ಬೆಂಗಳೂರು: ರಾಜ್ಯದಲ್ಲಿರುವ ಆರೋಗ್ಯ ಕವಚ 108 ಸೇವೆಯೊಂದಿಗೆ ವಿವಿಧ ಆಸ್ಪತ್ರೆಗಳಲ್ಲಿರುವ ಆ್ಯಂಬುಲೆನ್ಸ್‌ಗಳನ್ನು ವಿಲೀನಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಇದರೊಂದಿಗೆ ಪ್ರತಿ 10ರಿಂದ 15 ಕಿ.ಮೀ. ವ್ಯಾಪ್ತಿಯಲ್ಲಿ ಆ್ಯಂಬುಲೆನ್ಸ್‌ಗಳನ್ನು ನಿಲುಗಡೆ ಮಾಡುವ ಕುರಿತು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.
ರಾಜ್ಯದಲ್ಲಿ ಪ್ರಸ್ತುತ 711 ಆರೋಗ್ಯ ಕವಚ 108 ಸೇವೆಯ ಆ್ಯಂಬುಲೆನ್ಸ್‌ಗಳಿದ್ದು, ಇವುಗಳ ಜತೆಗೆ ವಿವಿಧ ಆಸ್ಪತ್ರೆಗಳ ಸುಮಾರು 800 ಆ್ಯಂಬುಲೆನ್ಸ್ ಗಳನ್ನು ಆರೋಗ್ಯ ಕವಚ ಯೋಜನೆಯಡಿ ವಿಲೀನಗೊಳಿಸುವ ಕುರಿತು 2017-18ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಅದರಂತೆ ವಿಲೀನ ಪ್ರಕ್ರಿಯೆ ಆರಂಭಿಸಲಾಗಿದೆ.
ರಾಜ್ಯದ ಆ್ಯಂಬುಲೆನ್ಸ್‌ಗಳ ವಿಲೀನ ಮತ್ತು ಅವುಗಳಿಗೆ ತುರ್ತು ಚಿಕಿತ್ಸಾ ಸೇವೆ ಒದಗಿಸಲು ಸೇವಾದಾರರ ಆಯ್ಕೆ ಮತ್ತು ಇತರೆ ಚಟುವಟಿಕೆಗಳು ಜಾರಿಯಲ್ಲಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ 711 ಆರೋಗ್ಯ ಕವಚ ಮತ್ತು 800 ಇತರೆ ಆ್ಯಂಬುಲೆನ್ಸ್‌ಗಳನ್ನು ಲಭ್ಯವಿರುವ ಸಂಪನ್ಮೂಲ ಬಳಸಿಕೊಂಡು 10-15 ಕಿ.ಮೀ. ವ್ಯಾಪ್ತಿಯಲ್ಲಿ ನಿಲುಗಡೆ ಮಾಡಿ ತುರ್ತು ಚಿಕಿತ್ಸೆ ಕರೆಗೆ ಸ್ಪಂದಿಸಲು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಅಲ್ಲದೆ, ಈ ಯೋಜನೆ ಜಾರಿಗೊಳಿಸುವ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಕೆಲವು ಮಾರ್ಗಸೂಚಿಗಳನ್ನು ನೀಡಲಾಗಿದೆ.
ಲಭ್ಯವಿರುವ 1511 ಆ್ಯಂಬುಲೆನ್ಸ್‌ಗಳನ್ನು ನಿಗದಿತ ಸ್ಥಳಗಳಲ್ಲಿ ಒಬ್ಬ ಚಾಲಕ ಇರುವ ಆ್ಯಂಬುಲೆನ್ಸ್‌ಗಳನ್ನು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಹಾಗೂ ಇಬ್ಬರು ಚಾಲಕರು ಲಭ್ಯವಿರುವ ಆ್ಯಂಬುಲೆನ್ಸ್‌ಗಳನ್ನು ಬೆಳಗ್ಗೆ 8ರಿಂದ ಸಂಜೆ ನಾಲ್ಕರವರೆಗೆ ಮೊದಲ ಪಾಳಿ ಹಾಗೂ ಸಂಜೆ 4ರಿಂದ ಮಧ್ಯರಾತ್ರಿ 12ರವರೆಗೆ ಎರಡನೇ ಪಾಳಿಯಲ್ಲಿ ನಿಲ್ಲಿಸಬೇಕು. ಉಳಿದ ಅವಧಿಯಲ್ಲಿ ತಮ್ಮ ಆಸ್ಪತ್ರೆಗಳ ಜಾಗದಲ್ಲಿ ನಿಲ್ಲಿಸಬೇಕು ಎಂದು ಸೂಚನೆ ನೀಡಲಾಗಿದೆ.
ಅಲ್ಲದೆ, ವಿಲೀನಗೊಳ್ಳುತ್ತಿರುವ 800 ಆ್ಯಂಬುಲೆನ್ಸ್ ಚಾಲಕರ ಮೊಬೈಲ್ ಸಂಖ್ಯೆಗಳು ಸಂಬಂಧಿಸಿದ ಆಸ್ಪತ್ರೆ ವೈದ್ಯಾಧಿಕಾರಿಗಳು, ತುರ್ತು ಚಿಕಿತ್ಸಾ ವಿಭಾಗ ಮತ್ತು ಇತರೆ ವಿಭಾಗ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಬಳಿ ಇರಬೇಕು. ಜತೆಗೆ ಈ ಸಂಖ್ಯೆಯನ್ನು 108 ಕರೆ ಕೇಂದ್ರಕ್ಕೂ ಒದಗಿಸಲಾಗುವುದು ಎಂದು ಹೇಳಲಾಗಿದೆ.
ಆ್ಯಂಬುಲೆನ್ಸ್‌ಗಳಿಗೆ ಇಂಧನ ಒದಗಿಸುವುದು, ಅವುಗಳ ಕಾರ್ಯನಿರ್ವಹಣೆ ಪರಿಶೀಲನೆ ಕುರಿತು ಕೂಡ ಕೆಲವು ಸೂಚನೆಗಳನ್ನು ನೀಡಲಾಗಿದೆ. ಅಲ್ಲದೆ, ತಾಲೂಕು ವೈದ್ಯಾಧಿಕಾರಿಗಳು ಪ್ರತಿ ವಾರ ತಮ್ಮ ತಾಲೂಕಿನ ಆ್ಯಂಬುಲೆನ್ಸ್‌ಗಳ ವರದಿ ಪಡೆದು ಯೋಜನೆ ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಅಗತ್ಯ ಬಿದ್ದರೆ ವರದಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಅಥವಾ ಅವರ ಮೂಲಕ ಸರ್ಕಾರಕ್ಕೆ ಕಳುಹಿಸಿಕೊಡಬೇಕು ಎಂದೂ ಸೂಚನೆ ನೀಡಲಾಗಿದೆ.
ಸರ್ಕಾರಿ ಆಸ್ಪತ್ರೆಗೇ ದಾಖಲಿಸಬೇಕು
ಆ್ಯಂಬುಲೆನ್ಸ್ ಚಾಲಕರು ತಮ್ಮ ವಾಹನದಲ್ಲಿ ಕರೆದೊಯ್ಯುವ ರೋಗಿಗಳನ್ನು ಸರ್ಕಾರಿ ಆಸ್ಪತ್ರೆಗೇ ದಾಖಲಿಸಬೇಕು. ವಿಶೇಷ ಪ್ರಕರಣಗಳಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೆ ಅದಕ್ಕೆ ರೋಗಿಗಳ ಸಂಬಂಧಿಕರ ಸಹಿಯೊಂದಿಗೆ ಸೂಕ್ತ ಸಮಜಾಯಿಷಿಯನ್ನು ರೋಗಿಗಳ ನಿರ್ವಹಣೆ ದಾಖಲೆಯಲ್ಲಿ ನಮೂದಿಸಬೇಕು ಎಂದು ಸೂಚನೆ ನೀಡಲಾಗಿದೆ.