ಮೂಡುಬಿದಿರೆ: ಮಂಗಳೂರು ವಿ.ವಿ. ಆಶ್ರಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹ ಯೋಗದೊಂದಿಗೆ, ಅಸೋಸಿ ಯೇಶನ್ ಆಫ್ ಇಂಡಿಯನ್ ಯೂನಿವರ್ಸಿಟೀಸ್ ಸಹಭಾಗಿತ್ವದಲ್ಲಿ ಜ. 4ರಿಂದ 7ರ ವರೆಗೆ ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ನಡೆಯಲಿರುವ 81ನೇ ಅಖಿಲ ಭಾರತ ಪುರುಷರ ಆ್ಯತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಸಕಲ ಸಿದ್ಧತೆಗಳಾಗಿವೆ.
5ನೇ ಬಾರಿಗೆ ಆಳ್ವಾಸ್ ಅತಿಥ್ಯದಲ್ಲಿ ಜರಗುತ್ತಿರುವ ಕ್ರೀಡಾಕೂಟದ ಉದ್ಘಾ ಟನೆಯ ಪ್ರಯುಕ್ತ, ಮಂಗಳವಾರ ಸಂಜೆ 5.30ಕ್ಕೆ ಸ್ವರಾಜ್ಯ ಮೈದಾನದ ಸಿಂಥೆಟಿಕ್ ಟ್ರ್ಯಾಕ್‌ನಲ್ಲಿ ದೇಶದ ವಿವಿಧ ವಿ.ವಿ.ಗಳ ಕ್ರೀಡಾಳುಗಳ ಆಕರ್ಷಕ ಪಥಸಂಚಲನ ನೆರವೇರಲಿದೆ. ಅನಂತರ ನಡೆಯಲಿರುವ ಸಾಂಸ್ಕೃತಿಕ ಮೆರವಣಿಗೆಯಲ್ಲಿ ವಿವಿಧ ಕಲೆ ಸಂಸ್ಕೃತಿಗಳನ್ನು ಬಿಂಬಿಸುವ 150ಕ್ಕೂ ಹೆಚ್ಚು ಕಲಾತಂಡಗಳು ಭಾಗ ವಹಿಸಲಿವೆ. ಆಕರ್ಷಕ ಸುಡುಮದ್ದು ಪ್ರದರ್ಶನವಿದೆ.
ಸ್ವರಾಜ್ಯ ಮೈದಾನದ ಕ್ರೀಡಾಂಗಣ ಸುಣ್ಣಬಣ್ಣಗಳಿಂದ ಸಿಂಗಾರಗೊಂಡಿದೆ. ಎಲ್ಲೆಡೆ ನಯನಮನೋಹರ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ರಾತ್ರಿ ವೇಳೆ ಸಾಂಸ್ಕೃತಿಕ ಕಲಾಪಗಳನ್ನೂ ಸಂಯೋಜಿಸಲಾಗಿದೆ.
ಇದನ್ನೂ ಓದಿ:ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್ ಬೊಂಬಾಟ್ ಆಟ
ಕ್ರೀಡಾಳುಗಳು, ಕ್ರೀಡಾಧಿಕಾರಿ ಗಳು, ತೀರ್ಪುಗಾರರ ವಾಸ್ತವ್ಯದ ವ್ಯವಸ್ಥೆ ಆಗಿದೆ. ಹತ್ತಿರದಲ್ಲೇ ಇರುವ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ಊಟೋಪಚಾರದ ಸಿದ್ಧತೆ ನಡೆದಿದೆ.
ದೇಶದ ವಿ.ವಿ.ಗಳಿಂದ ಕ್ರೀಡಾಳುಗಳು ಈಗಾಗಲೇ ಆಗಮಿಸುತ್ತಿದ್ದಾರೆ. ಅಭ್ಯಾಸವೂ ನಡೆಯುತ್ತಿದೆ.