Advertisement

ಉದ್ಯೋಗ ಮೇಳದ ಸಿದ್ಧತೆ ಪರಿಶೀಲಿಸಿದ ಆಯುಕ್ತೆ

07:26 AM Feb 16, 2019 | Team Udayavani |

ತುಮಕೂರು: ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಶನಿವಾರ ಮತ್ತು ಭಾನುವಾರ ನಡೆಯಲಿರುವ ತುಮಕೂರು-ಚಿತ್ರದುರ್ಗ ಜಿಲ್ಲೆಗಳ ಬೃಹತ್‌ ಉದ್ಯೋಗ ಮೇಳದಲ್ಲಿ ಪ್ಲೇಸ್‌ಮೆಂಟ್‌ ಯೋಜನೆಗಳಿಗೆ ಭಾಗವಹಿಸಲು ಅವಕಾಶವಿಲ್ಲ ಎಂದು ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯ ಆಯುಕ್ತೆ ಜಿ.ಸತ್ಯವತಿ ಹೇಳಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮೇಳದ ಸಿದ್ಧತೆ ಬಗ್ಗೆ ನಡೆದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಉದ್ಯೋಗ ಮೇಳಕ್ಕೆ ಸಂಬಂಧಿಸಿದಂತೆ ಸಿದ್ಧತೆಗಳು ನಡೆದಿದೆ. ಮೇಳದಲ್ಲಿ ಭಾಗವಹಿಸಲು ಈಗಾಗಲೇ ಆನ್‌ಲೈನ್‌ ಮೂಲಕ 17,500 ಉದ್ಯೋಗಾಕಾಂಕ್ಷಿಗಳು ನೋಂದಾಯಿಸಿ ಕೊಂಡಿದ್ದು, ನೋಂದಣಿ ಸಂಖ್ಯೆ 20 ಸಾವಿರಕ್ಕೆ  ತಲುಪುವ ಸಾಧ್ಯತೆ ಇದೆ. ಮೇಳದಲ್ಲಿ ಹೆಚ್ಚಿನ ಜನಸಂದಣಿ ಉಂಟಾಗದಂತೆ ಮಳಿಗೆಗಳ ನಡುವೆ ಅಂತರವಿರುವಂತೆ ನಿರ್ಮಿಸಬೇಕು ಎಂದರು.

ಬಂದೋಬಸ್ತ್ಗೆ ಸೂಚನೆ: ಉದ್ಯೋಗಾರ್ಥಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಅಗತ್ಯ ಕುಡಿಯುವ ನೀರು, ಶೌಚಾಲಯ, ಮಧ್ಯಾಹ್ನದ ಭೋಜನ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಮಳಿಗೆಗಳ ಬಳಿ ಮಧ್ಯಾಹ್ನದ ಹೊತ್ತಿನಲ್ಲಿ ಬಿಸಿಲು ಬೀಳದಂತೆ ನೆರಳಿನ ವ್ಯವಸ್ಥೆ ಮಾಡಬೇಕು. ಮೇಳದಲ್ಲಿ ಎರಡೂ ಜಿಲ್ಲೆಗಳ ಉದ್ಯೋಗಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಪಡೆಯುವಂತಾಗಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದರು. 

15 ಹೆಚ್ಚು ನೋಂದಣಿ ಕೇಂದ್ರ: ಸಭೆಯಲ್ಲಿ ಮೇಳ ಸಿದ್ಧತೆ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ. ಕೆ.ರಾಕೇಶ್‌ ಕುಮಾರ್‌, ನೋಂದಣಿಯಾದ ಉದ್ಯೋಗಾರ್ಥಿಗಳಿಗೆ ಇಂದು ನೋಂದಣಿ ಖಚಿತವಾಗಿರುವ ಬಗ್ಗೆ ಎಸ್‌ಎಂಎಸ್‌ ಸಂದೇಶವನ್ನು ರವಾನಿಸಲಾಗುವುದು. ಮೇಳದಲ್ಲಿ ಭಾಗವಹಿಸಲು ಈಗಾಗಲೇ 105 ಕಂಪನಿಗಳ ಉದ್ಯೋಗದಾತರು ಆನ್‌ಲೈನ್‌ ಮೂಲಕ ನೋಂದಾಯಿಸಿಕೊಂಡಿದ್ದಾರೆ. ಇದಕ್ಕಾಗಿ 100ಕ್ಕೂ ಹೆಚ್ಚು ಮಳಿಗೆಗಳನ್ನು ಸೆಕ್ಟರ್‌ವಾರು ತೆರೆಯಲಾಗುವುದು.

ಅಲ್ಲದೆ 15 ನೋಂದಣಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು. ನಂತರ ಅಧಿಕಾರಿಗಳು ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣಕ್ಕೆ ಭೇಟಿ ನೀಡಿ ಪೂರ್ವಸಿದ್ಧತೆ ಕೈಗೊಂಡಿರುವ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದರು. ಕಾರ್ಮಿಕ ಆಯುಕ್ತ ಪಾಲಯ್ಯ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಕೋನ ವಂಶಿಕೃಷ್ಣ, ಜಿಲ್ಲಾ ಪಂಚಾಯತಿ ಸಿಇಒ ಶುಭ ಕಲ್ಯಾಣ್‌, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಶ್ರೀನಿವಾಸ್‌, ಮತ್ತಿತರ ಅಧಿಕಾರಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next