ಬೆಂಗಳೂರು: ಹೊಸ ವರ್ಷಾಚರಣೆಯ ವೇಳೆ ಸಂಭವಿಸಬಹುದಾದಂತಹ ರಸ್ತೆ ಅಪಘಾತಗಳಿಂದ ಜೀವ ಹಾನಿಯನ್ನು ತಡೆಗಟ್ಟಲೆಂದು 108 ಆರೋಗ್ಯ ಕವಚ ಆಂಬ್ಯುಲೆನ್ಸ್ ಸೇವೆಯನ್ನು ಅಗತ್ಯ ಪ್ರಮಾಣದಲ್ಲಿ ಒದಗಿಸಲು ರಾಜ್ಯಾದ್ಯಂತ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಾಮಾನ್ಯ ದಿನಗಳಿಗಿಂತ ಹೊಸ ವರ್ಷಾಚರಣೆಗಳಲ್ಲಿ ಶೇ.30ರಿಂದ 35 ಹೆಚ್ಚು ಅಪಘಾತದ ಪ್ರಕರಣಗಳು ವರದಿಯಾಗಿವೆ.
ಹೀಗಾಗಿ, ದೊಡ್ಡ ಪ್ರಮಾಣದಲ್ಲಿ ಹೊಸ ವರ್ಷಾಚರಣೆ ನಡೆಯುವ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ ಮತ್ತು ಮಂಗಳೂರುಗಳಂತಹ ನಗರಗಳಲ್ಲಿ ಹೆಚ್ಚುವರಿ ವಾಹನ ನಿಯೋಜನೆ ಜತೆಗೆ ಪೊಲೀಸ್ ನಿಯಂತ್ರಣ ಕೇಂದ್ರದ ಹಿರಿಯ ಅಧಿಕಾರಿಗಳಿಗೆ ನೇರ ಸಂಪರ್ಕ ಕಲ್ಪಿಸುವ ಮೂಲಕ ಅವಘಡ ಸಂಭವಿಸಿದ ಸ್ಥಳಕ್ಕೆ ತ್ವರಿತವಾಗಿ ತಲುಪಲು ಕ್ರಮಕೈಗೊಳ್ಳಲಾಗಿದೆ.
ಡಿ. 31ರ ರಾತ್ರಿ ರಾತ್ರಿ 11.45 ರಿಂದ 12.30 ವರೆಗೆ ಮೊಬೈಲ್ ಸಂಪರ್ಕದಲ್ಲಿ ಒಟ್ಟು ತೊಡಕು ಸಂಭವಿಸುವುದರಿಂದ ಪೊಲೀಸ್ ನಿಸ್ತಂತು ಜಾಲದ ಮೂಲಕ ಅವಘಡಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸ್ವೀಕರಿಸಲಾಗುತ್ತದೆ. ಅಲ್ಲದೇ ಆಂಬ್ಯುಲೆನ್ಸ್‌ಗಳನ್ನು ಹತ್ತಿರದ ಪೊಲೀಸ್ ಠಾಣೆ, ಆಸ್ಪತ್ರೆ ಮತ್ತು ಅಗ್ನಿಶಾಮಕ ಇತ್ಯಾದಿ ಸ್ಥಳಗಳಲ್ಲಿ ನಿಯೋಜಿಸಲಾಗಿದೆ. ಇನ್ನು ಸಿಬ್ಬಂದಿಯ ರಜೆಯನ್ನು ರದ್ದುಗೊಳಿಸಿ ಸೇವೆಗಾಗಿ ಹಾಜರಾಗುವಂತೆ ಸೂಚಿಸಲಾಗಿದೆ.
ಅತ್ಯಂತ ದೊಡ್ಡ ಪ್ರಮಾಣದಲ್ಲಿ ಹೊಸ ವರ್ಷಾಚರಣೆ ನಡೆಯುವ ಬೆಂಗಳೂರು ನಗರದ ವ್ಯಾಪ್ತಿಯಲ್ಲಿಯೇ 72 ಆಂಬ್ಯುಲೆನ್ಸ್ ಗಳನ್ನು ಮತ್ತು 19 ಬೈಕ್ ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಲಾಗಿದೆ. ಜತೆಗೆ ರಾಜ್ಯದ ಎಲ್ಲಾ ನಗರಗಳಲ್ಲೂ ಪೊಲೀಸ್ ಸಿಬ್ಬಂದಿ ವಾಹನ ಮತ್ತು ಪೊಲೀಸ್ ನಿಯಂತ್ರಣ ಕೇಂದ್ರದೊಂದಿಗೆ ತುರ್ತು ಸಂದರ್ಭ ನಿಭಾಯಿಸಲು ಆಂಬ್ಯುಲೆನ್ಸ್ ಗಳ ಸಿಬ್ಬಂದಿಗಳ ಮೊಬೈಲ್ ನಂಬರ್‌ಗಳನ್ನು ಹಂಚಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.