Advertisement

ಪಂಚ ಮಹಾರಥೋತ್ಸವಕ್ಕೆ ಸರ್ವ ಸಿದ್ಧತೆ

11:50 AM Jan 20, 2018 | Team Udayavani |

ನಂಜನಗೂಡು: ಮಾರ್ಚ್‌ 28 ರಂದು ನಡೆಯುವ ನಂಜನಗೂಡಿನ ಪಂಚ ಮಹಾ ರಥೋತ್ಸವಕ್ಕೆ ಸರ್ವ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಿ.ರಂದೀಪ್‌ ಅಧಿಕಾರಿಗಳಿಗೆ ಆದೇಶಿಸಿದರು.

Advertisement

ಶ್ರೀಕಂಠೇಶ್ವರಸ್ವಾಮಿ ದೇವಾಲಯದ ದಾಸೋಹ ಭವನದಲ್ಲಿ ನಡೆದ ದೊಡ್ಡಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ದೊಡ್ಡ ಜಾತ್ರೆ ಅಂಗವಾಗಿ ರಥೋತ್ಸವ ಸಿಂಗಾರ,  ಸೇರಿದಂತೆ ಎಲ್ಲಾ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಯುವಂತಾಗಲು ಎಲ್ಲಾ ಇಲಾಖೆಗಳಿಗೆ ಜವಾಬ್ದಾರಿ ವಹಿಸಲಾಗುವುದು.

ಯಾವುದೇ ಹಂತದಲ್ಲೂ ಲೋಪ ಉಂಟಾಗದಂತೆ ಹೊಣೆಗಾರಿಕೆ ನಿಭಾಯಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಾತ್ರೆಗೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ತಾತ್ಕಾಲಿಕ ಶೌಚಾಲಯ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಲು ಸಿದ್ಧತೆ ಕೈಗೊಳ್ಳುವಂತೆ ತಿಳಿಸಿದರು.

ಅವ್ಯವಹಾರ ದೂರು: ಜಾತ್ರೆಯ ಸಿದ್ಧತೆಗಾಗಿ ಆಗಮಿಸಿದ ಜಿಲ್ಲಾಧಿಕಾರಿಗಳಿಗೆ ಜಾತ್ರಾ ಸಮಸ್ಯೆಗಿಂತ ದೇವಾಲಯ ಹಾಗೂ ನಗರದ ವಿವಿಧ ಸಮಸ್ಯೆಗಳ ಬಗ್ಗೆ ಸ್ಥಳೀಯರು ಪ್ರಶ್ನಿಸಿದರು. ದೇವಾಲಯದ ಸುಮಾರು 15 ಲಕ್ಷಕ್ಕೂ ಹೆಚ್ಚು ಹಣ ದುರುಪಯೋಗಪಡಿಸಿಕೊಂಡಿದ್ದಾರೆ.

ರಥ ಬೀದಿ ವತ್ತೂವರಿ ತೆರವು ಗೊಳಿಸುವುದರ ಬದಲಾಗಿ ರಥೋತ್ಸವಕ್ಕೆ ಅಡ್ಡಿಯಾಗಿ ಒತ್ತುವರಿ ಮಾಡಿಕೊಂಡವರ ಪರವಾಗಿ ನಿಂತಿರುವ ಅಧಿಕಾರಿಗಳು, ಹುಲ್ಲಹಳ್ಳಿ ವೃತ್ತದಲ್ಲಿ ಅನಧಿಕೃತ ಕಂಪೌಂಡ್‌ ನಿರ್ಮಾಣಕ್ಕೆ ಸಾಥ್‌ ನೀಡಿದ್ದಾರೆ ಎಂದು ಆರೋಪಿಸಿದರು.

Advertisement

ಕೊಳವೆ ಬಾವಿಗಳು ಮುಂತಾದ ಸಮಸ್ಯೆಗಳ ಸರಮಾಲೆಗಳನ್ನು ಜಿಲ್ಲಾ ದಂಡಾಧಿಕಾರಿಗಳ ಮುಂದಿಟ್ಟ ಜನತೆ  ನಿಗದಿತ ಸ್ಥಳದಲ್ಲೇ ಉರುಳುಸೇವೆ ಮಾಡಲು ಅವಕಾಶ ನೀಡಿ ಪಾರ್ಕಿಂಗ್‌, ಪಾದರಕ್ಷೆ ಗಳ ಹೆಚ್ಚಿನ ಹಣ ವಸೂಲಿಯಂತಹ ಅಕ್ರಮಕ್ಕೆ ಕಡಿವಾಣ ಹಾಕಿ ಎಂದರು.

ದೂರುಗಳನ್ನು ಆಲಿಸಿದ ಜಿಲ್ಲಾಧಿಕಾರಿ ಡಿ.ರಂದೀಪ್‌ ಮಾತನಾಡಿ, ದೇವಾಲಯದ ಹಣ ದುರುಪಯೋಗ ಪಡಿಸಿಕೊಂಡಿರುವ ತಪ್ಪಿತಸ್ಥ ನೌಕರರನ್ನು ರಕ್ಷಿಸುವ ಮಾತೆ ಇಲ್ಲ. ಹುಲ್ಲಹಳ್ಳಿ ವೃತ್ತದ ಕಂಪೌಂಡ್‌ ಕಾಮಗಾರಿ ಸ್ಥಗಿತ ಗೊಳಿಸಲಾಗಿದೆ. ಒತ್ತುವರಿ ತೆರವಿನ ಕುರಿತು ಸಹ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಿದ್ಧತೆ ಎಚ್ಚರ ವಹಿಸಿ: ಶಾಸಕ ಕಳಲೆ ಎನ್‌.ಕೇಶವಮೂರ್ತಿ ಮಾತನಾಡಿ, ಜಾತ್ರೆಯನ್ನು ಯಶಸ್ವಿಗೊಳಿಸಲು ಎಲ್ಲಾ ಇಲಾಖೆ ನೌಕರರು ಸೂಕ್ತ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಕರೆ ನೀಡಿದರು. ಲಕ್ಷಾಂತರ ಭಕ್ತರು ಆಗಮಿಸುವ ಈ ರಥೋತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಎಡೆಯಾಗದಂತೆ ಎಚ್ಚರಿಕೆವಹಿಸುವಂತೆ  ಅವರು ಸೂಚಿಸಿದರು.

ಸ‌ಭೆಯಲ್ಲಿ ನಗರಸಭಾಧ್ಯಕ್ಷೆ ಪಿ.ಪುಷ್ಪಲತಾ, ಅಪರ ಜಿಲ್ಲಾಧಿಕಾರಿಯಾದ ಯೋಗೀಶ್‌, ತಹಶೀಲ್ದಾರ್‌ ಎಂ.ದಯಾನಂದ್‌, ದೇವಾಲಯದ ಇಒ ಎಚ್‌.ಎಂ.ಕುಮಾರಸ್ವಾಮಿ ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದರು.

ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ: ದೊಡ್ಡಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯ ಮುಕ್ತಾಯದ ನಂತರ ವರದಿಗಾರರು ಹಾಗೂ ಸಾರ್ವಜನಿಕರು ಸಭೆಯಿಂದ ಹೊರಹೋದ ನಂತರ ರಂದೀಪ್‌   ಸಭೆಯಲ್ಲಿ ಕೇಳಿಬಂದ ದೂರುಗಳ ಕುರಿತಂತೆ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಪಟ್ಟಣದ ರಸ್ತೆಗಳ ಆಧುನಿಕರಣದಲ್ಲಿ ಅಕ್ರಮಕ್ಕೆ ಬೆಂಗಾವಲಾಗಿ ನಿಂತಿರುವ ಅಧಿಕಾರಿಗಳ ವಿರುದ್ಧ ಗುಡುಗಿದ ಜಿಲ್ಲಾಧಿಕಾರಿಗಳು ನೀವು ನೀಡಿದ ಮಾಹಿತಿಯೊಂದಿಗೆ ಬೇರೆ ಕಡೆಯಿಂದಲೂ ದಾಖಲೆ ತರಿಸಿಕೊಂಡಿದ್ದು, ತಪ್ಪು ಮಾಡಿರುವವರನ್ನು ಸುಮ್ಮನೆ ಬಿಡುವದಿಲ್ಲ ಎಂದು ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next