ಬೆಂಗಳೂರು: ರಾಜ್ಯದಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೊಳಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಹುವೈ ಟೆಲಿ ಕಮ್ಯುನಿಕೇಷನ್ ಮುಖ್ಯಸ್ಥ ಡೆರೆಕ್ ನೇತೃತ್ವದ ನಿಯೋಗದ ಜತೆ ಭೇಟಿ ನಂತರ ಸುದ್ದಿಗಾರರ ಜತೆ ಮಾತನಾಡಿ, ಹೊಸ ಶಿಕ್ಷಣ ನೀತಿ ಅನುಷ್ಠಾನಕ್ಕೆ ಅನುಕೂಲವಾಗುವಂತೆ ಕಾರ್ಯಪಡೆ ರಚನೆ ಮಾಡಲಾಗಿದೆ.
ಪದವಿ ತರಗತಿಗಳ ಪಠ್ಯಕ್ರಮ ಪರಿಷ್ಕರಣೆಯೂ ಆಗಲಿದೆ ಎಂದು ಹೇಳಿದರು. ಡಿಪ್ಲೊಮಾ ಕೋರ್ಸ್‌ಗೆ ಬೇಡಿಕೆ ಕಡಿಮೆ ಇದ್ದು ಅದರ ಸ್ವರೂಪ ಬದಲಾವಣೆ ಮಾಡಿ ಅದನ್ನು ಉದ್ಯೋಗಾಧಾರಿತ ಕೋರ್ಸ್ ಆಗಿ ಪರಿವರ್ತಿಸಲಾಗುವುದು. ಈ ಸಂಬಂಧ ನಾಸ್ಕಂ, ಮೈಕ್ರೋಸಾಫ್ಟ್ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು. ಸರ್ಕಾರಿ ಡಿಪ್ಲೊಮಾ ಹಾಗೂ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹಾಗೂ ಮೂಲ ತಂತ್ರಜ್ಞಾನ ಹಾಗೂ ಕೌಶಲ ತರಬೇತಿ ನೀಡಲು ಹುವೈ ಸಂಸ್ಥೆ ಮುಂದಾಗಿದೆ.
ಕೃತಕ ಬುದ್ಧಿ ಮತ್ತೆಯಂತಹ ಆಧುನಿಕ ತಂತ್ರಜ್ಞಾನ ವಿಷಯಗಳ ಕುರಿತು 2 ಸಾವಿರ ವಿದ್ಯಾರ್ಥಿಗಳಿಗೆ ಸರ್ಟಿಫೀಕೇಟ್ ಕೋರ್ಸ್ ನಡೆಸಲು ಹುವೈ ಸಂಸ್ಥೆ ಒಪ್ಪಿಕೊಂಡಿವೆ ಎಂದು ಹೇಳಿದರು. ಶೈಕ್ಷಣಿಕ ವರ್ಷ ಆರಂಭದ ವೇಳೆಗೆ ಉಪನ್ಯಾಸಕ ಹಾಗೂ ಪ್ರಾಂಶುಪಾಲರ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ 310 ಪ್ರಾಂಶುಪಾಲರ ಹುದ್ದೆ ತುಂಬುವ ಸಂಬಂಧ ಒಪ್ಪಿಗೆಯೂ ನೀಡಲಾಗಿದೆ ಎಂದು ಹೇಳಿದರು.
ಆನ್‌ಲೈನ್ ಮೂಲಕ ಪ್ರವೇಶ ಪ್ರಕ್ರಿಯೆಗೆ ಚಿಂತನೆ: ಮುಂದಿನ ಶೈಕ್ಷಣಿಕ ವರ್ಷದ ಪದವಿ ಪ್ರವೇಶ ಪ್ರಕ್ರಿಯೆಯನ್ನು ಆನ್ ಲೈನ್ ಮೂಲಕವೇ ನಡೆಸಲು ಕಾಲೇಜು ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. 2019-20ನೇ ಸಾಲಿನಲ್ಲೇ ಪ್ರವೇಶ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕ ಆರಂಭಿಸಿತ್ತಾದರೂ, ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಮಾಡಿರಲಿಲ್ಲ. ಆನ್‌ಲೈನ್ ಮತ್ತು ಆಫ್ಲೆ„ನ್ ಎರಡು ಆಯ್ಕೆಯನ್ನು ವಿದ್ಯಾರ್ಥಿಗಳಿಗೆ ನೀಡಲಾಗಿತ್ತು.
ಆದರೆ, ಮುಂದಿನ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್‌ಲೈನ್ ಮೂಲಕವೇ ನಡೆಸಲು ಇಲಾಖೆ ನಿರ್ಧರಿಸಲಿದೆ. ಈ ಸಂಬಂಧ ಕಾಲೇಜುಗಳಿಗೆ ಸೂಚನೆಯನ್ನು ಶೀಘ್ರ ಕಳುಹಿಸಲಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಆನ್‌ಲೈನ್ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕಾಲೇಜು ಶಿಕ್ಷಣ ಇಲಾಖೆಯ ವೆಬ್‌ಸೈಟ್ ಉನ್ನತೀಕರಿಸಲಾಗಿದೆ.
ಇದಕ್ಕಾಗಿ ರಾಜ್ಯದ 430 ಸರ್ಕಾರಿ ಪದವಿ ಕಾಲೇಜು, ಮಹಿಳಾ ಕಾಲೇಜು ಹಾಗೂ ಕಾನೂನು ಕಾಲೇಜುಗಳ ಪ್ರತ್ಯೇಕ ವೆಬ್‌ಸೈಟ್ ಸಿದ್ಧಪಡಿಸಲಾಗಿದೆ. ವಿದ್ಯಾರ್ಥಿಗಳು ಕಾಲೇಜು ಶಿಕ್ಷಣ ಇಲಾಖೆಯ ವೆಬ್‌ಸೈಟ್ ಮೂಲಕ ತಮಗೆ ಬೇಕಾದ ಕಾಲೇಜಿನ ವೆಬ್‌ಸೈಟ್ ವೀಕ್ಷಿಸಬಹುದಾಗಿದೆ. ಆಯಾ ಕಾಲೇಜುಗಳ ವೆಬ್‌ಸೈಟ್‌ನಲ್ಲಿ ಕಾಲೇಜು, ಕೋರ್ಸ್‌ಗಳ ವಿವರ, ಕಾಯಂ ಪ್ರಾಧ್ಯಾಪಕರು ಹಾಗೂ ಅತಿಥಿ ಉಪನ್ಯಾಸಕರ ಮಾಹಿತಿ ಲಭ್ಯವಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದರು.