Advertisement

ಕೊಡಗು ಸಹಿತ ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಐಸಿಸ್‌ ಪ್ರಾಂತ್ಯಕ್ಕೆ ಸಿದ್ಧತೆ

07:32 AM Jun 23, 2021 | Team Udayavani |

ಬೆಂಗಳೂರು: ರಾಜ್ಯದ ಹಿಂದೂ ಮುಖಂಡರ ಹತ್ಯೆ ಮತ್ತು ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಐಸಿಸ್‌ ಪ್ರೇರಿತ ಅಲ್‌-ಹಿಂದ್‌ ಸಂಘಟನೆಯ ಶಂಕಿತರು ಶಿವನಸಮುದ್ರ, ಕೋಲಾರ, ಕೊಡಗು ಸಹಿತ ದಕ್ಷಿಣ ಭಾರತದ ಕಾಡುಗಳಲ್ಲಿ ಐಸಿಸ್‌ ಪ್ರಾಂತ್ಯ ಸ್ಥಾಪನೆಗೆ ಸಿದ್ಧತೆ ನಡೆಸಿದ್ದರು ಎಂಬ ಸ್ಫೋಟಕ ಮಾಹಿತಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

Advertisement

ಒಂದೊಂದು ಪ್ರಾಂತ್ಯದಲ್ಲಿ 50ರಿಂದ 100 ಉಗ್ರರು ಕಾರ್ಯನಿರ್ವಹಿಸುವುದು ಐಸಿಸ್‌ ಯೋಜನೆಯಾಗಿತ್ತು. ಆ ಮೂಲಕ ರಾಜ್ಯದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಉದ್ದೇಶವಿತ್ತು ಎಂದು ಉನ್ನತ ಪೊಲೀಸ್‌ ಮೂಲಗಳು ತಿಳಿಸಿವೆ.

4 ರಾಜ್ಯಗಳ ಅರಣ್ಯಗಳಲ್ಲಿ ಸ್ಥಳ ಪರಿಶೀಲನೆ
ಸಂಘಟನೆಯ ಆಯ್ದ ಕಾರ್ಯಕರ್ತರು ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರ ಪ್ರದೇಶದ ಕೆಲವು ಅರಣ್ಯ ಪ್ರದೇಶಗಳಲ್ಲಿ ಸ್ಥಳಪರಿಶೀಲನೆ ನಡೆಸಿದ್ದರು. ಅಲ್‌-ಹಿಂದ್‌ ಮುಖ್ಯಸ್ಥ ಮೆಹಬೂಬ್‌ ಪಾಷಾ ಮತ್ತು ದಿಲ್ಲಿಯಲ್ಲಿ ಸೆರೆಯಾದ ಖಾಜಾ ಮೊಯಿದ್ದೀನ್‌ ಶಿವನಸಮುದ್ರಕ್ಕೆ ಸನಿಹದ ಕಾಡಿಗೆ ತೆರಳಿದ್ದರು. ಅಲ್ಲಿ ಸಂಘಟನೆಯ ಪ್ರಾಂತ್ಯ ತೆರೆದು, ಸದಸ್ಯರಿಗೆ ತರಬೇತಿ ನೀಡಲು ಸ್ಥಳ ನಿಗದಿ ಮಾಡಿದ್ದರು. ಕೊಡಗಿನಲ್ಲೂ ಸ್ಥಳ ನಿಗದಿಯಾಗಿತ್ತು. ಬಳಿಕ ವಿವರಗಳನ್ನು ಐಸಿಸ್‌ನ ಹಿರಿಯ ಸದಸ್ಯನಿಗೆ ಕಳುಹಿಸಿ ಅಂತಿಮಗೊಳಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಡಾರ್ಕ್‌ ವೆಬ್‌ ಮೂಲಕ ಸಂಪರ್ಕ
ಚೆನ್ನೈಯ ಎನ್‌ ಐಎ ಕೋರ್ಟ್‌ಗೆ ರಾಷ್ಟ್ರೀಯ ತನಿಖಾ ದಳ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ತ.ನಾಡಿನ ಸೈಯದ್‌ ಅಲಿ ಹೆಸರನ್ನು ಉಲ್ಲೇಖೀಸಲಾಗಿದೆ. ಈತ ಐಇಡಿ ತಯಾರಿಕೆ, ಪರೀಕ್ಷೆ ನಡೆಸುತ್ತಿದ್ದ. ಜತೆಗೆ ಸಂಘಟನೆಯ ಜತೆ ಡಾರ್ಕ್‌ ವೆಬ್‌ ಮೂಲಕ ಸಂವಹನಕ್ಕೆ ಖಾಜಾ ಮೊಯಿದ್ದೀನ್‌ಗೆ ಸಹಾಯ ಮಾಡುತ್ತಿದ್ದ ಎಂಬುದು ಗೊತ್ತಾಗಿದೆ.

20 ಮಂದಿ ಸೆರೆ
2020ರ ಜನವರಿಯಲ್ಲಿ ಅಲ್‌-ಹಿಂದ್‌ ಮತ್ತು ಐಸಿಸ್‌ ಸಂಘಟನೆಗಳ ಕರ್ನಾಟಕ ಮತ್ತು ತ.ನಾಡು ವಿಭಾಗದ ಮುಖ್ಯಸ್ಥ ಮೆಹಬೂಬ್‌ ಪಾಷಾ ಸೇರಿ ಐದಾರು ಮಂದಿಯನ್ನು ಕ್ಯೂ ಬ್ರಾಂಚ್‌ ಪೊಲೀಸರು ಮತ್ತು ಸಿಸಿಬಿ ಪೊಲೀಸರು ಬಂಧಿಸಿದ್ದರು. ಬಳಿಕ ಎನ್‌ಐಎ ಮತ್ತು ಚೆನ್ನೈಯ ಕ್ಯೂ ಬ್ರಾಂಚ್‌ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ಇದುವರೆಗೆ 20 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

ತರಬೇತಿಗೆ ನೀಲನಕ್ಷೆ
ಪ್ರಾಂತ್ಯ ಸ್ಥಾಪಿಸಲು ಬೇಕಾಗುವ ಟೆಂಟ್‌ ಟಾರ್ಪಲ್‌, ಬಿಲ್ಲು-ಬಾಣಗಳು, ಶೂಗಳು, ಮದ್ದು ಗುಂಡುಗಳು, ಹೊದಿಕೆಗಳು, ಹಗ್ಗ, ಏಣಿ ಮತ್ತು ಐಇಡಿ ತಯಾರಿಸಲು ಭಾರೀ ಪ್ರಮಾಣದಲ್ಲಿ ಪಟಾಕಿ ಸಂಗ್ರಹಿಸಿದ್ದರು. ತರಬೇತಿಯ ನೀಲನಕ್ಷೆಯನ್ನು ಕೂಡ ಸಿದ್ಧ ಪಡಿಸಿದ್ದರು ಎಂದು ಮೂಲಗಳು ತಿಳಿಸಿವೆ.

ನೇಮಕಾತಿಗೆ ಸಿಮ್‌ ಕಾರ್ಡ್‌ ಬಳಕೆ
ಶಂಕಿತರು ಗ್ರಾಮೀಣ ಭಾಗದ ಪರಿಚಿತರ ಬಳಿ ದಾಖಲೆ ಸಂಗ್ರಹಿಸಿ ಅಕ್ರಮವಾಗಿ ಸಿಮ್‌ ಕಾರ್ಡ್‌ ಖರೀದಿಸಿದ್ದರು. ಅವುಗಳ ಮೂಲಕ ಕರ್ನಾಟಕ, ತ. ನಾಡು, ಕೇರಳ, ಆಂಧ್ರದಲ್ಲಿ ಸಂಘಟನೆಗೆ ಸದಸ್ಯರ ನೇಮಕಾತಿ, ಸಭೆ ನಡೆಸುತ್ತಿದ್ದರು. ಕಾಡಿನಲ್ಲಿ ಪ್ರಾಂತ್ಯ ಸ್ಥಾಪನೆಗೆ ಬೇಕಾದ ಶಸ್ತ್ರಾಸ್ತ್ರಗಳು, ಹಣವನ್ನು ಇದೇ ಸಿಮ್‌ಕಾರ್ಡ್‌ಗಳ ಮೂಲಕ ಕೆಲವರನ್ನು ಸಂಪರ್ಕಿಸಿ ಸಂಗ್ರಹಿಸಿದ್ದರು ಎಂದು ಮೂಲಗಳು ತಿಳಿಸಿವೆ.

– ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next