆಗೆ ಭರದ ಸಿದ್ಧತೆ

08:25 AM Mar 22, 2019 | Team Udayavani |

ನಾಯಕನಹಟ್ಟಿ: ಮಾರ್ಚ್‌ 22ರಂದು ನಡೆಯುವ ತಿಪ್ಪೇರುದ್ರಸ್ವಾಮಿ ಜಾತ್ರೆಗೆ ಸಿದ್ಧತೆಗಳು ಭರದಿಂದ ಸಾಗಿದ್ದು, ಕುಡಿಯುವ ನೀರು, ಪೊಲೀಸ್‌ ಬಂದೋಬಸ್ತ್, ಸ್ವತ್ಛತೆ, ದೇವಾಲಯದಲ್ಲಿ ಸಿದ್ಧತೆಗಳು ಅಂತಿಮ ಹಂತದಲ್ಲಿವೆ.

Advertisement

ಜಾತ್ರೆಯ ಬಂದೋಬಸ್ತ್ಗೆ 1500 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಸ್ಕೈವಾಚ್‌ ಟವರ್‌, ಸಿಸಿ ಕ್ಯಾಮೆರಾ, ವಜ್ರ ವಾಹನದ ಕಣ್ಗಾವಲನ್ನು ಅಳವಡಿಸಲಾಗಿದೆ. ಜಾತ್ರೆಗೆ 6 ಡಿವೈಎಸ್ಪಿ, 12 ಸಿಪಿಐ,40 ಪಿಎಸ್‌ಐ,50 ಎಎಸ್‌ಐ, 478 ಪಿ.ಸಿ, 41 ಮಹಿಳಾ ಪಿಸಿ, 10 ಡಿಎಆರ್‌ತಂಡಗಳು, 2 ಕ್ಯೂಆರ್‌ಟಿ ತಂಡಗಳು, ಒಂದು ಟ್ರೈಗರ್‌ ವಾಹನ, ಒಂದು ವಜ್ರ ವಾಹನ, 3 ಕೆಎಸ್‌ಆರ್‌ಪಿ ತಂಡಗಳು, ಎರಡು ಅಗ್ನಿ ಶಾಮಕ ವಾಹನಗಳು, ಒಂದು ಕ್ರೇನ್‌, 150 ಎನ್ನೆಸ್ಸೆಸ್‌ ವಿದ್ಯಾರ್ಥಿಗಳು, 3 ಇಂಟರ್‌ಸೆಪ್ಟರ್‌, 10 ಪೊಲೀಸ್‌ ಬೈಕ್‌ಗಳನ್ನು ನಿಯೋಜಿಸಲಾಗಿದೆ.

ಇದಲ್ಲದೆ ತೇರು ಬೀದಿ, ಪಾದಗಟ್ಟೆ ಸೇರಿದಂತೆ ಎಂಟು ಕಡೆಗಳಲ್ಲಿ ಸ್ಕೆವಾಚ್‌ ಟವರ್‌ಗಳನ್ನು ನಿರ್ಮಿಸಲಾಗಿದೆ. ಜನಸಂದಣಿ ಇರುವ ಪ್ರದೇಶಗಳಲ್ಲಿ 50 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಶುಕ್ರವಾರ ಪಟ್ಟಣಕ್ಕೆ ಆಗಮಿಸುವ ಎಲ್ಲ ವಾಹನಗಳನ್ನು ನಿಷೇಧಿಸಲಾಗಿದೆ. ಬಳ್ಳಾರಿ ಚಳ್ಳಕೆರೆ ಕಡೆಯಿಂದ ಬರುವ ವಾಹನಗಳನ್ನು ಚಿತ್ರದುರ್ಗ ಮಾರ್ಗವಾಗಿ ಚಲಿಸಬೇಕಾಗಿದೆ. ಹೊಸಪೇಟಿ, ಜಗಳೂರು ಕಡೆಯಿಂದ ಬರುವ ವಾಹನಗಳು ಚಿತ್ರದುರ್ಗ ಮೂಲಕ ಚಲಿಸಬೇಕಾಗಿದೆ. ನಾಯಕನಹಟ್ಟಿಗೆ ಬಂದು ಹೋಗುವ ರೂಟ್‌ ಬಸ್‌
ಗಳನ್ನು ಪಟ್ಟಣ ಪ್ರವೇಶಿಸುವಂತಿಲ್ಲ. ಅವುಗಳು ಬೈಪಾಸ್‌ ಮೂಲಕ ಚಲಿಸಬೇಕಾಗಿದೆ.

ಗ್ರಾಮಕ್ಕೆ ಆಗಮಿಸುವ ಐದು ಪ್ರಮುಖ ಮಾರ್ಗಗಳಲ್ಲಿ ಪೊಲೀಸ್‌ ಚೆಕ್‌ ಪೋಸ್ಟ್‌ಗಳು ದಿನದ 24 ಗಂಟೆ ಕಾರ್ಯ ನಿರ್ವಹಿಸುತ್ತಿವೆ. ಚೆಳ್ಳಕೆರೆ ರಸ್ತೆಯಲ್ಲಿ 2, ಮಲ್ಲೂರ ಹಳ್ಳಿ ರಸ್ತೆ, ಜಗಳೂರು, ತಳಕ್‌, ಬೋಸೇ ದೇವರ ಹಟ್ಟಿ ರಸ್ತೆಗಳಲ್ಲಿ ತಲಾ ಒಂದು ಚೆಕ್‌
ಪೋಸ್ಟ್‌ ನಿರ್ಮಿಸಲಾಗಿದೆ. ಪೊಲೀಸ್‌ ಚೌಕಿಯಲ್ಲಿ ಒಟ್ಟು 6 ಸಿಬ್ಬಂದಿ ನಿಯೋಜಿಸಲಾಗಿದೆ. ಪಿಎಸ್‌ಐ, ಹೆಡ್‌ ಕಾನ್ಸಟೇಬಲ್‌, ಕಂದಾಯ ಇಲಾಖೆ ಸಿಬ್ಬಂದಿ, ಪಶು ವೈದ್ಯಕೀಯ ಸಿಬ್ಬಂದಿ ನಿಯೋಜಿಸಲಾಗಿದೆ. ಪ್ರತಿ ವಾಹನವನ್ನು ಪರಿಶೀಲಿಸಿ ಬಿಡಲಾಗುತ್ತಿದೆ.
ಹೈಕೋರ್ಟ್‌ ಆದೇಶ ಹಾಗೂ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಕುರಿ, ಕೋಳಿಗಳನ್ನು ಗ್ರಾಮದ ಒಳಗೆ ತರುವುದನ್ನು ತಡೆಯಲಾಗುತ್ತಿದೆ.

100ಕ್ಕೂ ಹೆಚ್ಚು ಕೆಎಸ್ಸಾರ್ಟಿಸಿ ಬಸ್‌ಗಳು ಗುರುವಾರ ಸಂಚಾರ ಆರಂಭಿಸಿದೆ. ಪಟ್ಟಣಕ್ಕೆ ಒಂದು ಕಿ.ಮೀ ದೂರದಲ್ಲಿ ಬಸ್‌ ನಿಲ್ದಾಣ ಸ್ಥಾಪಿಸಲಾಗಿದೆ. ಚಳ್ಳಕೆರೆ ಹಾಗೂ ದಾವಣಗೆರೆ ರಸ್ತೆಗಳಲ್ಲಿ ಕೆಎಸ್ಸಾರ್ಟಿಸಿ ಬಸ್‌ಗಳು ಕಾರ್ಯನಿರ್ವಹಿಸುತ್ತವೆ. ಚಳ್ಳಕೆರೆ, ಚಿತ್ರದುರ್ಗ,
ಜಗಳೂರಿನಿಂದ ಶುಕ್ರವಾರ ಪ್ರತಿ 10 ನಿಮಿಷಕ್ಕೆ ಒಂದರಂತೆ ಬಸ್‌ಗಳು ಲಭ್ಯವಿದೆ. ಇದಲ್ಲದೆ ಖಾಸಗಿ ಬಸ್‌ಗಳು ರಸ್ತೆಗಿಳಿಯಲಿವೆ. ಟ್ರ್ಯಾಕ್ಟರ್‌, ಎತ್ತಿನ ಗಾಡಿ, ಟೆಂಪೋ, ಲಾರಿಗಳು ಸೇರಿದಂತೆ ನಾನಾ ವಾಹನಗಳಲ್ಲಿ ಭಕ್ತರು ತಮ್ಮ ಕುಟುಂಬ ಸಮೇತ ಆಗಮಿಸುತ್ತಿದ್ದಾರೆ. ತಿಪ್ಪೇರುದ್ರ ಸ್ವಾಮಿ ಜಾತ್ರೆಗೆ ಪಾದಯಾತ್ರೆ ಮೂಲಕ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಗುರುವಾರ
ಬೆಳಗ್ಗೆ ದಾವಣೆಗೆರೆ ಜಿಲ್ಲೆಯಿಂದ 220 ಪಾದಯಾತ್ರಿಗಳ ತಂಡ ಕ್ಷೇತ್ರ ತಲುಪಿತ್ತು. ಹರಿಹರ, ಮಲೆಬೆನ್ನೂರು, ಕಕ್ಕರಗೊಳ್ಳ, ಗುಡ್ಡದ ಹಳ್ಳಿ, ಹಾಲಿವಾಣ, ನಂದೀಹಳ್ಳಿ ಸೇರಿದಂತೆ ಹತ್ತಕ್ಕೂ ಹೆಚ್ಚು ಗ್ರಾಮಗಳ ಗುಂಪು ಪಾದಯಾತ್ರೆಯಲ್ಲಿ ಆಗಮಿಸಿತು.

Advertisement

 ಚನ್ನಗಿರಿಯಿಂದ 120, ಶಿರಾದಿಂದ 169, ಉಕ್ಕಡಗಾತ್ರಿಯಿಂದ 75 ಹೀಗೆ ಜಿಲ್ಲೆಯ ಹಾಗು ನೆರೆಯ ಜಿಲ್ಲೆಗಳಿಂದ ನೂರಾರು ಭಕ್ತರು ಉರಿಬಿಸಿಲನ್ನು ಲೆಕ್ಕಿಸದೆ ಜಾತ್ರೆಗೆ ಪಾದ ಯಾತ್ರೆಯಲ್ಲಿ ಆಗಮಿಸಿದ್ದಾರೆ. ಈಗಾಗಲೇ ನೂರಾರು ಕಿ.ಮೀ. ಕ್ರಮಿಸಿ ಸುಸ್ತಾಗಿರುವ
ಪಾದಯಾತ್ರಿಗಳು ವಿಶ್ರಾಂತಿ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next