Advertisement

ಹಸಿ ಕಸ ಸಂಗ್ರಹ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ

12:03 PM Oct 13, 2020 | Suhan S |

ಬೆಂಗಳೂರು: ನಗರದಲ್ಲಿ ಕಸ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಒಂದು ನಿರ್ದಿಷ್ಟ ಚೌಕಟ್ಟು ರೂಪುಗೊಳ್ಳುತ್ತಿದ್ದು, ಪಾಲಿಕೆ ಇದೀಗ ಯಲಹಂಕ ಹಾಗೂ ದೊಡ್ಡಬೊಮ್ಮಸಂದ್ರ ಸೇರಿದಂತೆ 74 ವಾರ್ಡ್‌ ಗಳಲ್ಲಿ ಹಸಿ ಕಸ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ.

Advertisement

ನಗರದಲ್ಲಿ ಈಗಾಗಲೇ 38 ವಾರ್ಡ್‌ನಲ್ಲಿ ಪ್ರತ್ಯೇಕ ಹಸಿ ಕಸ ಯೋಜನೆ ಜಾರಿಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, 26 ವಾರ್ಡ್‌ಗಳಲ್ಲಿ ಈ ಯೋಜನೆ ಜಾರಿಯಾಗಿದೆ.  ನಗರದಲ್ಲಿ ಮೂಲ ಹಂತದಲ್ಲೇ ಕಸ ವಿಂಗಡಣೆ ಆಗದೆ ಇರುವುದು ಹಾಗೂ ಒಟ್ಟಿಗೆ ಸಂಗ್ರಹಿಸಿ ಭೂ ಭರ್ತಿಗೆ ಹಾಕುವುದು ಸೇರಿದಂತೆ ಎಲ್ಲಾ ಸಮಸ್ಯೆ ತಪ್ಪಿಸಲು ಹಸಿಕಸವನ್ನು ಪ್ರತ್ಯೇಕವಾಗಿ ಸಂಗ್ರಹ ಮಾಡುವ ಯೋಜನೆಗೆ ಸೆಪ್ಟೆಂಬರ್‌ಲ್ಲಿ ಪಾಲಿಕೆ ಚಾಲನೆ ನೀಡಿತ್ತು. ಇದರ ಬೆನ್ನಲ್ಲೇ ಬಾಕಿ ವಾರ್ಡ್‌ಗಳಲ್ಲೂ ಪ್ರತ್ಯೇಕ ಕಸ ಸಂಗ್ರಹ ಯೋಜನೆ ಪ್ರಾರಂಭವಾಗುತ್ತಿದ್ದು, ಹೊಸದಾಗಿ 10 ವಾರ್ಡ್‌ಗಳಲ್ಲಿ ಟೆಂಡರ್‌ದಾರರಿಗೆ ಕಾರ್ಯಾದೇಶ ಪತ್ರ ನೀಡಲಾಗಿದೆ. ಇನ್ನು ಟೆಂಡರ್‌ನಲ್ಲಿ ಕಡಿಮೆ ಬಿಡ್‌ ಮಾಡಿ ಯೋಜನೆ ಅನುಷ್ಠಾನಕ್ಕೆ ಹಿಂದೇಟು ಹಾಕುತ್ತಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಪಾಲಿಕೆ ತೀರ್ಮಾನಿಸಿದೆ.

ಒಂದು ವರ್ಷ ಕಪ್ಪು ಪಟ್ಟಿಗೆ: ನಗರದಲ್ಲಿ ಪ್ರತ್ಯೇಕ ಕಸ ಸಂಗ್ರಹ ಮಾಡುವ ಯೋಜನೆಯ ಟೆಂಡರ್‌ನಲ್ಲಿ ಭಾಗವಹಿಸಿ ಅದರ ಅನುಷ್ಠಾನದಲ್ಲಿ ಲೋಪವೆಸಗುವ ಹಾಗೂ ಹಿಂದೇಟು ಹಾಕುವ ಗುತ್ತಿಗೆದಾರರು 1ವರ್ಷ ಕಪ್ಪುಪಟ್ಟಿಗೆ ಸೇರಿಸಲು ತೀರ್ಮಾನಿಸಲಾಗಿದೆ. ಈ ಸಂಬಂಧ “ಉದಯವಾಣಿ’ಯೊಂದಿಗೆ ಮಾತನಾಡಿದ ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ರಂದೀಪ್‌, ಕಾರ್ಯಾದೇಶ ನೀಡಿದ ಮೇಲೂ ಯೋಜನೆ ಅನುಷ್ಠಾನಕ್ಕೆ ಮುಂದಾಗದ ಗುತ್ತಿಗೆದಾರರ ಬಿಡ್‌ ರದ್ದುಪಡಿಸಿ ಅಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ತೀರ್ಮಾನಿಸಲಾಗಿದೆ. ಎಲ್‌- 2 (ಕಡಿಮೆ ಬಿಡ್‌ ಮಾಡಿದ 2ನೇ ಗುತ್ತಿಗೆದಾರರಿಗೆ) ಟೆಂಡರ್‌ ನೀಡುತ್ತೇವೆ. ಒಂದೊಮ್ಮೆ ಇವರೂ ಲಭ್ಯವಾ ಗದೆ ಇದ್ದರೆ, ಹೊಸ ಟೆಂಡರ್‌ ಕರೆಯಲಾಗುವುದು ಎಂದು ಹೇಳಿದರು.

ಮರು ಟೆಂಡರ್‌ ಮಾಡಲು ನಿರ್ಧಾರ: ದೇವರ ಜೀವನಹಳ್ಳಿ, ಸಗಾಯಪುರ ಸೇರಿ 9 ವಾರ್ಡ್‌ಗಳಲ್ಲಿ ಟೆಂಡರ್‌ದಾರರು ಹಿಂದೇಟು ಹಾಗೂ ಹಾಲಿ ಟೆಂಡರ್‌ನಲ್ಲಿ ಸಮಸ್ಯೆ ಸೇರಿದಂತೆ ವಿವಿಧಕಾರಣಗಳಿಗೆ 9 ವಾರ್ಡ್‌ಗಳಲ್ಲಿ ಮರುಟೆಂಡರ್‌ ಕರೆಯಲು ಪಾಲಿಕೆ ನಿರ್ಧರಿಸಿದೆ.

26 ವಾರ್ಡ್‌ಗಳಲ್ಲಿ ಹಸಿಕಸ ಟೆಂಡರ್‌: ನಗರದ 38 ವಾರ್ಡ್‌ಗಳಲ್ಲಿ ಮೊದಲ ಹಂತದಲ್ಲಿ ಪ್ರತ್ಯೇಕ ಹಸಿಕಸ ಸಂಗ್ರಹ ಯೋಜನೆ ರೂಪಿಸಿಕೊಳ್ಳಲಾಗಿತ್ತು. ಇದರಲ್ಲಿ 26 ವಾರ್ಡ್‌ಗಳಲ್ಲಿ ಈಗಾಗಲೇ ಹಸಿಕಸ ಯೋಜನೆ ಅನುಷ್ಠಾನವಾಗಿದೆ.

Advertisement

ಕೆಂಪೇಗೌಡ ವಾರ್ಡ್‌, ಚೌಡೇಶ್ವರಿ ವಾರ್ಡ್‌, ಅಟ್ಟೂರು, ವಿದ್ಯಾರಣ್ಯಪುರ, ವಿಜಿನಾಪುರ, ಬಸವನಪುರ, ಹೂಡಿ, ಗರುಡಾಚಾರಪಾಳ್ಯ, ಗೋವಿಂದರಾಜ ನಗರ, ಮೂಡಲಪಾಳ್ಯ, ನಾಗರಬಾವಿ, ನಾಯಂಡ ಹಳ್ಳಿ, ರಾಯಪುರ, ಛಲವಾದಿ ಪಾಳ್ಯ, ಅಜಾದ್‌ನಗರ, ಲಕ್ಕಸಂದ್ರ, ಆಡುಗೋಡಿ, ಗಾಳಿ ಆಂಜನೇಯಸ್ವಾಮಿ ದೇವಸ್ಥಾನ ವಾರ್ಡ್‌, ದೀಪಾಂಜಲಿ ನಗರ, ಹೊಸಕೆರೆ ಹಳ್ಳಿ, ಗಣೇಶ ಮಂದಿರ, ಯಡಿಯೂರು, ಬೈರಸಂದ್ರ, ಬೊಮ್ಮನಹಳ್ಳಿ, ಮಂಗಮ್ಮನ ಪಾಳ್ಯ ಹಾಗೂ ಸಿಂಗ ಸಂದ್ರದಲ್ಲಿ ಜಾರಿಯಾಗಿದೆ.

ಒಣ ಕಸ ಸಂಗ್ರಹ ಘಟಕ ಅಭಿವೃದ್ಧಿ: ನಗರದಲ್ಲಿ 165 ಒಣಕಸ ಸಂಗ್ರಹ ಘಟಕಗಳಿವೆ. ಇದರಲ್ಲಿ 141 ಕೇಂದ್ರಗಳಲ್ಲಿ ಸಕ್ರಿಯವಾಗಿ ಒಣಕಸ ಸಂಗ್ರಹ ಮಾಡಲಾಗುತ್ತಿದೆ. ಪ್ರತ್ಯೇಕ ಕಸ ಸಂಗ್ರಹ ಯೋಜನೆ ಜಾರಿಯಾದ ಮೇಲೆ ಒಣಕಸ ಸಂಗ್ರಹ ಘಟಕಗಳ ಅಭಿವೃದ್ಧಿಗೂ ಮುಹೂರ್ತ ಕೂಡಿಬಂದಿದೆ.ಈಗಾಗಲೇ 38 ವಾರ್ಡ್‌ಗಳಲ್ಲಿಯೂ ಒಣಕಸ ಘಟಕ ಹಾಗೂ ಸ್ತ್ರೀಶಕ್ತಿ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಭಾಗಿತ್ವ ಪಡೆದುಕೊಳ್ಳಲಾಗುತ್ತಿದೆ. ಇದಲ್ಲದೆ ಪಾಲಿಕೆಯ 8 ವಲಯಗಳ ವಿವಿಧ ಭಾಗದ 29 ಒಣಕಸ ಸಂಗ್ರಹ ಘಟಕಗಳ ನವೀಕರಣ ಕಾರ್ಯಕ್ಕೂ ಪಾಲಿಕೆ ಚಾಲನೆ ನೀಡಲಾಗಿದೆ.

ಹಿಂದೇಟು ಹಾಕುತ್ತಿರುವುದಕ್ಕೆ ಕಾರಣವೇನು? :  ಕೆಲವು ಗುತ್ತಿಗೆದಾರರು ಅತೀ ಕಡಿಮೆ ಮೊತ್ತಕ್ಕೆ ಬಿಡ್‌ ಮಾಡಿದ್ದಾರೆ. ಅತಿ ಕಡಿಮೆ ಮೊತ್ತಕ್ಕೆ (20 -30 ಪ್ರತಿಶತಕ್ಕೆ )ಬಿಡ್‌ ಮಾಡಿದ್ದಾರೆ. ಪಾಲಿಕೆ ಎಲ್ಲಾ ಆಟೋ ಟಿಪ್ಪರ್‌, ಕಾಂಪ್ಯಾಕ್ಟರ್‌ ವಾಹನಗಳಿಗೆ ಜಿಪಿಎಸ್‌ ಅಳವಡಿಸಬೇಕು. ಇವುಗಳ ವಿವರ ನೀಡಬೇಕು, ಎಲ್ಲಾ ಕಸದ ವಾಹನಗಳಲ್ಲಿ ಕವರ್‌ (ಕಸ ಹೊರಕ್ಕೆ ಬೀಳದಂತೆ) ಹಾಗೂ ಆಟೋ ಟಿಪ್ಪರ್‌ ಚಾಲಕರ ಬಳಿ ಕಡ್ಡಾಯವಾಗಿ ಡ್ರೈವರ್‌ ಲೈಸನ್ಸ್‌ ಇರಬೇಕು. ಇಲ್ಲವಾದರೆ ಕ್ರಮ ಕೈಗೊಳ್ಳುವುದಾಗಿ ಪಾಲಿಕೆ ಎಚ್ಚರಿಕೆ ನೀಡಿದೆ. ಈ ಸ್ಪಷ್ಟ ಸಂದೇಶದಿಂದ ತಬ್ಬಿಬ್ಟಾಗಿರುವ ಗುತ್ತಿಗೆದಾರರು ಕಾರ್ಯಾದೇಶ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

ಹೊಸದಾಗಿ 74 ವಾರ್ಡ್‌ಗಳಲ್ಲೂ ಪ್ರತ್ಯೇಕ ಹಸಿ ಕಸ ಸಂಗ್ರಹಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಟೆಂಡರ್‌ ನಿಯಮ ಉಲ್ಲಂಘನೆ ಮಾಡುವವರನ್ನುಕಪ್ಪುಪಟ್ಟಿಗೆ ಸೇರಿಸಲಾಗುವುದು. ಇದರಿಂದ ಮುಂದಿನ 1ವರ್ಷ ಗುತ್ತಿಗೆದಾರರು ಯಾವುದೇ ಟೆಂಡರ್‌ನಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ರಂದೀಪ್‌, ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ)

 

ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next