Advertisement
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 16,86,023 ಮತದಾರರಿದ್ದಾರೆ. ಇವರಲ್ಲಿ 8,42,742 ಮಂದಿ ಪುರುಷರು ಹಾಗೂ 8,43,167 ಮಂದಿ ಮಹಿಳೆಯರು. ಇತರರು 114 ಮಂದಿ ಇದ್ದಾರೆ. ಕ್ಷೇತ್ರದಲ್ಲಿ ಒಟ್ಟು 2005 ಮತಗಟ್ಟೆಗಳನ್ನು ತೆರೆಯಲಾಗಿದೆ. ಇವುಗಳಲ್ಲಿ 261 ನಗರ ಪ್ರದೇಶದಲ್ಲಿದ್ದು, 1744 ಮತಗಟ್ಟೆಗಳು ಗ್ರಾಮೀಣ ಪ್ರದೇಶದಲ್ಲಿವೆ ಎಂದರು.
Related Articles
Advertisement
ಎಲ್ಲಾ ಅಭ್ಯರ್ಥಿಗಳು ಮತಗಟ್ಟೆಗೆ ಒಬ್ಬರಂತೆ ಏಜೆಂಟರನ್ನು ನೇಮಿಸಬಹುದಾಗಿದೆ. ಒಂದು ವೇಳೆ ಮತದಾರರ ಗುರುತಿನ ಚೀಟಿ ಇಲ್ಲದಿದ್ದಲ್ಲಿ ಚುನಾವಣಾ ಆಯೋಗ ತಿಳಿಸಿದ ಯಾವುದಾದರು 11 ದಾಖಲಾತಿಗಳಲ್ಲಿ ಒಂದನ್ನು ತೋರಿಸಿ ಮತಚಲಾಯಿಸಬಹುದಾಗಿದೆ ಎಂದು ತಿಳಿಸಿದರು.
ಪ್ರಸಾರ ನಿಷೇಧ: ದೇಶದಲ್ಲಿ ವಿವಿಧ ಹಂತಗಳಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಏ.11 ರಿಂದ ಮೇ 19ರವರೆಗೆ ಯಾವುದೇ ರೀತಿಯ ಮತಗಟ್ಟೆ ನಿರ್ಗಮನ ಸಮೀಕ್ಷೆ ನಡೆಸುವುದು ಹಾಗೂ ಪ್ರಸಾರ ಮಾಡುವುದನ್ನು ನಿಷೇಧಿಸಲಾಗಿದೆ ಎಂದರು.
ಮದ್ಯ ಮಾರಾಟ ನಿಷೇಧ: ಏ.16ರ ಸಂಜೆ 6 ಗಂಟೆಯಿಂದ ಏ.18ರ ಮಧ್ಯರಾತ್ರಿ ತನಕ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ. ಏ.18ರಂದು ನಡೆಯಬೇಕಿದ್ದ ಎಲ್ಲಾ ಸಂತೆ, ಜಾತ್ರೆ ಹಾಗೂ ಉತ್ಸವಗಳನ್ನು ರದ್ದುಪಡಿಸಲಾಗಿದೆ ಎಂದರು.
ಮತದಾನ ಸಂಜೆ 6 ಗಂಟೆಯವರೆಗೆ ನಡೆಯಲಿದೆ. ಆದರೆ, ಮತದಾನ ಮುಕ್ತಾಯ ಅವಧಿ ಸಮಯದಲ್ಲಿ ಸರದಿ ಸಾಲು ಇದ್ದಲ್ಲಿ. ಸಾಲಿನಲ್ಲಿರುವವರಿಗೆ ಮತದಾನ ಮಾಡಲು ಅವಕಾಶ ನೀಡಲಾಗುವುದು. ಸರಿಯಾಗಿ 6 ಗಂಟೆಗೆ ಮತಗಟ್ಟೆ ಅಧಿಕಾರಿ ಸಾಲಿನಲ್ಲಿ ನಿಂತಿದ್ದವರಿಗೆ ಟೋಕನ್ ನೀಡಲಿದ್ದಾರೆ.
ನಂತರ ಬಂದು ಸೇರಿಕೊಂಡವರಿಗೆ ಮತದಾನ ಮಾಡಲು ಅವಕಾಶ ನೀಡಲಾಗುವುದಿಲ್ಲ ಎಂದರು. ಮತಗಟ್ಟೆಯಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ವಿಕಲಚೇತನರು ಮತ್ತು ಹಿರಿಯ ನಾಗರಿಕರಿಗೆ ಪ್ರತ್ಯೇಕ ಸಾಲಿನ ವ್ಯವಸೆœ ಮಾಡಲಾಗಿದ್ದು ಎಂದು ಹೇಳಿದರು.
ಚುನಾವಣಾ ನೀತಿ ಸಂಹಿತೆ ಜಾರಿಗೊಂಡ ನಂತರ ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳನ್ನು ದಾಖಲು ಮಾಡಿಕೊಂಡು 14,11,961 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಅಂದಾಜು 48,76,107 ರೂ. ಮೌಲ್ಯದ ಮದ್ಯವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್‌ಕುಮಾರ್ ಮೀನಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್. ಲತಾಕುಮಾರಿ ಉಪಸ್ಥಿತರಿದ್ದರು.
10 ಸಖೀ, 4 ಬುಡಕಟ್ಟು , 2 ವಿಕಲಚೇತನ ಮತಗಟ್ಟೆ ಸ್ಥಾಪನೆಚಾಮರಾಜನಗರ: ಜಿಲ್ಲೆಯ ವ್ಯಾಪ್ತಿಯಲ್ಲಿ ಒಟ್ಟು 10 ಸಖೀ ಮತಗಟ್ಟೆ, 4 ಬುಡಕಟ್ಟು ,2 ವಿಕಲಚೇತನ ಮತಗಟ್ಟೆ ಮತಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ವಿಶೇಷ ವ್ಯವಸ್ಥೆ ಒದಗಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್. ಲತಾಕುಮಾರಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಾಮರಾಜನಗರ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ 10 ಸಖೀ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಮತಗಟ್ಟೆಗಳಲ್ಲಿ ಮಹಿಳಾ ಸಿಬ್ಬಂದಿಯೇ ಕಾರ್ಯನಿರ್ವಹಸಲಿದ್ದಾರೆ. ಹನೂರು ಕ್ಷೇತ್ರದಲ್ಲಿ 2, ಕೊಳ್ಳೇಗಾಲದಲ್ಲಿ 3, ಚಾಮರಾಜನಗರದಲ್ಲಿ 3 ಮತ್ತು ಗುಂಡ್ಲುಪೇಟೆಯಲ್ಲಿ 2 ಸೇರಿದಂತೆ 10 ಮತಗಟ್ಟೆ ಮತ್ತು 4 ವಿಧಾನಸಭಾ ಕ್ಷೇತ್ರಗಲ್ಲೂ ತಲಾ ಒಂದರಂತೆ 4 ಬುಡಕಟ್ಟು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಮತ್ತು ಚಾಮರಾಜನಗರ ವಿಧಾನ ಸಭಾ ಕ್ಷೇತ್ರಗಳಲ್ಲಿ ತಲಾ ಒಂದರಂತೆ ಎರಡು 7 ವಿಕಲಚೇತನ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಎಲ್ಲಾ ಮತಗಟ್ಟೆಗಳಿಗೆ ವೀಲ್‌ಚೇರ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ಹಿರಿಯರಿಗೆ, ಅಂಗವಿಕಲರಿಗೆ, ಗರ್ಭಿಣಿಯರಿಗೆ ಮತಗಟ್ಟೆಗೆ ಬರಲು ಅನುಕೂಲವಾಗುವಂತೆ ವಾಹನದ ವ್ಯವಸ್ಥೆ ಮಾಡಲಾಗಿದೆ. ದೃಷ್ಟಿ ದೋಷವುಳ್ಳವರಿಗೆ ಸಹಾಯವಾಗಲು ಬ್ರೈಲ್ ಮತ ಪತ್ರಗಳನ್ನು ಕೂಡ ಪ್ರತಿ ಮತಗಟ್ಟೆಗೆ ಸರಬರಾಜು ಮಾಡಲಾಗಿದೆ. ಅಶಕ್ತರಿಗೆ ನೆರವು ನೀಡಲು ಪ್ರತಿ ಮತಗಟ್ಟೆಯಲ್ಲಿ ಸ್ವಯಂಸೇವಕರೊಬ್ಬರು ಇರುತ್ತಾರೆ ಎಂದು ಸಿಇಒ ತಿಳಿಸಿದರು. 2 ಸಾವಿರ ಪೊಲೀಸರ ನಿಯೋಜನೆ
ಚಾಮರಾಜನಗರ: ಲೋಕಸಭಾ ಚುನಾವಣೆ ಮತದಾನದ ದಿನ ಜಿಲ್ಲೆಯಲ್ಲಿ ಶಾಂತಿಯುತ ಮತದಾನಕ್ಕಾಗಿ ಭದ್ರತೆಗಾಗಿ 2 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದು ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ತಿಳಿಸಿದರು. ಅಂದು ಮತಗಟ್ಟೆಯ ಸುತ್ತಲಿನ 200 ಮೀಟರ್ ವ್ಯಾಪ್ತಿ ಪ್ರದೇಶದಲ್ಲಿ ಸೆಕ್ಷನ್ 144ರ ಪ್ರಕಾರ ಬೆಳಗ್ಗೆ 7ರಿಂದ ಮತದಾನ ಮುಗಿಯುವ ತನಕ ನಿಷೇಧಾಜ್ಞೆ ವಿಧಿಸಲಾಗಿದೆ. ನಿಷೇಧಿತ ಪ್ರದೇಶದಲ್ಲಿ ಮೆರವಣಿಗೆ ಅಥವಾ 5 ಮಂದಿಗಿಂತ ಹೆಚ್ಚು ಜನ ಸೇರುವುದನ್ನು ನಿಷೇಧಿಸಲಾಗಿದೆ. ಯಾವುದೇ ರೀತಿಯ ಮಾರಕಾಸ್ತ್ರ, ಶಸ್ತ್ರಾಸ್ತ್ರ, ಸ್ಫೋಟಕ ವಸ್ತು ಒಯ್ಯುವುದನ್ನು, ಪ್ರತಿಕೃತಿ ಪ್ರದರ್ಶನ, ದಹನ, ಬಹಿರಂಗ ಘೋಷಣೆ ಕೂಗುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.