Advertisement

ಪಾಲಿಕೆ, 3 ಪುರಸಭೆ ಚುನಾವಣೆಗೆ ಸಿದ್ಧತೆ

12:09 PM Aug 11, 2018 | |

ಮೈಸೂರು: ಮೈಸೂರು ಮಹಾ ನಗರಪಾಲಿಕೆ ಸೇರಿದಂತೆ ಜಿಲ್ಲೆಯಲ್ಲಿ ಮೇಲ್ದರ್ಜೆಗೇರಿಸಿದ ತಿ.ನರಸೀಪುರ, ಪಿರಿಯಾಪಟ್ಟಣ ಮತ್ತು ಎಚ್‌.ಡಿ.ಕೋಟೆ ಪುರಸಭೆಗಳಿಗೆ ರಾಜ್ಯ ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ್ದು, ಜಿಲ್ಲಾಧಿಕಾರಿಗಳು ಪುರಸಭೆ ಚುನಾವಣೆಗೆ ಶುಕ್ರವಾರ ಅಧಿಸೂಚನೆ ಹೊರಡಿಸಿದ್ದು, ಮಹಾ ನಗರಪಾಲಿಕೆ ಚುನಾವಣೆಗೆ ಆ.13ರಂದು ಅಧಿಸೂಚನೆ ಹೊರಡಿಸಲಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್‌ ಹೇಳಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಮೂರು ಪುರಸಭೆಗಳಿಗೆ ಅಧಿಸೂಚನೆ ಹೊರಡಿಸುವುದರೊಂದಿಗೆ ಚುನಾವಣಾ ಪ್ರಕ್ರಿಯೆ ಆರಂಭವಾಗಿದ್ದು, ಆ.17 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ, 18ರಂದು ನಾಮಪತ್ರಗಳ ಪರಿಶೀಲನೆ, 20ಕ್ಕೆ ಉಮೇದುವಾರಿಕೆ ಹಿಂಪಡೆಯಲು ಕೊನೆ ದಿನ, ಆ.29ರಂದು ಮತದಾನ ನಡೆಯಲಿದ್ದು, ಸೆ.3ರಂದು ಆಯಾಯ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ ಎಂದರು. 

ತಿ.ನರಸೀಪುರ ಪುರಸಭೆ ಚುನಾವಣೆಯಲ್ಲಿ 12977 ಪುರುಷ, 13314 ಮಹಿಳೆಯರು ಸೇರಿದಂತೆ ಒಟ್ಟು 26291 ಮತದಾರರು. ಪಿರಿಯಾಪಟ್ಟಣ ಪುರಸಭೆ ಚುನಾವಣೆಯಲ್ಲಿ 8283 ಪುರುಷ, 8606 ಮಹಿಳೆಯರು ಸೇರಿದಂತೆ ಒಟ್ಟು 16889 ಮತದಾರರು. ಎಚ್‌.ಡಿ.ಕೋಟೆ ಪುರಸಭೆಯಲ್ಲಿ 8683 ಪುರುಷ, 8791 ಮಹಿಳೆಯರು ಸೇರಿದಂತೆ ಒಟ್ಟು 17474 ಮತದಾರರು ಮತದಾನದ ಹಕ್ಕು ಹೊಂದಿದ್ದಾರೆ. ಮೂರು ಪುರಸಭೆಗಳ ಚುನಾವಣೆಗಳಲ್ಲಿ ತಲಾ 23 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ವಿವರಿಸಿದರು.

ಮತಗಟ್ಟೆ ಅಧಿಕಾರಿಗಳ ನೇಮಕ: ಪ್ರತಿ ಮತಗಟ್ಟೆಗೆ ಒಬ್ಬರು ಅಧ್ಯಕ್ಷಾಧಿಕಾರಿ, ಮೂವರು ಮತಗಟ್ಟೆ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು. ಮತಗಟ್ಟೆ ಅಧಿಕಾರಿಗಳಿಗೆ ಒಂದು ಹಂತದ ತರಬೇತಿ ನೀಡಲಾಗುವುದು. ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುತ್ತಿದ್ದು, ಚುನಾವಣೆಗೆ ಅಗತ್ಯವಿರುವಷ್ಟು ವಿದ್ಯುನ್ಮಾನ ಮತಯಂತ್ರಗಳನ್ನು ರಾಜ್ಯ ಚುನಾವಣಾ ಆಯೋಗ ಸರಬರಾಜು ಮಾಡಿದೆ. ಎಲ್ಲಾ ಬ್ಯಾಲೆಟ್‌ ಯೂನಿಟ್‌ ಮತ್ತು ಕಂಟ್ರೋಲ್‌ ಯೂನಿಟ್‌ಗಳನ್ನು ಸ್ವತ್ಛಗೊಳಿಸಿ, ಬಿಇಎಲ್‌ ಸಂಸ್ಥೆಯವರಿಂದ ಪ್ರಥಮ ಹಂತದ ಪರಿಶೀಲನೆ ಮಾಡಲಾಗಿದೆ. 

ನೋಟಾ ಅವಕಾಶ: ಇದೇ ಮೊದಲ ಬಾರಿಗೆ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ನೋಟಾಗೆ ಅವಕಾಶ ಮಾಡಿಕೊಡಲಾಗಿದೆ. ಜೊತೆಗೆ ಮತಪತ್ರದಲ್ಲಿ ಅಭ್ಯರ್ಥಿಗಳ ಹೆಸರಿನ ಮುಂದೆ ಅವರ ಇತ್ತೀಚಿನ ಭಾವಚಿತ್ರವನ್ನೂ ಮುದ್ರಿಸಲಾಗುವುದು ಎಂದರು.  ಪುರಸಭೆ ಚುನಾವಣೆಗೆ ಪ್ರತಿ ಅಭ್ಯರ್ಥಿಗೆ 1,50000 ರೂ. ಚುನಾವಣಾ ವೆಚ್ಚ ನಿಗದಿಪಡಿಸಲಾಗಿದೆ.

Advertisement

ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ದಿನಾಂಕದಿಂದ ಫ‌ಲಿತಾಂಶ ಘೋಷಣೆಯಾಗುವ ದಿನಾಂಕದವರೆಗೆ ಈ ಮಿತಿಗೆ ಒಳಪಟ್ಟು ವೆಚ್ಚಗಳನ್ನು ಮಾಡಬಹುದಾಗಿದೆ. ಅಭ್ಯರ್ಥಿಗಳು ಪ್ರತಿದಿನ ಮಾಡುವ ವೆಚ್ಚಗಳನ್ನು ಪರಿಶೀಲನೆ ಮಾಡಲು ಹಾಗೂ ಅಭ್ಯರ್ಥಿಗಳು ಬಳಸುವ ವಾಹನಗಳ ವಿವರ, ಪ್ರಚಾರಕ್ಕಾಗಿ ಪ್ರಕಟಿಸುವ ಕರಪತ್ರಗಳ ವಿವರ, ಪ್ರಕಟಣೆ, ಭಿತ್ತಿಚಿತ್ರಗಳು, ಬ್ಯಾನರ್‌ ಇತ್ಯಾದಿಗಳ ವೆಚ್ಚದ ಲೆಕ್ಕವನ್ನು ಪರಿಶೀಲಿಸಲು ನೋಡಲ್‌ ಅಧಿಕಾರಿ ನೇಮಕ ಮಾಡಲಾಗಿದೆ.

ಸೆ.9ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣೆ ಘೋಷಣೆಯಾಗಿರುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಮಾತ್ರ ನೀತಿ ಸಂಹಿತೆ ಅನ್ವಯವಾಗಲಿದೆ. ಸದಾಚಾರ ಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಸದಾಚಾರ ಸಂಹಿತೆ ತಂಡವನ್ನೂ ರಚಿಸಲಾಗಿದೆ. ಚುನಾವಣಾ ಪ್ರಕ್ರಿಯೆ ಪ್ರಾರಂಭವಾದ ದಿನದಿಂದ ಮುಕ್ತಾಯವಾಗುವವರೆಗೆ ಯಾವುದೇ ಸರ್ಕಾರಿ, ಸಾರ್ವಜನಿಕ ಮತ್ತು ಖಾಸಗಿ ಸ್ವತ್ತುಗಳಲ್ಲಿ ಬ್ಯಾನರ್‌, ಬಂಟಿಂಗ್ಸ್‌, ಪೋಸ್ಟರ್, ಹೋರ್ಡಿಂಗ್ಸ್‌ ಹಾಗೂ ಕಟೌಟ್‌ಗಳನ್ನು ಹಾಕುವುದನ್ನು ನಿಷೇಧಿಸಿದೆ ಎಂದು ತಿಳಿಸಿದರು.

ಪಾಲಿಕೆ ವಾರ್ಡ್‌ಗಳ ಚುನಾವಣೆ: ಮೈಸೂರು ಮಹಾ ನಗರಪಾಲಿಕೆಯ 65 ವಾರ್ಡ್‌ಗಳ ಚುನಾವಣೆಗೆ ಸಂಬಂಧಿಸಿದಂತೆ ಆ.13ರಂದು ಅಧಿಸೂಚನೆ ಹೊರಡಿಸಲಿದ್ದು, ಆ.20 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ. 21ರಂದು ನಾಮಪತ್ರಗಳ ಪರಿಶೀಲನೆ, ಉಮೇದುವಾರಿಕೆ ಹಿಂಪಡೆಯಲು 23 ಕೊನೆಯ ದಿನಾಂಕ. ಆ.31ರಂದು ಮತದಾನ ನಡೆಯಲಿದ್ದು, ಸೆ.3ರಂದು ಮತಗಳ ಎಣಿಕೆ ನಡೆಯಲಿದೆ.

401730 ಪುರುಷ, 397692 ಮಹಿಳೆಯರು ಸೇರಿದಂತೆ ಒಟ್ಟು 799422 ಮತದಾರರು ಮತದಾನದ ಹಕ್ಕು ಹೊಂದಿದ್ದಾರೆ. 725 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು, ಮತದಾರರ ಪಟ್ಟಿ ಪರಿಷ್ಕರಣೆಯಿಂದ 1400ಕ್ಕೂ ಹೆಚ್ಚು ಮತದಾರರಿರುವ ಮತಗಟ್ಟೆಗಳಿಗೆ 90 ಆಕ್ಸಿಲರಿ ಮತಗಟ್ಟೆಗಳನ್ನು ಸ್ಥಾಪಿಸಲು ಕ್ರಮವಹಿಸಲಾಗುವುದು. ಪಾಲಿಕೆ ಚುನಾವಣೆಗೆ ಪ್ರತಿ ಅಭ್ಯರ್ಥಿಗೆ 3ಲಕ್ಷ ರೂ. ವೆಚ್ಚ ಮಿತಿ ನಿಗದಿಪಡಿಸಲಾಗಿದೆ ಎಂದರು.

13 ಮಂದಿ ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಈ ಬಾರಿ ಗ್ರಾಮೀಣ ಪ್ರದೇಶದ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವುದರಿಂದ ರಾಜಕೀಯ ಮುಖಂಡರ ಭಾವಚಿತ್ರವುಳ್ಳ ಫ್ಲೆಕ್ಸ್‌, ಬ್ಯಾನರ್‌ಗಳನ್ನು ತೆರವುಗೊಳಿಸಲಾಗುತ್ತಿದ್ದು, ಎಲ್ಲಾ ಸರ್ಕಾರಿ ಅತಿಥಿಗೃಹಗಳನ್ನು ಜಿಲ್ಲಾಧಿಕಾರಿಗಳ ಅಧೀನಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು. ನಗರಪಾಲಿಕೆ ಆಯುಕ್ತ ಕೆ.ಎಚ್‌.ಜಗದೀಶ್‌, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಆರ್‌.ರಾಜು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next