Advertisement

ನಮಾಮಿ ಗಂಗಾ ಮಾದರಿ ನೀರು ಶುದ್ಧೀಕರಣಕ್ಕೆ ಸಿದ್ಧತೆ

12:03 PM Jul 25, 2018 | |

ಬೆಂಗಳೂರು: ಕೇಂದ್ರ ಸರ್ಕಾರದ “ನಮಾಮಿ ಗಂಗಾ’ ಯೋಜನೆಯ ಮಾದರಿಯನ್ನು ಅಳವಡಿಸಿಕೊಳ್ಳಲು ಮುಂದಾಗಿರುವ ಜಲಮಂಡಳಿ, ತನ್ನ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳನ್ನು (ಎಸ್‌ಟಿಪಿ) ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಉನ್ನತೀಕರಿಸಲು ಚಿಂತನೆ ನಡೆಸಿದೆ. 

Advertisement

ಮಲಿನವಾಗಿರುವ ಗಂಗಾ ನದಿಯನ್ನು ಸ್ವತ್ಛಗೊಳಿಸಲು ಕೇಂದ್ರ ಸರ್ಕಾರ ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಯೋಜನೆ ರೂಪಿಸಿದೆ. ಅದೇ ಮಾದರಿಯಲ್ಲಿ ಜಲಮಂಡಳಿಯ ಹಳೆಯ ಎಸ್‌ಟಿಪಿಗಳನ್ನು ಉನ್ನತೀಕರಣ ಹಾಗೂ ಹೊಸ ಘಟಕಗಳ ನಿರ್ಮಿಸಲು ಯೋಜನೆ ರೂಪಿಸಿದ್ದು, ಶೀಘ್ರದಲ್ಲಿಯೇ ಆ ಕಾರ್ಯಕ್ಕೆ ಚಾಲನೆ ನೀಡಲು ಸಿದ್ಧತೆ ನಡೆಸಿದೆ. 

ನಗರದಲ್ಲಿ ಪ್ರತಿನಿತ್ಯ 1400 ದಶಲಕ್ಷ ಲೀಟರ್‌ನಷ್ಟು ತಾಜ್ಯ ನೀರು ಉತ್ಪತ್ತಿಯಾಗುತ್ತಿದ್ದು, ಈ ನೀರನ್ನು ನಗರದ ವಿವಿಧ ಕಡೆಗಳಲ್ಲಿ ಜಲಮಂಡಳಿಯಿಂದ ನಿರ್ಮಿಸಿರುವ 24 ಎಸ್‌ಟಿಪಿಗಳ ಮೂಲಕ ಶುದ್ಧೀಕರಿಸಿ ಸುತ್ತಮುತ್ತಲಿನ ಕೆರೆಗಳಿಗೆ ಹರಿಸಲಾಗುತ್ತಿದೆ. ಆದರೆ, 24 ಎಸ್‌ಟಿಪಿಗಳ ಪೈಕಿ 14 ಎಸ್‌ಟಿಪಿಗಳು ಹಳೆಯ ತಂತ್ರಜ್ಞಾನ ಹೊಂದಿದ್ದು, ಅವುಗಳನ್ನು ಮೇಲ್ದರ್ಜೆಗೇರಿಸುವ ಮೂಲಕ ಅತ್ಯಾಧುನಿಕಗೊಳಿಸಲು ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ. 

ಅರ್ಧದಷ್ಟು ಕುಗ್ಗಿದ ಸಾಮರ್ಥ್ಯ: ಹಳೆಯ ತಂತ್ರಜ್ಞಾನವನ್ನು ಹೊಂದಿರುವ 14 ಎಸ್‌ಟಿಪಿಗಳು 25ರಿಂದ 30 ವರ್ಷಗಳಷ್ಟು ಹಳೆಯದಾಗಿದ್ದು, ಘಟಕಗಳ ಶುದ್ಧೀಕರಣ ಸಾಮರ್ಥ್ಯ ಶೇ.50ರಷ್ಟು ಕುಗ್ಗಿದೆ. ಮುಖ್ಯವಾಗಿ 1974ರಲ್ಲಿ ಆರಂಭವಾಗಿದ್ದ ವೃಷಭಾವತಿ ಕಣಿವೆ, 1978ರ ಕೋರಮಂಗಲ-ಚಲ್ಲಘಟ್ಟ ಕಣಿವೆಯ ಎಸ್‌ಟಿಪಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರುಗಳಿವೆ. 

ಆ ಹಿನ್ನೆಲೆಯಲ್ಲಿ ಘಟಕಗಳನ್ನು ಸಂಪೂರ್ಣವಾಗಿ ಉನ್ನತೀಕರಿಸಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸುವ ಮೂಲಕ ತ್ಯಾಜ್ಯ ನೀರು ಸಮರ್ಪಕವಾಗಿ ಸಂಸ್ಕರಣೆಯಾಗುವಂತೆ ಮಾಡುವುದು ಮಂಡಳಿಯ ಉದ್ದೇಶವಾಗಿದೆ. ಹಳೆಯ ಘಟಕಗಳಲ್ಲಿ ಸಮರ್ಪಕವಾಗಿ ಶುದ್ಧವಾಗದ ನೀರನ್ನು ಮರುಬಳಕೆ ಹಾಗೂ ಕೆರೆಗಳಿಗೆ ಹರಿಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿರಾಕರಿಸಿದೆ. ಹೀಗಾಗಿ ಘಟಕಗಳನ್ನು ಮೇಲ್ದರ್ಜೆಗೇರಿಸುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಮಂಡಳಿಯ ಎಂಜಿನಿಯರ್‌ಗಳು. 

Advertisement

ಗಡುಸುತನ ಹೆಚ್ಚಿದೆ: ಹಳೆಯ ಎಸ್‌ಟಿಪಿಗಳಲ್ಲಿ ಶುದ್ಧೀಕರಿಸಿದ ನೀರಿನಲ್ಲಿ ಗಡಸುತನ ಹೆಚ್ಚಿನ ಪ್ರಮಾಣದಲ್ಲಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿ ತಜ್ಞರ ಪ್ರಕಾರ ತ್ಯಾಜ್ಯ ನೀರು ಸಂಸ್ಕರಣೆಯ ನಂತರ ಬಯೋಕೆಮಿಕಲ್‌ ಆಕ್ಸಿಜನ್‌ ಡಿಮ್ಯಾಂಡ್‌ ಪ್ರಮಾಣ ಗರಿಷ್ಠ 10 ಮೈಕ್ರೋ ಗ್ರಾಂ ಇರಬೇಕು. ಆದರೆ ಈ ಹಳೆಯ ಎಸ್‌ಟಿಪಿಗಳು ನೀರಿನ ಗಡಸುತನ ಪ್ರಮಾಣ 20 ಮೈಕ್ರೋ ಗ್ರಾಂಗಳಿಗೆ ಇಳಿಸುವಷ್ಟು ಮಾತ್ರ ಶಕ್ತವಾಗಿವೆ.

ಸಹಭಾಗಿತ್ವ ಹೇಗೆ: ಎಸ್‌ಟಿಪಿಗಳಲ್ಲಿ ನಿತ್ಯ ಒಂದು ದಶಲಕ್ಷ ಲೀ.ನೀರನ್ನು ಸಂಸ್ಕರಣಾ ಸಾಮರ್ಥ್ಯವನ್ನು  ಉನ್ನತೀಕರಿಸಲು ಕನಿಷ್ಠವೆಂದರೂ ಒಂದು ಕೋಟಿ ರೂ. ವೆಚ್ಚವಾಗಲಿದೆ. ಹಳೆಯ 14 ಎಸ್‌ಟಿಪಿಗಳಲ್ಲಿ ಗರಿಷ್ಠ 750 ದಶಲಕ್ಷ ಲೀಟರ್‌  ಸಂಸ್ಕರಣಾ ಸಾಮರ್ಥ್ಯ ಉನ್ನತೀಕರಣಕ್ಕೆ  ಸುಮಾರು 800 ಕೋಟಿ ರೂ. ಅನುದಾನ ಬೇಕಾಗುತ್ತದೆ.

ಇಷ್ಟು ಹಣವನ್ನು ಜಲಮಂಡಳಿಯಿಂದ ಭರಿಸುವುದು ಕಷ್ಟವಾಗುವುದರಿಂದ ಕಾಮಗಾರಿಯ ಶೇ.40ರಷ್ಟು ಖರ್ಚನ್ನು ಜಲಮಂಡಳಿ ಭರಿಸಲಿದ್ದು, ಉಳಿದ ವೆಚ್ಚವನ್ನು ಪಿಪಿಪಿ ಮಾದರಿಯಲ್ಲಿ ವೆಚ್ಚ ಮಾಡಲಾಗುತ್ತದೆ ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌ “ಉದಯವಾಣಿ’ಗೆ ತಿಳಿಸಿದ್ದಾರೆ.
 
ಹಳೇ 14 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳು: ಕೋರಮಂಗಲ ಹಾಗೂ ಚಲ್ಲಘಟ್ಟ ಕಣಿವೆ, ವೃಷಭಾವತಿ ಕಣಿವೆ, ಮೈಲಸಂದ್ರ, ಹೆಬ್ಟಾಳ, ಮಡಿವಾಳ, ಕೆಂಪಾಬುದಿ, ಯಲಹಂಕ, ನಾಗಸಂದ್ರ, ಜಕ್ಕೂರು, ಕೆ.ಆರ್‌.ಪುರ, ಕಾಡಬಿಸನಹಳ್ಳಿ, ರಾಜಾ ಕೆನಲ್‌, ಲಾಲ್‌ಬಾಗ್‌, ಕಬ್ಬನ್‌ ಪಾರ್ಕ್‌.
 
ಕೇಂದ್ರ ಸರ್ಕಾರ ಗಂಗಾ ನದಿ ಶುದ್ಧೀಕರಣಗೊಳಿಸಲು ಗಂಗಾ ನಮಾಮಿ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಜಲಮಂಡಳಿಯ ಎಸ್‌ಟಿಪಿಗಳನ್ನು ಉನ್ನತೀಕರಣಗೊಳಿಸಲು ಅದೇ ಮಾದರಿಯನ್ನು ಅಳವಡಿಸಿಕೊಳ್ಳಲು ಚಿಂತನೆ ನಡೆಸಲಾಗಿದೆ. ಆರ್ಥಿಕವಾಗಿ ಜಲಮಂಡಳಿಗೆ ಈ ಮಾದರಿ ಅನುಕೂಲವಾಗಲಿದ್ದು, ಈ ಕುರಿತು ರಾಜ್ಯ ಸರ್ಕಾರದ ಒಪ್ಪಿಗೆ ಪಡೆಯಲು ಎಲ್ಲಾ ದಾಖಲೆಗಳ ಸಿದ್ಧತೆ ನಡೆಸುತ್ತಿದೆ. 
– ತುಷಾರ್‌ ಗಿರಿನಾಥ್‌. ಜಲಮಂಡಳಿ ಅಧ್ಯಕ್ಷ 

* ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next