Advertisement
ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ, ಬಡ ಹೆಣ್ಣು ಮಕ್ಕಳಿಗೆ ಹೊಲಿಗೆ ಯಂತ್ರವನ್ನು ನೇರವಾಗಿ ವಿತರಿಸುವ ಯೋಜನೆಗೆ ಮರು ಚಾಲನೆ ನೀಡುವುದು, ಯುವ ಸಮೂಹಕ್ಕೆ ಬಹುಪಯೋಗಿ ಸೈಕಲ್ ವಿತರಿಸುವುದು, ಪೌರ ಕಾರ್ಮಿಕರು ಹಾಗೂ ಹಿಂದುಳಿದ, ಅಲ್ಪಸಂಖ್ಯಾತರ, ಪರಿಶಿಷ್ಟ ಜಾತಿ, ವರ್ಗಗಳ ಅಭಿವೃದ್ಧಿಗೆ ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚು ಒತ್ತು ನೀಡುವ ನಿರೀಕ್ಷೆಯಿದೆ.
Related Articles
Advertisement
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆಸ್ತಿ ತೆರಿಗೆ ಸಂಗ್ರಹದಲ್ಲಿ ಇದೇ ಮೊದಲ ಬಾರಿ ಪಾಲಿಕೆಗೆ 2 ಸಾವಿರ ಕೋಟಿ ರೂಪಾಯಿಗೂ ಹೆಚ್ಚಿನ ಆದಾಯ ಸಂಗ್ರಹವಾಗಿದೆ. ಜತೆಗೆ ಜಾಹೀರಾತು, ಒಎಫ್ಸಿ, ಮಾರುಕಟ್ಟೆ ಹೀಗೆ ವಿವಿಧ ಮೂಲಗಳಿಂದ ಬರುವ ಆದಾಯದ ಪ್ರಮಾಣದಲ್ಲಿ ಸ್ವಲ್ಪಮಟ್ಟಿಗೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಬಜೆಟ್ ಗಾತ್ರ 10 ಸಾವಿರ ಕೋಟಿ ಮೀರುವ ನಿರೀಕ್ಷೆಗಳಿವೆ.
ಹೊಲಿಗೆ ಯಂತ್ರ: ಬಡ ಹಾಗೂ ಮಧ್ಯಮ ವರ್ಗದ ಮಹಿಳೆಯರಿಗೆ ಸ್ವಯಂ ಉದ್ಯೋಗ ದೊರಕಿಸಿ ಕೊಡುವ ಉದ್ದೇಶದಿಂದ ನೀಡಲಾಗುತ್ತಿದ್ದ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮ ಹಲವು ವರ್ಷಗಳಿಂದ ಸ್ಥಗಿತಗೊಂಡಿತ್ತು. ಚೆಕ್ ಮೂಲಕ ಹೊಲಿಗೆ ಯಂತ್ರದ ಮೊತ್ತ ನೀಡಲಾಗುತ್ತಿತ್ತಾದರೂ ಅದು ಕಾರಣಾಂತರಗಳಿಂದ ನಿಂತಿತ್ತು. ಈ ವರ್ಷದ ಬಜೆಟ್‌ನಲ್ಲಿ ಹೊಲಿಗೆ ಯಂತ್ರ ವಿತರಣೆ ಮತ್ತೆ ಆರಂಭಿಸಲು ನಿರ್ಧರಿಸಲಾಗಿದೆ. ಮೇಯರ್ ಪದ್ಮಾವತಿ ಈ ವಿಚಾರದಲ್ಲಿ ಹೆಚ್ಚು ಆಸಕ್ತಿ ವಹಿಸಿದ್ದು, ಪಕ್ಷಾತೀತವಾಗಿ ಇತರೆ ಮಹಿಳಾ ಸದಸ್ಯೆಯರ ಒತ್ತಾಯವೂ ಇದೆ ಎಂದು ಹೇಳಲಾಗಿದೆ.
ಮಾಲಿನ್ಯ ತಡೆಗೆ ಬೈಸಿಕಲ್: ಪ್ರತಿ ವಾರ್ಡ್‌ನಲ್ಲಿರುವ 50 ಯುವಕರಿಗೆ ಬಹುಪಯೋಗಿ ಬೈಸಿಕಲ್ ವಿತರಿಸುವ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಲಾಗುವುದು ಎಂದು ತಿಳಿದು ಬಂದಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ ರುದ್ರಭೂಮಿಗಳು ಮೂಲ ಸೌಲಭ್ಯಗಳಿಲ್ಲದೆ ಸೊರಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ 2017ಧಿ-18 ಸಾಲಿನ ಬಜೆಟ್‌ನಲ್ಲಿ ನಗರದಲ್ಲಿರುವ ಎಲ್ಲ ರುದ್ರಭೂಮಿಗಳ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮ ಘೊಷಣೆಯಾಗಲಿದೆ.
ಈ ಬಾರಿಯ ಬಜೆಟ್‌ನಲ್ಲಿ ಸ್ತ್ರೀಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಬಡವರು ಹಾಗೂ ಯುವ ಸಮೂಹಕ್ಕೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ರೂಪಿಸಲು ಚಿಂತನೆ ನಡೆಸಲಾಗಿದೆ. ಜತೆಗೆ ಪರಿಸರ ಸಂರಕ್ಷಣೆಗೆ ಹೆಚ್ಚು ಆದ್ಯತೆ ನೀಡಲು ಹಸಿರು ಉಳಿಸುವ ಯೋಜನೆಗಳಿಗೆ ಹೆಚ್ಚು ಒತ್ತು ನೀಡಲಾಗುವುದು. -ಜಿ.ಪದ್ಮಾವತಿ, ಮೇಯರ್ ಬಿಬಿಎಂಪಿಯಲ್ಲಿ ಅನಗತ್ಯ ವೆಚ್ಚ ಸೋರಿಕೆ ತಡೆಗಟ್ಟಿ ಸಂಪನ್ಮೂಲ ಕ್ರೋಢೀಕರಣಕ್ಕೆ ಹೆಚ್ಚು ಒತ್ತು ನೀಡುವುದು. ಆಡಳಿತ ಚುರುಕುಗೊಳಿಸಲು ಖಾಲಿ ಹುದ್ದೆಗಳ ಭರ್ತಿ ಮಾಡಿಕೊಳ್ಳುವುದು. ಜನಪರ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ಕೊಡುವ ವಾಸ್ತವ ಬಜೆಟ್ ಮಂಡಿಸಲಾಗುವುದು.
-ಎಂ.ಕೆ.ಗುಣಶೇಖರ್, ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ * ವೆಂ.ಸುನೀಲ್‌ಕುಮಾರ್