Advertisement

ಬಹುರೂಪಿ ಗಣಪನ ಸ್ವಾಗತಕ್ಕೆ ಭರ್ಜರಿ ಸಿದ್ಧತೆ

12:41 PM Aug 30, 2018 | |

ಬಳ್ಳಾರಿ: ಗಣೇಶ ಚತುರ್ಥಿಗೆ ಗಣಿನಗರಿ ಭರ್ಜರಿಯಾಗಿ ಸಜ್ಜಾಗುತ್ತಿದ್ದು, ಗಣೇಶ ಮೂರ್ತಿ ಪ್ರತಿಷ್ಠಾಪನೆಗಾಗಿ ನಗರದ ವಿವಿಧೆಡೆ ಮಂಟಪ, ವೇದಿಕೆ, ಸಭಾಂಗಣ ನಿರ್ಮಾಣದ ಕಾರ್ಯಗಳು ಭರದಿಂದ ಸಾಗಿವೆ. ನಗರದ ಹೊರ ವಲಯದ ರಾಮೇಶ್ವರ ನಗರದ ವೆಂಕಟೇಶ್ವರ ದೇವಸ್ಥಾನದ ಆವರಣದಲ್ಲಿ ಪಶ್ಚಿಮ ಬಂಗಾಳ ಮೂಲದ ಗಣೇಶ ವಿಗ್ರಹ ತಯಾರಕರು ಒಂದು ತಿಂಗಳಿನಿಂದ ಬಿಡಾರ ಹೂಡಿದ್ದು, ತರಹೇವಾರಿ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಅದರಲ್ಲೂ 10 ರೂ. ನೋಟಿನಲ್ಲಿ ಅರಳಿಸಿರುವ ಗಣೇಶಮೂರ್ತಿ ಯುವಕರ ಗಮನ ಸೆಳೆಯುತ್ತಿದೆ. ಕೇವಲ ಮಣ್ಣಿನಲ್ಲೇ ಸಿದ್ಧಪಡಿಸಿರುವ ಈ ಗಣೇಶಮೂರ್ತಿ ಪರಿಸರ ಸ್ನೇಹಿಯಾಗಿದೆ.

Advertisement

ಕಲ್ಕತ್ತಾ ಮೂಲದ ಮಣ್ಣಿನೊಂದಿಗೆ ಸ್ಥಳೀಯ ಮಣ್ಣನ್ನೂ ಬೆರೆಸಿ ಪರಿಸರ ಸ್ನೇಹಿ ವಿಗ್ರಹ ತಯಾರಿಸಲಾಗುತ್ತಿದೆ. ಐದು ವರ್ಷಗಳ ಹಿಂದೆ ಬಳ್ಳಾರಿಯ ಕನಕದುರ್ಗಮ್ಮ ಮತ್ತು ಸಿಡಿಬಂಡಿ ಮಾದರಿಯಲ್ಲಿ ಗಣೇಶ ಮೂರ್ತಿಯನ್ನು
ಸಿದ್ಧಪಡಿಸಿದ್ದ ಇವರು, ಪ್ರಸಕ್ತ ವರ್ಷ 10 ರೂಪಾಯಿ ನೋಟಿನಲ್ಲಿ ಗಣೇಶ ಮೂರ್ತಿ ತಯಾರಿಸುವ ಮೂಲಕ ಯುವಕರು, ಯುವಕ-ಮಿತ್ರಮಂಡಳಿಗಳ ಗಮನ ಸೆಳೆದಿದ್ದಾರೆ.

ಹೀಗಿದೆ ಗಣೇಶಮೂರ್ತಿ: ಹತ್ತು ರೂಪಾಯಿ ನೋಟಿನ ಮಾದರಿಯಲ್ಲಿ ಸಿದ್ಧಪಡಿಸಲಾಗುತ್ತಿರುವ ಗಣೇಶ ಮೂರ್ತಿಯ ಎಡಕ್ಕೆ ಆನೆಯ ಗುರುತು ಮತ್ತು ಸಿಂಹಘರ್ಜನೆಯ ಮೂರ್ತಿಗಳಿವೆ. ಬಲದಲ್ಲಿ ಗಾಂಧೀಜಿ ಭಾವಚಿತ್ರವಿರುವ ಜಾಗದಲ್ಲಿ ಗಣೇಶ ಮೂರ್ತಿ ಚಿತ್ರಿಸಲಾಗಿದೆ. ಕಲ್ಕತ್ತಾದಿಂದ ತರಲಾಗಿದ್ದ ಮಣ್ಣಿನೊಂದಿಗೆ ಸ್ಥಳೀಯ ಮಣ್ಣನ್ನು ಬೆರೆಸಿ ಸಿದ್ಧಪಡಿಸಲಾಗಿರುವ ಗಣೇಶ ಮೂರ್ತಿಗೆ ರಸಾಯನಿಕ ಸಾಮಗ್ರಿ ಬಳಸದೆ, ನೈಸರ್ಗಿಕ ಬಣ್ಣವನ್ನೇ ಲೇಪನ ಮಾಡಲಾಗುತ್ತಿದೆ. ವಿಗ್ರಹಕ್ಕೆ ಮೊದಲಿಗೆ ಜಿಂಕ್‌ಪೌಡರ್‌ ಲೇಪನ ಮಾಡಲಾಗುತ್ತಿದ್ದು, ಇದರ ಮೇಲೆ ಬಣ್ಣ ಹಚ್ಚಿದರೆ ವಿಗ್ರಹದ ಹೊಳಪು ಮತ್ತಷ್ಟು ಹೆಚ್ಚಲಿದೆ. ಹತ್ತು ರೂಪಾಯಿ ಬಣ್ಣವನ್ನು ಮಾತ್ರ ಸದ್ಯ ಚಲಾವಣೆಯಲ್ಲಿರುವ ನೋಟಿನ ಬಣ್ಣದ ಮಾದರಿಯಲ್ಲೇ ಸಿದ್ಧಪಡಿಸಲಾಗುತ್ತದೆ ಎಂದು ಕಲಾವಿದರು ತಿಳಿಸುತ್ತಾರೆ. ಸ್ಥಳೀಯರೊಬ್ಬರು ಈ ವಿಗ್ರಹ ತಯಾರಿಸುತ್ತಿದ್ದು, ನಗರದ ರಾಯಲ್‌ ಕಾಲೋನಿಯಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ ಎನ್ನಲಾಗುತ್ತಿದೆ.

ಪಶ್ಚಿಮ ಬಂಗಾಳದ ಕಲಾವಿದರು: ಗಣೇಶ ಹಬ್ಬದ ನಿಮಿತ್ತ ನಗರಕ್ಕೆ ಆಗಮಿಸಿರುವ ಪಶ್ಚಿಮ ಬಂಗಾಳದ ಹತ್ತಾರು ಯುವಕರು ಕಳೆದೊಂದು ತಿಂಗಳಿಂದ ಬಿಡಾರ ಹೂಡಿದ್ದು, ಗಣೇಶ ವಿಗ್ರಹಗಳನ್ನು ತಯಾರಿಸುವಲ್ಲಿ ನಿರತರಾಗಿದ್ದಾರೆ. ಪಿಒಪಿ ವಿಗ್ರಹಗಳ ತಯಾರಿಕೆ, ಮಾರಾಟಕ್ಕೆ ಸ್ಥಳೀಯ ಜಿಲ್ಲಾಡಳಿತ ಬ್ರೇಕ್‌ ಹಾಕಿರುವುದರಿಂದ ಸ್ಥಳೀಯ ಯುವಕರು, ಗಣೇಶ ಮಿತ್ರ ಮಂಡಳಿಗಳು ಸಹ ಮಣ್ಣಿನ ಗಣೇಶಮೂರ್ತಿಯನ್ನೇ ತಾವು ಕೋರುವ ಮಾದರಿಯಲ್ಲೇ ತಯಾರಿಸಿಕೊಡುವಂತೆ ಸೂಚಿಸುತ್ತಿದ್ದ ಹಿನ್ನೆಲೆಯಲ್ಲಿ ತಾವು ಸಹ ಹೆಚ್ಚು ಮಣ್ಣಿನ ವಿಗ್ರಹಗಳನ್ನು ಸಿದ್ಧಪಡಿಸುವಲ್ಲೇ
ನಿರತರಾಗಿದ್ದೇವೆ. ಈಗಾಗಲೇ 60ಕ್ಕೂ ಹೆಚ್ಚು ವಿಗ್ರಹಗಳನ್ನು ಸಿದ್ಧಪಡಿಸಿದ್ದೇವೆ. ವಿಗ್ರಹಗಳು ಒಂದಕ್ಕಿಂತ ಒಂದು ಚೆನ್ನಾಗಿ ಮೂಡಿ ಬಂದಿರುವ ಹಿನ್ನೆಲೆಯಲ್ಲಿ ಯುವಕರು ಈಗಿನಿಂದಲೇ ಮುಂಗಡ ಹಣ ನೀಡಿ ತಮಗಿಷ್ಟವಾದ ವಿಗ್ರಹಗಳನ್ನು ನಿಗದಿಪಡಿಸಿಕೊಳ್ಳುತ್ತಿದ್ದಾರೆ ಎಂದು ವಿಗ್ರಹ ತಯಾರಕ ಚಂದನ್‌ ಮತ್ತು ಪ್ರದೀಪ್‌ ತಿಳಿಸಿದ್ದಾರೆ.

ಪಿಒಪಿ ಪರಿಸರಕ್ಕೆ ಹಾನಿ: ಮಣ್ಣಿನ ಮೂರ್ತಿಗಳ ಭರಾಟೆ ಕಡಿಮೆಯಾಗಿದ್ದರಿಂದ ಕಳೆದ ವರ್ಷ ಪಿಒಪಿ ಗಣೇಶಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಆದರೆ, ಪಿಒಪಿಗೂ ಮಣ್ಣಿನ ಮೂರ್ತಿಗೂ ಅಜಗಜಾಂತರ ವ್ಯತ್ಯಾಸವಿದೆ. ಅತ್ಯಂತ ಚಿಕ್ಕದಾದ ಗಣಪತಿಗೆ ಅತ್ಯಂತ ದುಬಾರಿ ದರ ತೆರಬೇಕಾಗಿತ್ತು. ಆದರೆ, ಮಣ್ಣಿನಿಂದ ತಯಾರಿಸಿದ ಗಣಪತಿಗೆ ಅತ್ಯಂತ ಅಗ್ಗದ ದರದಲ್ಲಿ ಖರೀದಿಸಬಹುದು. ಹಾಗೂ ಪರಿಸರ ಸ್ನೇಹಿಯಾಗಿರುತ್ತದೆ. ಹೀಗಾಗಿ ಮಣ್ಣಿನ ಮೂರ್ತಿಯನ್ನೇ ಪ್ರತಿಷ್ಠಾಪಿಸುವುದಾಗಿ ನಿರ್ಧರಿಸಲಾಗಿದ್ದು, ಅದಕ್ಕಾಗಿ ವಿಗ್ರಹ ಖರೀದಿಸಲು ಆಗಮಿಸಿದ್ದೇವೆ ಎಂದು ವಿನಾಯಕ ನಗರ ಯುವಕ ಮಹೇಶ್‌ ತಿಳಿಸಿದ್ದಾರೆ.

Advertisement

ಗಣೇಶಮೂರ್ತಿಗಳ ತಯಾರಿಕೆ ಹೇಗೆ?
ಮೊದಲು ಭತ್ತದ ಹುಲ್ಲಿನಿಂದ ಗಣೇಶ ಮೂರ್ತಿಯ ಮಾದರಿಯನ್ನು ಸಿದ್ಧಪಡಿಸಿಕೊಳ್ಳಲಾಗುತ್ತದೆ. ಬಳಿಕ ಸ್ಥಳೀಯವಾಗಿ ದೊರೆಯುವ ಮಣ್ಣಿನೊಂದಿಗೆ ಕಲ್ಕತ್ತಾದಿಂದ ತರಲಾಗಿದ್ದ ಮಣ್ಣನ್ನು ಮಿಶ್ರಣ ಮಾಡಿ, ಹುಲ್ಲಿನ ಮೇಲೆ ಮೆತ್ತಲಾಗುತ್ತದೆ. ನಂತರ ಇದರ ಮೇಲೆ ಜಿಂಕ್‌ಪೌಡರ್‌ ಲೇಪನ ಮಾಡಲಾಗುತ್ತದೆ. ವಿಗ್ರಹಗಳು ಮತ್ತಷ್ಟು ಹೊಳೆಯುವ ಸಲುವಾಗಿ ಕೊನೆಯದಾಗಿ ಜಾಜಿ ಬಣ್ಣದ ಮಣ್ಣನ್ನು ಲೇಪಿಸಿ, ಅದರ ಮೇಲೆ ನೈಸರ್ಗಿಕವಾದ ಬಣ್ಣವನ್ನು ಲೇಪಿಸಲಾಗುತ್ತದೆ.

ಕಳೆದ ಕೆಲ ವರ್ಷಗಳಿಂದ ಪಶ್ಚಿಮ ಬಂಗಾಳದಿಂದ ಆಗಮಿಸಿ ಬಳ್ಳಾರಿಯಲ್ಲಿ ಗಣೇಶ ವಿಗ್ರಹ ತಯಾರಿಸಲಾಗುತ್ತಿದೆ. ನಮ್ಮ ವಿಗ್ರಹಗಳಿಗೆ ಬಳ್ಳಾರಿಯಲ್ಲಿ ಉತ್ತಮ ಬೇಡಿಕೆಯಿದ್ದು, ಸ್ಥಳೀಯರು ಮುಂಗಡವಾಗಿ ಹೇಳಿ ವಿಗ್ರಹ ತಯಾರಿಸಿಕೊಳ್ಳುತ್ತಾರೆ. ಅಲ್ಲದೇ, ಪ್ರಸಕ್ತ ವರ್ಷ ಪಿಒಪಿ ವಿಗ್ರಹಗಳಿಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಬ್ರೇಕ್‌ ಹಾಕಿದ್ದರಿಂದ ಕೇವಲ ಮಣ್ಣಿನಿಂದ ಮಾತ್ರ ಗಣೇಶ ವಿಗ್ರಹ ತಯಾರಿಸುತ್ತಿದ್ದು, ಅದಕ್ಕೆ ಸ್ಥಳೀಯ ಯುವಕರು ಸಹ ಮಣ್ಣಿನ ವಿಗ್ರಹಗಳನ್ನೇ ಕೇಳುತ್ತಿದ್ದಾರೆ.
ಚಂದನ್‌, ಪ್ರದೀಪ್‌, ವಿಗ್ರಹ ತಯಾರಕರು.

ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next