Advertisement

ಕೈಗಾರಿಕೆ ಪುನರಾರಂಭಕ್ಕೆ ಸಿದ್ಧತೆ ನಡೆಸಿ: ಕೈಗಾರಿಕೋದ್ಯಮಿಗಳಿಗೆ ಬಿಎಸ್ ವೈ ಸಲಹೆ

08:07 AM May 01, 2020 | keerthan |

ಬೆಂಗಳೂರು: ಕೇಂದ್ರ ಸರಕಾರದಿಂದ ಕೈಗಾರಿಕೆಗಳ ಪುನರಾರಂಭಕ್ಕೆ ಕುರಿತ ಮಾರ್ಗಸೂಚಿಗಳನ್ನು ಮೇ 4ರ ನಂತರ ನಿರೀಕ್ಷಿಸಲಾಗುತ್ತಿದ್ದು, ಅದರಂತೆ ಕೈಗಾರಿಕೆಗಳನ್ನು ಪುನರಾರಂಭಿಸಲು ಸಿದ್ಧತೆ ನಡೆಸಿಕೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೈಗಾರಿಕೋದ್ಯಮಿಗಳಿಗೆ ಸಲಹೆ ನೀಡಿದರು.

Advertisement

ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಪುನರಾರಂಭಿಸುವ ನಿಟ್ಟಿನಲ್ಲಿ ವಿವಿಧ ವಾಣಿಜ್ಯೋದ್ಯಮ ಸಂಘಟನೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಚರ್ಚಿಸಿದರು.

ಸಭೆಯಲ್ಲಿ ತಮ್ಮ ಅಭಿಪ್ರಾಯಗಳನ್ನು, ಸಲಹೆಗಳನ್ನು ನೀಡಿದ ಉದ್ಯಮಿಗಳು, ರಾಜ್ಯದಲ್ಲಿ ಕೋವಿಡ್ 19 ನಿಯಂತ್ರಣ ನಿರ್ವಹಣೆಗೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಅವರ ಸಮಸ್ಯೆಗಳನ್ನು ಆಲಿಸಿದ ಮುಖ್ಯಮಂತ್ರಿಗಳು, ಕಳೆದ ಒಂದು ತಿಂಗಳ ಅವಧಿಯಲ್ಲಿ ಕೈಗಾರಿಕೋದ್ಯಮಿಗಳೂ ಸಂಕಷ್ಟಕ್ಕೆ ಒಳಗಾಗಿರುವುದು ಸರ್ಕಾರಕ್ಕೆ ಅರಿವಿದೆ. ಆದರೆ ಕಾರ್ಖಾನೆಗಳ ಮಾಲೀಕರು, ಕಾರ್ಮಿಕರ ವೇತನವನ್ನು ತಪ್ಪದೆ ಪಾವತಿಸುವಂತೆ ಮನವಿ ಮಾಡಿದರು.

ಅಲ್ಲದೆ, ಕಾರ್ಖಾನೆಗಳಲ್ಲಿ ಕಾರ್ಮಿಕರು/ ಸಿಬ್ಬಂದಿಯ ಸುರಕ್ಷತೆಗೆ ಆದ್ಯತೆ ನೀಡಬೇಕು ಹಾಗೂ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಮತ್ತಿತರ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳುವಂತೆ ಸೂಚಿಸಿದರು.

Advertisement

ರಾಜ್ಯದಲ್ಲಿ ಈಗಾಗಲೇ ಹಸಿರು ವಲಯಗಳಲ್ಲಿ ಕೈಗಾರಿಕೆ ಪ್ರಾರಂಭಕ್ಕೆ ಅನುಮತಿ ನೀಡಲಾಗಿದೆ. ಮೇ 4 ರ ನಂತರ ಕೇಂದ್ರ ಸರ್ಕಾರದಿಂದ ಬರುವ ಮಾರ್ಗಸೂಚಿಗಳ ನಿರೀಕ್ಷಿಸಲಾಗುತ್ತಿದೆ. ಮಾರ್ಗಸೂಚಿಯ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಿಮ್ಮೆಲ್ಲರ ಸಮಸ್ಯೆಗಳನ್ನು ಸರ್ಕಾರ ಸಹಾನುಭೂತಿಯಿಂದ ಪರಿಶೀಲಿಸಲಿದೆ. ಬೇಡಿಕೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ, ಸರ್ಕಾರದ ಇತಿ ಮಿತಿಯಲ್ಲಿ ಸಾಧ್ಯವಾದಷ್ಟು ಸ್ಪಂದಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ, ಕಾರ್ಖಾನೆ ಮಾಲೀಕರು, ಕೆಲಸಗಾರರ ದುಡಿಮೆಯ ಅವಧಿ ಹೆಚ್ಚಳಕ್ಕೆ ಮನವಿ ಸಲ್ಲಿಸಿದಲ್ಲಿ ಕಾರ್ಮಿಕ ಇಲಾಖೆಯಿಂದ ಅನುಮತಿ ನೀಡಲಾಗುತ್ತಿದೆ ಎಂದು ಸ್ಪಷ್ಟನೆ ನೀಡಲಾಯಿತು.

ಸಭೆಯಲ್ಲಿ  ಕೈಗಾರಿಕಾ ಸಚಿವ ಜಗದೀಶ ಶೆಟ್ಟರ, ಕಾರ್ಮಿಕ ಸಚಿವ ಅರಬೈಲ್ ಶಿವರಾಮ ಹೆಬ್ಬಾರ್, ಎಫ್ ಕೆ ಸಿ ಸಿ ಐ, ಸಣ್ಣ ಕೈಗಾರಿಕೆಗಳ ಸಂಘ, ಫಿಕ್ಕಿ, ಸಿಐಐ, ಅವೇಕ್, ಅಸೋಚಾಂ, ಬಿಸಿಐಸಿ, ಮಹಿಳಾ ಉದ್ಯಮಿಗಳ ಒಕ್ಕೂಟ ಮತ್ತಿತರ ಸಂಘಟನೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next