ಯಾದಗಿರಿ: ಗಿರಿನಾಡ ದಸರಾಕ್ಕೆ ನಗರದಲ್ಲಿ ಹಲವು ಪ್ರದೇಶಗಳಲ್ಲಿ ಅದ್ಧೂರಿ ಸಿದ್ಧತೆ ನಡೆಯುತ್ತಿದೆ. ನಗರದ ಭವಾನಿ ಮಂದಿರದ ಬಳಿ ಸೇರಿದಂತೆ ವಿವಿಧೆಡೆ ಪ್ರತಿಷ್ಠಾಪಿಸಲಾಗುವ ಭವಾನಿ ಮೂರ್ತಿಗಳಿಗೆ ಯಾದಗಿರಿ ಬಳಿಯ ಭೀಮಾ ನದಿಯಲ್ಲಿ ಗಂಗಾಸ್ನಾನದ ಮುಖಾಂತರ ಪ್ರತಿಷ್ಠಾಪನಾ ಸ್ಥಳದವರೆಗೆ ಭವ್ಯ ಮೆರವಣಿಗೆ ಮೂಲಕ ತೆರಳಲಾಗುತ್ತದೆ. ಮಹಾನವಮಿಯಂದು ಸಂಜೆ 7ಗಂಟೆಗೆ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ.
ಪ್ರತಿದಿನ ಬೆಳಗೆ 8ಕ್ಕೆ ಸಂಜೆ 7ಕ್ಕೆ ಅಂಬಾ ಭವಾನಿ ಮೂರ್ತಿಗೆ ವಿಶೇಷ ಪೂಜಾ ಕಾರ್ಯಕ್ರಮ ನಡೆಯಲಿದ್ದು, ಪ್ರತಿ ರಾತ್ರಿ ವಿಜೃಂಭಣೆಯ ಯುವಕ, ಯುವತಿಯರ ದಾಂಡಿಯಾ ಕಾರ್ಯಕ್ರಮ ನಡೆಯುತ್ತದೆ. ದಸರಾ ಸಿದ್ಧತೆಗಾಗಿ ನಗರದ ಶಾಸ್ತ್ರಿ ವೃತ್ತದಿಂದ ರೈಲು ನಿಲ್ದಾಣದವರೆಗೆ ಹಾಗೂ ದೇವಸ್ಥಾನದವರೆಗೆ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ. ದೇವಿಯನ್ನು ಪ್ರತಿಷ್ಠಾಪಿಸುವ ಮಂಟಪವನ್ನೂ ಸಿದ್ಧಗೊಳಿಸಲಾಗಿದೆ.
3 ದಶಕಗಳ ಹಿನ್ನೆಲೆ: ನಗರದ ಸ್ಟೇಷನ್ ಏರಿಯಾದ ಶಿವನಗರದಲ್ಲಿ ಕಳೆದ ಮೂರು ದಶಕಗಳಿಂದ ಸರ್ಕಾರದ ನೆರವಿಲ್ಲದೆ ಗಿರಿನಾಡ ದಸರಾ ಹಬ್ಬ ಆಚರಿಸಲಾಗುತ್ತಿದ್ದು, ಈಗ ಭರ್ಜರಿ ಸಿದ್ಧತೆ ನಡೆದಿದೆ. ಆರಂಭದಲ್ಲಿ ಕೆಲವರು ಸೇರಿ ಆರಂಭಿಸಿದ ಉತ್ಸವವನ್ನು ಈಗ ದೊಡ್ಡ ಮಟ್ಟದಲ್ಲಿ ನಡೆಸಲಾಗುತ್ತಿದೆ. ಹಿಂದೂ ಸೇವಾ ಸಮಿತಿ ದಸರಾ ಆಯೋಜಿಸುತ್ತಿದ್ದು, ನಗರದಲ್ಲಿ ಸಂಭ್ರಮದ ತಯಾರಿ ನಡೆದಿದೆ.
ದಾಂಡಿಯಾ ದಸರಾದ ಪ್ರಮುಖ ಆಕರ್ಷಣೆ: ಈ ದಸರಾದಲ್ಲಿ ಪ್ರಮುಖವಾಗಿ ಆಕರ್ಷಣೆ ಮಾಡುವಂತದ್ದು, ದಾಂಡಿಯಾ ನೃತ್ಯ. ದೇವಿ ಪ್ರತಿಷ್ಠಾಪಿಸಿದ ದಿನದಿಂದ 9 ದಿನಗಳ ಕಾಲ ರಾತ್ರಿ 9 ಗಂಟೆಯಿಂದ 12ರ ತನಕ ದಾಂಡಿಯಾ ನೃತ್ಯ ಮನಮೋಹಕವಾಗಿ ನಡೆಸಲಾಗುತ್ತಿದೆ. ಇದನ್ನು ನೋಡಲು ಜನರು ಕಿಕ್ಕಿರಿದು ತುಂಬಿರುತ್ತಾರೆ.
ಪ್ರತಿದಿನವೂ ಒಂದೊಂದು ಕಾರ್ಯಕ್ರಮ ಮಾಡಲಾಗುತ್ತದೆ. 7 ದಿನ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಆಯೋಜಿಸಲಾಗುತ್ತದೆ. ಅಲ್ಲದೆ ಕ್ರಿಕೆಟ್ ಕೂಡ ಹಮ್ಮಿಕೊಳ್ಳಲಾಗುತ್ತದೆ. ಕೋಲಾಟ ಸ್ಪರ್ಧೆ ನಡೆಯುತ್ತದೆ. ಆಯುಧ ಪೂಜೆ ದಿನ ಧರ್ಮಸಭೆ ಆಯೋಜಿಸಲಾಗುತ್ತದೆ. ಈ ಧರ್ಮಸಭೆಯಲ್ಲಿ ಸ್ವಾಮಿಗಳು ಹಾಗೂ ವಿವಿಧ ಗಣ್ಯರು ಭಾಗವಹಿಸಲಿದ್ದು, ಕಡೆಯ ಎರಡು ದಿನ ವಿಜೃಂಭವಣೆಯ ದಸರಾ ಹಬ್ಬ ಜರುಗಲಿದೆ.