Advertisement

MUDA Case: ಸಿಎಂ ಸಿದ್ದರಾಮಯ್ಯ ಪತ್ನಿ 3 ತಾಸು ಲೋಕಾ ವಿಚಾರಣೆ

01:00 AM Oct 26, 2024 | Team Udayavani |

ಮೈಸೂರು: ಮುಡಾದ 50:50 ಅನುಪಾತದಡಿ ನಿವೇಶನ ಹಂಚಿಕೆ ಹಗರಣ ಸಂಬಂಧ 2ನೇ ಆರೋಪಿಯಾಗಿರುವ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರನ್ನು ಶುಕ್ರವಾರ ಮೈಸೂರು ಲೋಕಾಯುಕ್ತ ಪೊಲೀಸರು ಸತತ 3 ತಾಸು ವಿಚಾರಣೆ ನಡೆಸಿ, ಅಗತ್ಯ ಮಾಹಿತಿ ಕಲೆ ಹಾಕಿದ್ದಾರೆ.

Advertisement

ಕೆಸರೆಯ ಸರ್ವೆ ನಂ.462 ಮತ್ತು 464ರ 3.16 ಎಕ್ರೆ ಭೂಮಿಗೆ ಬದಲಿಯಾಗಿ ಬಿ.ಎಂ. ಪಾರ್ವತಿ ಅವರು 50:50ರ ಅನುಪಾತದಲ್ಲಿ ಮುಡಾದಿಂದ ನಗರದ ಪ್ರತಿಷ್ಠಿತ ಬಡಾವಣೆಯಲ್ಲಿ 14 ನಿವೇಶನಗಳನ್ನು ಪಡೆದಿದ್ದ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ಪಾರ್ವತಿಯವರನ್ನು ವಿಚಾರಣೆಗೆ ಒಳಪಡಿಸಿ ಅಗತ್ಯ ಮಾಹಿತಿ ಕಲೆ ಹಾಕಿರುವುದಲ್ಲದೆ, ವೀಡಿಯೋ ಆಧಾರಿತ ಹೇಳಿಕೆಯನ್ನೂ ದಾಖಲು ಮಾಡಿಕೊಂಡಿದ್ದಾರೆ.

ವಿಚಾರಣೆ ವೇಳೆ ವಿವಾದಿತ ಭೂಮಿಗೆ ಸಂಬಂಧಿಸಿ ಹಲವು ಪ್ರಶ್ನೆ ಕೇಳಿದ್ದು, ಪಾರ್ವತಿ ಅವರು ಸಮರ್ಪಕ ಉತ್ತರ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೈಸೂರು ಲೋಕಾಯುಕ್ತ ಎಸ್ಪಿ ಟಿ.ಜೆ. ಉದೇಶ್‌ ನೇತೃತ್ವದಲ್ಲಿ ವಿಚಾರಣೆ ನಡೆದಿದೆ. ಈಗಾಗಲೇ ಎ4, ಎ3 ಆರೋಪಿಗಳ ಸಹಿತ ಹಲವರನ್ನು ಕಚೇರಿಗೆ ಕರೆಸಿಕೊಂಡು ವಿಚಾರಣೆ ನಡೆಸಿರುವ ಲೋಕಾಯುಕ್ತ ಪೊಲೀಸರು, ಗುರುವಾರ ಮಾಜಿ ಸಚಿವ ಬಚ್ಚೇಗೌಡ ಮತ್ತು ನಿವೃತ್ತ ಐಎಎಸ್‌ ಅಧಿಕಾರಿ ಸುಬ್ರಹ್ಮಣ್ಯ ರಾವ್‌ ಅವರನ್ನು ಕೂಡ ವಿಚಾರಣೆಗೆ ಒಳಪಡಿಸಿದ್ದರು.

ಅ. 24ರ ಗುರುವಾರ ಸಂಜೆ ಪಾರ್ವತಿ ಅವರಿಗೆ ಶುಕ್ರವಾರವೇ ಖುದ್ದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಜಾರಿ  ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಲೋಕಾಯುಕ್ತ ಕಚೇರಿಗೆ ಆಗಮಿಸಿದ ಪಾರ್ವತಿ ಅವರನ್ನು ಮಧ್ಯಾಹ್ನ 1ರ ವರೆಗೆ ವಿಚಾರಣೆ ನಡೆಸಲಾಯಿತು.

Advertisement

ಗೌಪ್ಯತೆ ಕಾಪಾಡಿಕೊಂಡ ಪಾರ್ವತಿ

ಪಾರ್ವತಿಯವರು 14 ನಿವೇಶನ ವಾಪಸ್‌ ನೀಡಿದ ಸಂದರ್ಭ, ಅವುಗಳ ಖಾತೆ ರದ್ದು ಮಾಡುವ ಸಂದರ್ಭ ಗೌಪ್ಯತೆ ಕಾಪಾಡಿಕೊಂಡಿದ್ದರು. ಅಷ್ಟೇ ಅಲ್ಲದೆ ಉಪನೋಂದಣಾಧಿಕಾರಿಯೇ ಪಾರ್ವತಿ ಅವರು ಇರುವಲ್ಲಿಗೆ ಹೋಗಿ ರದ್ದತಿ ಪ್ರಕ್ರಿಯೆ ನಡೆಸಿದ್ದರು. ಈಗ ಲೋಕಾಯುಕ್ತ ವಿಚಾರಣೆ ಸಂದರ್ಭವೂ ಪಾರ್ವತಿಯವರು ಗೌಪ್ಯತೆ ಕಾಪಾಡಿಕೊಂಡಿದ್ದಾರೆ.

ಲೋಕಾಯುಕ್ತ ಪ್ರಶ್ನೆಗಳು

ನಿಮ್ಮ ಆದಾಯದ ಮೂಲ ಯಾವುದು? ನಿಮ್ಮ ಸಹೋದರ ನೀಡಿದ ಭೂಮಿ ಹಿನ್ನೆಲೆ ಗೊತ್ತೇ?

ನಿಮಗೆ ಕೆಸರೆಯ ಸರ್ವೆ ನಂ. 462, 464ರ 3.14 ಎಕ್ರೆ ಭೂಮಿಯ ಬಗ್ಗೆ ಗೊತ್ತಿದೆಯೇ?

ಭೂಮಿಯನ್ನು ಮುಡಾ ವಶಕ್ಕೆ ತೆಗೆದುಕೊಂಡದ್ದು ತಿಳಿದಿತ್ತೇ? ಬೇರೆಡೆ ಬದಲಿ ಭೂಮಿ ಕೇಳಿದ್ದಿರೇ?

ಆ ಭೂಮಿ ಬದಲಿಗೆ ನಿವೇಶನ ತೆಗೆದುಕೊಳ್ಳಿ ಎಂದವರು ಯಾರು? 14 ನಿವೇಶನಗಳಿಗೆ ಅರ್ಜಿ ಹಾಕಿದ್ದಿರಾ?

14 ನಿವೇಶನಗಳ ಅಸಲಿ ದಾಖಲೆಗಳು ನಿಮ್ಮ ಬಳಿ ಇವೆಯೇ? ನಿವೇಶನ ವಾಪಸ್‌ ನೀಡಿದ್ದೇಕೆ?

ಅರ್ಜಿಯಲ್ಲಿ ಹಾಕಿರುವ ಸಹಿ ನಿಮ್ಮದೇ? ನಿಮ್ಮ ಪರ ಬೇರೆಯವರು ಸಹಿ ಹಾಕಿದ್ದಾರೆಯೇ?

ದಾನಪತ್ರದ ಅಸಲಿ ದಾಖಲೆಗಳು ನಿಮ್ಮ ಬಳಿ ಇವೆಯೇ? ಈ ಎಲ್ಲ ವಿಚಾರ ನಿಮ್ಮ ಪತಿ ಸಿದ್ದರಾಮಯ್ಯ, ಪುತ್ರ ಯತೀಂದ್ರ ಅವರಿಗೆ ಗೊತ್ತಿದೆಯೇ?

Advertisement

Udayavani is now on Telegram. Click here to join our channel and stay updated with the latest news.

Next