Advertisement

ಅಡುಗೆ ಸಾಮಗ್ರಿಗಳಿಂದ ಮಾರಕಾಸ್ತ್ರ ತಯಾರಿ

12:26 AM Oct 10, 2019 | Lakshmi GovindaRaju |

ಬೆಂಗಳೂರು: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ಕೈದಿಗಳು ಅಡುಗೆ ಸಾಮಗ್ರಿಗಳಿಂದಲೇ ಮಾರಕಾಸ್ತ್ರಗಳನ್ನು ಸಿದ್ಧಪಡಿಸುತ್ತಿದ್ದರು ಎಂಬ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಜೈಲಿನಲ್ಲಿರುವ ಕೆಲ ಕೈದಿಗಳು ಅಡುಗೆಗೆ ಬಳಸುವ ಸೌಟು, ಚಮಚ, ತಟ್ಟೆ, ಲೋಟ ಹಾಗೂ ಗ್ಯಾಸ್‌ ಹಚ್ಚಲು ಬಳಸುವ ಲೈಟರ್‌ಗಳ ಒಂದು ಭಾಗವನ್ನು ಚನ್ನಾಗಿ ಉಜ್ಜಿ ಮಾರಕಾಸ್ತ್ರಗಳನ್ನಾಗಿ ಸಿದ್ಧಪಡಿಸುತ್ತಿದ್ದರು ಎಂಬುದು ತಿಳಿದು ಬಂದಿದೆ.

Advertisement

ಮೊಬೈಲ್‌ ಮತ್ತು ಗಾಂಜಾ ಬಳಕೆ ಆರೋಪದ ಮೇಲೆ ಬುಧವಾರ ಮುಂಜಾನೆ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ಅಧಿಕಾರಿಗಳ ತಂಡ ಕೇಂದ್ರ ಪರಪ್ಪನ ಅಗ್ರಹಾರ ಕಾರಾಗೃಹದ ಮೇಲೆ ದಾಳಿ ನಡೆಸಿದಾಗ ಈ ವಿಚಾರ ಬಯಲಾಗಿದ್ದು, ಅಧಿಕಾರಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ದಾಳಿ ವೇಳೆ ಮೊಬೈಲ್‌, ಸಿಮ್‌ಕಾರ್ಡ್‌ ಹಾಗೂ ಅಡುಗೆ ಸಾಮಗ್ರಿಗಳಿಂದ ಸಿದ್ಧಪಡಿಸಿದ ಮಾರಕಾಸ್ತ್ರಗಳನ್ನು ಜಪ್ತಿ ಮಾಡಿದೆ.

ಸಿಸಿಬಿಯ ಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ನೇತೃತ್ವದ ಸುಮಾರು 60 ಮಂದಿಗೂ ಅಧಿಕ ಅಧಿಕಾರಿಗಳ ತಂಡ ಮುಂಜಾನೆ ಆರು ಗಂಟೆಯಿಂದ ಅಪರಾಹ್ನ 12 ಗಂಟೆವರೆಗೆ ಜೈಲಿನ ಎಲ್ಲ ಬ್ಯಾರಕ್‌ಗಳ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಿದೆ. ಈ ವೇಳೆ 37 ಚಾಕುಗಳು, ಗಾಂಜಾ, ಗಾಂಜಾ ಪೈಪ್‌ಗ್ಳು, ಮೊಬೈಲ್‌ಗ‌ಳು, ಹತ್ತಾರು ಸಿಮ್‌ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಾರಕಾಸ್ತ್ರ ತಯಾರಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಕ್ಕಿರುವ ಬಹುತೇಕ ಮಾರಕಾಸ್ತ್ರಗಳನ್ನು ಕೈದಿಗಳೇ ಸಿದ್ಧಪಡಿಸಿದ್ದಾರೆ. ಜೈಲಿನಲ್ಲಿ 165 ಮಂದಿ ಸಜಾಬಂಧಿಗಳಿಗೆ ಅಡುಗೆ ಮಾಡಲು ಹಾಗೂ ಊಟ ಬಡಿಸಲು ಅವಕಾಶ ನೀಡಲಾಗಿದೆ. ಈ ವೇಳೆ ಕೆಲ ಕೈದಿಗಳು ಅಡುಗೆಗೆ ಬಳಸುವ ಸೌಟು, ಚಮಚ, ತಟ್ಟೆ, ಲೋಟ ಹಾಗೂ ಲೈಟರ್‌ಗಳನ್ನು ಕಳವು ಮಾಡುತ್ತಿದ್ದರು.

ಈ ಉಪಕರಣಗಳನ್ನು ತಮ್ಮ ಕೊಠಡಿಗೆ ಕೊಂಡೊಯ್ದು, ರಾತ್ರಿಯಿಡಿ ನುಣುಪಾಗಿ ಉಜ್ಜಿ ಆಯುಧವನ್ನಾಗಿ ರೂಪಿಸುತ್ತಿದ್ದರು. ಇನ್ನು ಕೆಲ ಕೈದಿಗಳು ಜೈಲಿನ ಆವರಣದಲ್ಲಿರುವ ಕುಲುವೆ ಹಾಗೂ ಲೆಥಿಂಗ್‌ ಯಂತ್ರದ ಮೂಲಕ ಸೌಟು, ಚಮಚ ಹಾಗೂ ತಟ್ಟೆಯ ಒಂದು ಭಾಗವನ್ನು ಕತ್ತರಿಸಿ, ಬಳಿಕ ಅವುಗಳನ್ನು ಅದೇ ಯಂತ್ರ ಹಾಗೂ ಕುಲುವೆ ಮೂಲಕ ಚೂಪಾಗಿ ಮಾಡುತ್ತಿದ್ದರು.

Advertisement

ಮತ್ತೂಂದೆಡೆ ಕೊಡಗೊಲು, ಮಚ್ಚಿನ ಹಿಂಭಾಗದ ಮರದ ತುಂಡನ್ನು ಬೇರ್ಪಡಿಸಿ, ಅದನ್ನು ತಮ್ಮ ಬಳಿಯೇ ಇಟ್ಟುಕೊಳ್ಳುತ್ತಿದ್ದರು. ಗ್ಯಾಸ್‌ ಹಚ್ಚುವ ಲೈಟರ್‌ನ ಹಿಂಭಾಗದ ಪ್ಲಾಸ್ಟಿಕ್‌ ವಸ್ತುವನ್ನು ಕತ್ತರಿಸುತ್ತಿದ್ದ ಕೈದಿಗಳು ಲೈಟರ್‌ನ ಇನ್ನುಳಿದ ಭಾಗಕ್ಕೆ ಮತ್ತೂಂದು ಕಬ್ಬಿಣ ವಸ್ತುವನ್ನು ಅಳವಡಿಸಿ ಸಾಣೆ ಹಿಡಿದಿದ್ದಾರೆ.

ವಿರೋಧಿ ಬಣದ ಮೇಲೆ ದಾಳಿಗೆ ಸಿದ್ಧತೆ: ತಮ್ಮ ವಿರೋಧಿ ಬಣದ ಕೈದಿಗಳ ಮೇಲೆ ದಾಳಿ ನಡೆಸಲು ಈ ರೀತಿ ಮಾರಕಾಸ್ತ್ರಗಳನ್ನು ಮಾಡಿಕೊಂಡಿರುವ ಸಾಧ್ಯತೆಯಿದೆ. ಈ ಬಗ್ಗೆ ಕಾರಾಗೃಹ ಇಲಾಖೆ ಅಧಿಕಾರಿಗಳಿಗೆ ಪತ್ರದ ಮೂಲಕ ಕಾರಣ ಕೇಳಲಾಗುವುದು ಎಂದು ಸಿಸಿಬಿ ತಿಳಿಸಿದೆ.

ಆದರೆ, ಜೈಲಿನ ಮೂಲಗಳ ಪ್ರಕಾರ ಸಜಾಬಂಧಿಗಳಿಗೆ ಮಾತ್ರ ಅಡುಗೆ ಮಾಡಲು ಅವಕಾಶ ನೀಡಲಾಗಿದೆ. ಈ ಕೈದಿಗಳು ಈ ರೀತಿ ಮಾಡಲು ಸಾಧ್ಯವಿಲ್ಲ. ಅಡುಗೆ ಮತ್ತು ಊಟ ಬಡಿಸುವ ಸಂದರ್ಭದಲ್ಲಿ ಇತರೆ ಕೈದಿಗಳು ಕಳವು ಮಾಡಿ ಈ ರೀತಿಯ ಮಾರಕಾಸ್ತ್ರಗಳನ್ನು ಸಿದ್ಧಪಡಿಸಿಕೊಂಡಿರುವ ಸಾಧ್ಯತೆಯಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿವೆ.

ಮೊಬೈಲ್‌ ಬಳಕೆ: ಇನ್ನು ಜೈಲಿನ ಹಲವೆಡೆ ಮೊಬೈಲ್‌ ಜಾಮರ್‌ ಅಳವಡಿಸಿದ್ಧರೂ ಕೆಲವಡೆ ಮೊಬೈಲ್‌ ನೆಟ್‌ವರ್ಕ್‌ ಸಂಪರ್ಕಿಸಬಹುದು. ಈ ಸ್ಥಳದಲ್ಲಿ ಕೈದಿಗಳು ಹೊರಗಿನ ತಮ್ಮ ಸಹಚರರು, ಸಂಬಂಧಿಗಳ ಜತೆ ಮಾತನಾಡಲು ಮೊಬೈಲ್‌ ಬಳಕೆ ಮಾಡುತ್ತಿದ್ದಾರೆ. ಅದಕ್ಕಾಗಿ ತಮ್ಮನ್ನು ಭೇಟಿ ಮಾಡಲು ಬರುವ ವ್ಯಕ್ತಿಗಳಿಂದ ಸಿಮ್‌ಕಾರ್ಡ್‌ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.

ಸಿಸಿಬಿ ದಿಢೀರ್‌ ದಾಳಿ: ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಸೂಚನೆ ಮೇರೆಗೆ ದಾಳಿ ನಡೆಸಲಾಗಿದೆ. ದಾಳಿಯಲ್ಲಿ 37 ಚಾಕು, ಮಾರಕಾಸ್ತ್ರಗಳು, ಗಾಂಜಾ ಮತ್ತು ಗಾಂಜಾ ಪೈಪ್‌ಗ್ಳು ಸಿಕ್ಕಿವೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಕೊಲೆ, ದರೋಡೆ, ಸುಲಿಗೆಯಂತಹ ಪ್ರಕರಣಗಳಲ್ಲಿ ಜೈಲು ಸೇರಿರುವ ಕೆಲ ಕೈದಿಗಳು ಇಲ್ಲಿಂದಲೇ ಹೊರಗಡೆ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next