ಕೊಪ್ಪಳ: ಅಂಧರ ಬಾಳಿಗೆ ಬೆಳಕಾಗಿ ನಮ್ಮ ಕಣ್ಣುಗಳು ಜೀವಂತಿಕೆಯಿಂದ ಇರಲಿ ಎಂಬ ಉದ್ದೇಶದಿಂದ ಕೊಪ್ಪಳದ 12 ಜನರನ್ನು ಒಳಗೊಂಡ ಇಡೀ ಕುಟುಂಬವೇ ನೇತ್ರದಾನ ಮಾಡಲು ಸಿದ್ಧಗೊಂಡಿರುವುದು ಗಮನ ಸೆಳೆದಿದೆ. ನಿಜಕ್ಕೂ ಈ ಕುಟುಂಬದ ನಿರ್ಧಾರ ಹಲವರ ಜೀವನಕ್ಕೆ ದಾರಿದೀಪವಾಗಲಿದೆ. ಹೌದು. ಕೊಪ್ಪಳ ತಾಲೂಕಿನ ಭಾಗ್ಯನಗರದ ಜನತಾ ಕಾಲೋನಿಯಲ್ಲಿ ನೆಲೆಸಿರುವ ಮೈಲಿ ಕುಟುಂಬವು ಈ ನಿರ್ಧಾರಕ್ಕೆ ಬಂದಿದೆ. ಮನೆಯಲ್ಲಿ ಒಬ್ಬರು ಅಥವಾ ಇಬ್ಬರು ನೇತ್ರದಾನ ಮಾಡುವುದು ಸಾಮಾನ್ಯ. ಆದರೆ ಇಡೀ ಕುಟುಂಬ ನೇತ್ರದಾನಕ್ಕೆ ಶಪತ ಮಾಡಿದ್ದು, ಇವರ ಸಾಮಾಜಿಕ ಕಳಕಳಿ ಮೆಚ್ಚಲೇಬೇಕು.
ಭಾಗ್ಯನಗರ ಪಟ್ಟಣ ಪಂಚಾಯಿತಿಸದಸ್ಯರಾಗಿರುವ ನೀಲಕಂಠಪ್ಪ ಮೈಲಿ ಅವರು ತಮ್ಮ ಮನೆಯ ಸದಸ್ಯರಿಗೆ ಕಡು ಕಷ್ಟದ ಸಂದರ್ಭದಲ್ಲೂ ಉತ್ತಮ ಶಿಕ್ಷಣ ಕೊಡಿಸಿ ಮಕ್ಕಳೆಲ್ಲರೂ ಉತ್ತಮ ಸ್ಥಾನದಲ್ಲಿ ಗುರುತಿಸಿಕೊಳ್ಳುವ ಕೆಲಸ ಮಾಡಿದ್ದಾರೆ. ಹೀಗಾಗಿ ಅವರ ಮಕ್ಕಳು ಹಾಗೂ ಅಕ್ಕನ ಮಕ್ಕಳೆಲ್ಲರೂ ಇಂದು ಬೇರೆ ಬೇರೆ ಭಾಗದಲ್ಲಿ ಸರ್ಕಾರಿ ನೌಕರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಮಗೆಲ್ಲ ದಾರಿದೀಪವಾದ ಹಿರಿಯರನ್ನು ನೆನೆದ ಮಕ್ಕಳು, ಮನೆ ಸೊಸೆಯಂದಿರು ಸಹಿತ ನೇತ್ರದಾನಕ್ಕೆ ಸಮ್ಮತಿಸಿರುವುದು ನಿಜಕ್ಕೂ ಮೆಚ್ಚುವಂತದ್ದಾಗಿದೆ.
ನೇತ್ರದಾನ ಮಾಡುವ ಕುಟುಂಬವಿದು: ಮೈಲಿ ಕುಟುಂಬದ ನೀಲಕಂಠಪ್ಪ, ಪಾರ್ವತಿ, ಲಕ್ಷ್ಮವ್ವ, ಗಿರೀಶ, ಸಿಂಧು, ಅಶೋಕ, ಸುಧಾ, ಅನಿಲ್, ನಂದಿನಿ, ಪ್ರದೀಪ, ವೃಂದಾ, ಭಾವನಾ ಇವರೆಲ್ಲರೂ ಜ. 26ರಂದು ಗವಿಮಠದಲ್ಲಿ ನೇತ್ರದಾನಕ್ಕೆ ಸಮ್ಮತಿ ನೀಡಿ, ಸರ್ಕಾರದಿಂದ ಪ್ರಮಾಣಪತ್ರ ಪಡೆಯಲಿದ್ದಾರೆ.
25ನೇ ವೈವಾಹಿಕದ ನೆನಪಿನಡಿ ನೇತ್ರದಾನ: ಮನೆಯ ಮುಖ್ಯಸ್ಥ ನೀಲಕಂಠಪ್ಪ ಮೈಲಿ ಅವರಿಗೆ ಜ. 26ಕ್ಕೆ ಪಾರ್ವತಿ ಮೈಲಿ ಅವರೊಂದಿಗೆ ವಿವಾಹವಾಗಿ ಬರೊಬ್ಬರಿ 25 ವರ್ಷವಾಗಲಿವೆ. ಆ ಸವಿ ನೆನಪಿನ ಜೊತೆಗೆ ನೇತ್ರದಾನಕ್ಕೆ ಮುಂದಾಗಿದ್ದೇವೆ ಎಂದೆನ್ನುತ್ತಿದೆ ಕುಟುಂಬ ವರ್ಗ. ಒಟ್ಟಿನಲ್ಲಿ ಈ ದೇಹ ಮಣ್ಣಿನಲ್ಲಿ ಮಣ್ಣಾಗುವ ಮುನ್ನ ನಮ್ಮ ನೇತ್ರಗಳು ಅಂಧರ ಬಾಳಿಗೆ, ಬೆಳಕನ್ನೇ ಕಾಣದ ಜನರ ಜೀವನಕ್ಕೆ ದಾರಿದೀಪವಾಗಲೆಂದು ಪ್ರಜ್ಞಾವಂತ ಸಮೂಹ ನೇತ್ರದಾನ ಮಾಡಿ ಎಂದು ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದೆ.
ಇದನ್ನೂ ಓದಿ:ಸರ್ಕಾರದಿಂದ ರೈತರಿಗೆ ಅನ್ಯಾಯ
ನಮ್ಮ ಮನೆಯ ಮುಖ್ಯಸ್ಥ ನೀಲಕಂಠಪ್ಪ ಮೈಲಿ ಅವರ 25ನೇ ವಿವಾಹ ವಾರ್ಷಿಕೋತ್ಸವದ ಸವಿ ನೆನಪಿಗಾಗಿ ನಮ್ಮೆಲ್ಲ ಕುಟುಂಬ ಸದಸ್ಯರು ನೇತ್ರದಾನ ಮಾಡಲು ನಿರ್ಧರಿಸಿದ್ದೇವೆ. ಜ. 26ರಂದು ಕೊಪ್ಪಳದ ಗವಿಮಠದಲ್ಲಿ ನೇತ್ರದಾನಕ್ಕೆ ಸಮ್ಮತಿ ನೀಡಿ ಪ್ರಮಾಣ ಪತ್ರ ಪಡೆಯಲಿದ್ದೇವೆ.
ಅನಿಲ್ ಮೈಲಿ.
ದತ್ತು ಕಮ್ಮಾರ