ವೇಣೂರು: ಕಾಡುಪ್ರಾಣಿಗಳ ಉಪಟಳದಿಂದ ಬೇಸತ್ತು ಹೋಗುವ ಕೃಷಿಕರು ಅಮೂಲ್ಯ ಬೆಳೆ ರಕ್ಷಿಸಿಕೊಳ್ಳಲು ಅನುಕೂಲವಾಗಲೆಂದು ವೇಣೂರು ಕರಿಮಣೇಲು ಗ್ರಾಮದ ವ್ಯಕ್ತಿಯೊಬ್ಬರು ನಕಲಿ ಕೋವಿ ತಯಾರಿಸಿದ್ದು, ಜಾಲತಾಣ ಗಳಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕರಿಮಣೇಲು ಗ್ರಾಮದ ಗಾಂಧಿ ನಗರ ನಿವಾಸಿ ಗೋಪಾಲ ಆಚಾರ್ಯ ಕೃಷಿಕಸ್ನೇಹಿ ನಕಲಿ ಕೋವಿ ತಯಾರಿಸಿದವರು. ಕಳೆದ 35 ವರ್ಷಗಳಿಂದ ಬಡಗಿ ವೃತ್ತಿ ಮಾಡಿಕೊಂಡಿರುವ ಇವರು ಇದೀಗ ನಕಲಿ ಕೋವಿ ಮೂಲಕ ಕೃಷಿಕರ ಗಮನ ಸೆಳೆದಿದ್ದಾರೆ. ಈ ನಕಲಿ ಕೋವಿ ಕಾಡು ಪ್ರಾಣಿಗಳನ್ನು ಓಡಿಸಲು ಸುಲಭವಾಗಿ ಬಳಸಬಹುದಾದ ವಿಶಿಷ್ಟ ಸಾಧನ ಆಗಿದೆ.
ಕೋವಿ ಕೊಂಡು ಹೋದ ಎಲ್ಲ ರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತ ವಾಗಿದೆ. ಹಗಲು ಹೊತ್ತು ಮಂಗಗಳ ಹಾವಳಿ, ನವಿಲು ಉಪಟಳ ಹಾಗೂ ರಾತ್ರಿ ಹೊತ್ತು ಕಾಡು ಹಂದಿಗಳ ಹಾವಳಿ ತಪ್ಪಿಸಲು ಕೋವಿ ಉತ್ತಮ ಸಾಧನವಾಗಿದೆ ಎನ್ನುತ್ತಾರೆ ಗೋಪಾಲ ಆಚಾರ್ಯ. ಅವರ ನಕಲಿ ಕೋವಿ ಕೃಷಿಕರಿಗೆ ತುಂಬಾ ಉಪಯೋಗವಾಗಿದ್ದು, ಇದರಿಂದ ಪ್ರಾಣಿ-ಪಕ್ಷಿಗಳ ಜೀವನಕ್ಕೇನೂ ಅಪಾಯ ಆಗುವುದಿಲ್ಲ. ದೊಡ್ಡ ಶಬ್ದದೊಂದಿಗೆ ಚಿಕ್ಕಕಲ್ಲು ಬೀಳುವುದರಿಂದ ಪ್ರಾಣಿ- ಪಕ್ಷಿಗಳು ಹೆದರಿ ಓಡುತ್ತವೆ. ಈ ಕೋವಿ ನಿಜವಾಗಲೂ ಕೃಷಿಕರಿಗೆ ಉಪ ಯೋಗಕ್ಕೆ ಬರುತ್ತಿದೆ. ಇದರಿಂದ ಪ್ರಾಣಿ ಗಳ ಜೀವಕ್ಕೆ ಏನೂ ಅಪಾಯ ಇಲ್ಲ. ದೊಡ್ಡ ಶಬ್ದ ದಿಂದಾಗಿ ಪ್ರಾಣಿಗಳು ಹೆದರಿ ಓಡುತ್ತವೆ. ನಾನು ಉಪಯೋಗಿಸುತ್ತಿದ್ದೇನೆ ಎಂದು ವೇಣೂರು ವಲಯ ಅರಣ್ಯಾ ಧಿಕಾರಿ ಪ್ರಶಾಂತ್ ಕುಮಾರ್ ಪೈ ತಿಳಿಸಿದ್ದಾರೆ.
ನಕಲಿಕೋವಿ ಬಳಗೆ ಸುಲಭ. ಕೋವಿ ಯಲ್ಲಿ ರಚಿಸಲಾಗಿರುವ ಗುಂಡಿಯೊಳಗೆ ಪಟಾಕಿ ಇಡಬೇಕು. ನಳಿಕೆಯೊಳಗೆ ಚಿಕ್ಕ ಕಲ್ಲುಗಳನ್ನು ಹಾಕಬೇಕು. ಪಟಾಕಿ ಬತ್ತಿಗೆ ಬೆಂಕಿ ಹಚ್ಚಿದ ಕೂಡಲೇ ದೊಡ್ಡ ಶಬ್ದದೊಂದಿಗೆ ಆ ಕಲ್ಲುಗಳು ನಳಿಕೆಯಿಂದ ರಭಸವಾಗಿ ಹೊರ ದಬ್ಬಲ್ಪಡುತ್ತವೆ. ಪಟಾಕಿಯ ಶಬ್ದಕ್ಕೆ ಮತ್ತು ಚಿಕ್ಕಚಿಕ್ಕ ಕಲ್ಲುಗಳು ಸಿಡಿಯಲ್ಪಟ್ಟು ಪ್ರಾಣಿಗಳ ಮೇಲೆ ಬೀಳುವುದರಿಂದ ಅವು ಹೆದರಿ ಓಡುತ್ತವೆ. ಕೋವಿಯಿಂದ ಚಾಟಿ ಬೀಸಿದಷ್ಟು ನೋವಾಗುವುದರಿಂದ ಪ್ರಾಣಿ ಗಳಿಗೆ ಅಪಾಯ ಇಲ್ಲ. ಕಾಡುಪ್ರಾಣಿ ಹಾವಳಿಯಿಂದ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಹೋರಾಡುತ್ತಿರುವ ಕೃಷಿಕರ ಮನೆಯಲ್ಲಿ ಇದೊಂದು ಸುರಕ್ಷಿತ ಉತ್ತಮ ಸಾಧನ ಎನ್ನುತ್ತಾರೆ ಗೋಪಾಲ ಆಚಾರ್ಯ.
ಬಾಧೆ ತಡೆಗೆ ಉಪಾಯ
ಈ ವರೆಗೆ ಹಲವು ಕೋವಿಗಳನ್ನು ತಯಾರಿಸಿಕೊಟ್ಟಿದ್ದೇನೆ. ಅಪಾಯ ವಾಗದ ರೀತಿಯಲ್ಲಿ ಕಾಡು ಪ್ರಾಣಿಗಳನ್ನು ಓಡಿಸಲು ಯೋಚಿಸಿ ದಾಗ ಇಂತಹ ಉಪಾಯ ಹೊಳೆದಿದೆ. ಕೋವಿಯನ್ನು ಪಡೆದುಕೊಂಡಿರುವ ಕೃಷಿಕರು ತೋಟದಲ್ಲಿ ಪ್ರಾಣಿ- ಪಕ್ಷಿಗಳ ಬಾಧೆ ಕಡಿಮೆ ಆಗಿದೆ ಎಂದಿದ್ದಾರೆ.
-ಗೋಪಾಲ ಆಚಾರ್ಯ ಕರಿಮಣೇಲು, ನಕಲಿ ಕೋವಿ ಶೋಧಕರು