Advertisement

ಸಮೂ ಸಾರಿಗೆ ಪುನಾರಂಭಕ್ಕೆ ಸಿದ್ಧತೆ

04:04 AM May 17, 2020 | Lakshmi GovindaRaj |

ಬೆಂಗಳೂರು: ಲಾಕ್‌ಡೌನ್‌ ತೆರವಾಗುತ್ತಿರುವ ಬೆನ್ನಲ್ಲೇ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದ್ದು, ನಮ್ಮ ಮೆಟ್ರೋ, ಬಿಎಂಟಿಸಿ ಸೇರಿದಂತೆ ನಗರ ಸಮೂಹ ಸಾರಿಗೆ ಪುನರಾರಂಭಕ್ಕೆ ಸಿದ್ಧತೆ ನಡೆದಿದೆ. ಎಲ್ಲ ಸಿಬ್ಬಂದಿಗೆ ಕರ್ತವ್ಯಕ್ಕೆ  ಹಾಜರಾಗುವಂತೆ ಸೂಚಿಸಲಾಗಿದೆ. ಆದರೆ, ಮೇ 17ಕ್ಕೆ (ಭಾನುವಾರ) ಲಾಕ್‌ಡೌನ್‌ ಅಂತ್ಯಗೊಂಡರೂ ಸಮೂಹ ಸಾರಿಗೆ ಸೇವೆ ಶುರುವಾಗಲು ಕನಿಷ್ಠ ಮೂರ್ನಾಲ್ಕು ದಿನಗಳು ಬೇಕಾಗುತ್ತದೆ.

Advertisement

ಅದೂ ಷರತ್ತುಬದ್ಧ ಸೇವೆ ಆಗಿರಲಿದೆ. ಮೆಟ್ರೋದಲ್ಲಿ ಈ ಮೊದಲು ಸರಿಸುಮಾರು 1500 ಪ್ರಯಾಣಿಕರು ಸಂಚರಿಸುತ್ತಿದ್ದರು. ಆದರೆ, ಈಗ ಕೇವಲ 350 ಜನರಿಗೆ ಮಾತ್ರ ಅವಕಾಶ ನೀಡಲಿದ್ದು, ಅದರಲ್ಲೂ ಸ್ಮಾರ್ಟ್‌ ಕಾರ್ಡ್‌ ಇದ್ದವರಿಗೆ ಮಾತ್ರ ಮೆಟ್ರೋ ಸಂಚಾರ ಭಾಗ್ಯ  ಸಿಗಲಿದೆ. ಅಷ್ಟೇ ಅಲ್ಲ, ಸ್ಮಾರ್ಟ್‌ ಕಾರ್ಡ್‌ ರಿಚಾರ್ಜ್‌ ಆನ್ಲ„ನ್‌ ಮೂಲಕ ಮಾತ್ರ ಅವಕಾಶವಿರಲಿದೆ.

350 ಜನ ಇದ್ರೆ ಬಾಗಿಲು ತೆರೆಯಲ್ಲ: ಪ್ರತಿ ನಿಲ್ದಾಣದಲ್ಲಿ ಇಳಿಯುವ ಮತ್ತು ಹತ್ತುವ ಪ್ರಯಾಣಿಕರ ವಿವರ ನಿಯಂತ್ರಣ ಕೊಠಡಿಗೆ ರವಾನೆ ಆಗಲಿದೆ. ಎಷ್ಟು ಪ್ರಯಾಣಿಕರು ಇಳಿಯುತ್ತಾರೋ, ಅಷ್ಟು ಜನ ಮಾತ್ರ ರೈಲು ಏರಬಹುದು.  ಒಂದು ವೇಳೆ ರೈಲಿನಲ್ಲಿ ಮೊದಲೇ 350 ಪ್ರಯಾಣಿಕರಿದ್ದರೆ, ರೈಲಿನ ಬಾಗಿಲು ತೆರೆಯುವುದಿಲ್ಲ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌)ದ ಅಧಿಕಾರಿಗಳು ಮಾಹಿತಿ ನೀಡಿದರು. ರೈಲಿನಲ್ಲಿ ಆಸನಗಳಿಗೆ ಗುರುತು  ಹಾಕಲಾಗಿರುತ್ತದೆ. ಅಲ್ಲಿ ಮಾತ್ರ ಕುಳಿತುಕೊಳ್ಳಬೇಕು.

ಅದೇ ರೀತಿ, ಮೆಟ್ರೋ ನಿಲ್ದಾಣದ ಒಂದು ಪ್ರವೇಶ ಮತ್ತು ಒಂದು ನಿರ್ಗಮನ ದ್ವಾರ ಪ್ರಯಾಣಿಕರಿಗೆ ಮುಕ್ತವಾಗಿರಲಿದೆ. ಎರಡೂ ದ್ವಾರಗಳಲ್ಲಿ ಸ್ಯಾನಿಟೈಸರ್‌ ಮತ್ತು ಜ್ವರ ತಪಾಸಣೆ  ಮಾಡುವ ಸ್ಕ್ಯಾನಿಂಗ್‌ ಯಂತ್ರ ಇರಲಿದೆ. ಉಷ್ಣಾಂಶ ಪರೀಕ್ಷೆ ಮಾಡಲಾಗುತ್ತದೆ.(ಉಷ್ಣಾಂಶ ಹೆಚ್ಚಿದ್ದರೆ ನಿರ್ಬಂಧ) ನೇರಳೆ ಮಾರ್ಗದಲ್ಲಿ ‘ಪೀಕ್‌ ಅವರ್‌’ನಲ್ಲಿ ಪ್ರತಿ 5 ನಿಮಿಷಗಳ ಅಂತರ ಹಾಗೂ ಹಸಿರು ಮಾರ್ಗದಲ್ಲಿ ಪ್ರತಿ 8-10  ನಿಮಿಷಗಳ ಅಂತರದಲ್ಲಿ ಮತ್ತು ಉಳಿದ ಸಮಯದಲ್ಲಿ 10-15 ನಿಮಿಷಗಳ ಅಂತರದಲ್ಲಿ ಸೇವೆ ಇರಲಿದೆ ಎಂದು ಅಧಿಕಾರಿಗಳು ವಿವರಿಸಿದರು.

ಬಿಎಂಟಿಸಿ ಸಿದ್ಧತೆ: ಲಾಕ್‌ಡೌನ್‌ ನಂತರ ಯಾವ ರೀತಿ ಕಾರ್ಯನಿರ್ವಹಿಸಬೇಕು, ಸಿದ್ಧತೆ ಹೇಗಿರಬೇಕು ಎಂಬ ಕುರಿತು ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಆರೋಗ್ಯ ತಪಾಸಣೆ ಮಾಡಿಸಿಕೊಂಡ ನಂತರವೇ ಕರ್ತವ್ಯಕ್ಕೆ ಹಾಜರಾಗಬೇಕು. ಅದರಲ್ಲಿಯೂ, ಬೇರೆ ನಗರ ಅಥವಾ ಜಿಲ್ಲೆಯಿಂದ ಬರುವ ಸಿಬ್ಬಂದಿ ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಬೇಕು ಎಂದು ಬಿಎಂಟಿಸಿ ಅಧಿಕಾರಿಗಳು ಹೇಳಿದರು.

Advertisement

ಎಲ್ಲ ಡಿಪೋಗಳಿಗೆ ಥರ್ಮಲ್‌ ಸ್ಕ್ಯಾನರ್‌ ಒದಗಿಸಲಾಗಿದ್ದು, ನಿತ್ಯ ಚಾಲಕ   ನಿರ್ವಾಹಕರ ಪರೀಕ್ಷೆ ನಡೆಸಲಾಗುವದು. ಎಲ್ಲ ಸಿಬ್ಬಂದಿಗೆ ಮುಖ,ಕೈಗವಸು, ಸ್ಯಾನಿಟೈಸರ್‌ ವಿತರಣೆ ಮಾಡಲಾಗಿದೆ. ಎಲ್ಲ ಬಸ್‌ಗಳನ್ನು ನಿತ್ಯ ಸೋಂಕು ಮುಕ್ತಗೊಳಿಸಲಾಗುವುದು. ನಗದು ವ್ಯವಹಾರ ಆದಷ್ಟು ಕಡಿಮೆ ಮಾಡುವ  ನಿಟ್ಟಿನಲ್ಲಿ ಸಿದ್ಧತೆ ಮಾಡಲಾಗಿದೆ. ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡುವ ಮೂಲಕ ಟಿಕೆಟ್‌ ಶುಲ್ಕ ಸಂಗ್ರಹಕ್ಕೆ ಚಿಂತನೆ ನಡೆದಿದೆ. ಮಾಸಿಕ ಅಥವಾ ವಾರದ ಪಾಸ್‌ಗಳನ್ನು ಬಳಸಲು ಉತ್ತೇಜನ ನೀಡಲಾಗುತ್ತಿದೆ.

ಸರ್ಕಾರದ ಅನುಮತಿ: “ಮೆಟ್ರೋ ಸೇವೆ ಪುನಾರಂಭಗೊಳಿ ಸಲು ಸಿದ್ಧತೆ ನಡೆದಿದೆ. ಸರ್ಕಾರದ ಅನುಮತಿ ಎದುರು ನೋಡುತ್ತಿ ದ್ದೇವೆ. ಸೇವೆ ಆರಂಭಿಸಲು ಗ್ರೀನ್‌ ಸಿಗ್ನಲ್‌ ಸಿಗುತ್ತಿದ್ದಂತೆ, ನಂತರದ ಎರಡು- ಮೂರು ದಿನಗಳ ಅಂತರದಲ್ಲಿ ರೈಲು ಕಾರ್ಯಾಚರಣೆ ಮಾಡಲಿವೆ’ ಎಂದು ಬಿಎಂಆರ್‌ ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್ ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next