ಜಗಳೂರು: ಅನೇಕ ವರ್ಷಗಳಿಂದ ಅತ್ಯಂತ ವಿಜೃಂಭಣೆಯಿಂದ ನಡೆದು ಕೊಂಡು ಬರುತ್ತಿರುವ ಜಾತ್ರಾ ಮಹೋತ್ಸವನ್ನು ಸುವ್ಯವಸ್ಥಿತ ರೀತಿಯಲ್ಲಿ ಆಚರಿಸುವಂತೆ ಶಾಸಕ ಎಚ್.ಪಿ.ರಾಜೇಶ್ ಇಂದಿಲ್ಲಿ ಕರೆ ನೀಡಿದರು.
ತಾಲೂಕಿನ ಐತಿಹಾಸಿಕ ಕೊಡದಗುಡ್ಡ ವೀರಭದ್ರಸ್ವಾಮಿ ದೇವಸ್ಥಾನಬಳಿ ನಡೆಯುತ್ತಿರುವ ಪೂರ್ವ ತಯಾರಿಯನ್ನು ಪರಿಶೀಲಸಿ ನಂತರ ವೀರಭದ್ರಸ್ವಾಮಿ ಟ್ರಸ್ಟ್ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಈ ಜಾತ್ರೆ ಆಗಮಿಸಲಿದ್ದಾರೆ.
ಹೀಗಾಗಿ ಉತ್ತಮ ರೀತಿಯಲ್ಲಿ ಜಾತ್ರಾ ಮಹೋತ್ಸವವನ್ನು ಆಚರಿಸುವ ಮೂಲಕ ಮಾದರಿಯಾಗಬೇಕೆಂದರು. ಮುಂದಿನ ವರ್ಷದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ ತೇರು ನಿರ್ಮಾಣಕ್ಕೆ 1 ಲಕ್ಷರೂ. ವೈಯಕ್ತಿಕವಾಗಿ ದೇಣಿಗೆ ನೀಡಲಾಗುವುದು ಎಂದು ಘೋಷಿಸಿದ ಅವರು, ಸರ್ಕಾರದಿಂದ ಅನುದಾನ ಕಲ್ಪಿಸುವ ಕೊಡುವ ಭರವಸೆ ನೀಡಿದರು.
ವಸತಿಗೃಹ ಸೇರಿದಂತೆ ಇತರೇ ಸೌಲಭ್ಯ ಒದಗಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಇದೇ ಮಾರ್ಚ್ 14 ಮತ್ತು 15ರಂದು ನಡೆಯಲಿರುವ ಜಾತ್ರೆಗೆ ಸಕಲ ರೀತಿಯಲ್ಲಿ ಸಜ್ಜುಗೊಂಡಿದ್ದು ಗ್ರಾಮಪಂಚಾಯಿತಿ ನೀರು, ವಿದ್ಯುತ್ ದೀಪ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಿದೆ.
ಸುಮಾರು 3 ಕಿಮೀ ದೂರದಲ್ಲಿರುವ ಮುಸ್ಟಿಗರಹಳ್ಳಿಯಲ್ಲಿ ಕೊಳವೆ ಬಾವಿ ಕೊರೆದು ಅಲ್ಲಿಂದ ಪೈಪ್‌ಲೈನ್ ಮೂಲಕ ನೀರು ಪೂರೈಸಿರುವ ಗ್ರಾಪಂನ ಕ್ರಮದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ದೇವಿಕೆರೆ ವಿಎಸ್‌ಎಸ್‌ಎನ್ ಅಧ್ಯಕ್ಷ ಬಸವಾಪುರ ರವಿಚಂದ್ರ, ಜಿಲ್ಲಾ ಸಹಕಾರ ಬ್ಯಾಂಕ್‌ನ ನಿರ್ದೇಶಕ ವೇಣುಗೋಪಾಲರೆಡ್ಡಿ, ಜಗಳೂರು ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಮಲ್ಲಿಕಾರ್ಜುನ, ಕೊಡದಗುಡ್ಡದ ಟ್ರಸ್ಟಿಗಳಾದ ರುದ್ರಸ್ವಾಮಿ, ಉಮೇಶಣ್ಣ, ಚನ್ನಯ್ಯ, ರಾಜಣ್ಣ, ದೇವಿಕೆರೆ ಗುರುಸ್ವಾಮಿ, ನಾಗರಾಜ್ ಇತರರಿದ್ದರು.