Advertisement

ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ನೀಲನಕ್ಷೆ ಸಿದ್ಧಪಡಿಸಿ

09:58 PM Oct 04, 2019 | Lakshmi GovindaRaju |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಫ‌ುಲ ಅವಕಾಶಗಳಿದ್ದು, ಜಿಲ್ಲೆಯಲ್ಲಿರುವ ಪ್ರವಾಸ ತಾಣಗಳ ಅಭಿವೃದ್ಧಿ ಕುರಿತು ಪ್ರವಾಸಿಗರನ್ನು ಆಕರ್ಷಿಸಲು ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತಾಗಿ ಸಮಗ್ರ ನೀಲನಕ್ಷೆ ಸಿದ್ಧಪಡಿಸಿ ಸಲ್ಲಿಸುವಂತೆ ರಾಜ್ಯ ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಜಿಲ್ಲಾಡಳಿತಕ್ಕೆ ತಿಳಿಸಿದರು. ನಗರದ ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ಶುಕ್ರವಾರ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವ ರವಿ, ಜಿಲ್ಲೆಯಲ್ಲಿರುವ ನಂದಿಗಿರಿಧಾಮ ಸೇರಿದಂತೆ ಐತಿಹಾಸಿಕ ಪ್ರವಾಸಿ ಹಾಗೂ ದೇಗುಲಗಳ ಅಭಿವೃದ್ಧಿಗೆ ಇಲಾಖೆ ಒತ್ತು ಕೊಡಲಿದೆ ಎಂದರು.

Advertisement

ಪ್ರವಾಸಿ ಮಾಹಿತಿ ಕೇಂದ್ರ ಆರಂಭಿಸಿ: ಸಭೆ ಆರಂಭದಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳು, ಪುರಾತತ್ವ ಇಲಾಖೆಯ ಸ್ಮಾರಕಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮಗಳ ಪ್ರಗತಿ, ಕಾಮಗಾರಿಗಳ ಅನುಷ್ಠಾನದ ಕುರಿತು ಪಿಪಿಟಿ ವೀಕ್ಷಿಸಿದ ಸಚಿವರು, ಬಳಿಕ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಆಗಬೇಕಾದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಇಲಾಖೆ ಗುರುತಿಸಿರುವ 13 ಸ್ಥಳಗಳ ಜೊತೆಗೆ ಜಿಲ್ಲಾಡಳಿತ ಗುರುತಿಸಿರುವ 50 ಪ್ರವಾಸಿ ತಾಣಗಳು ಸೇರಿ ಪ್ರವಾಸಿಗರನ್ನು ಆಕರ್ಷಿಸಲು ಸರ್ಕಿಟ್‌ ಮಾದರಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು, ಸೌಕರ್ಯ ಕಲ್ಪಿಸುವ ಬಗ್ಗೆ ನೀಲನಕ್ಷೆ ಸಿದ್ಧಪಡಿಸಿ ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದರು.

ನಂದಿಗಿರಿಧಾಮದಲ್ಲಿ ಟ್ರಾಯ್‌ ಟ್ರೈನ್‌ ಅಳವಡಿಕೆ ಸೇರಿದಂತೆ ಸಾಧ್ಯವಾದ ಕಡೆ ಜಲ ಕ್ರೀಡೆಗಳನ್ನು ನಡೆಸಲು ಅವಕಾಶ ಇರುವ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದರು. ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಕಾಫಿ ಟೇಬಲ್‌ ಬುಕ್‌ ಹೊರ ತರುವುದರ ಜೊತೆಗೆ ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಅರಿವು ಮೂಡಿಸಲು ಕರಪತ್ರಗಳನ್ನು ಮುದ್ರಿಸುವಂತೆ ಹೇಳಿ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ಕೊಡುವ ಕೇಂದ್ರ ತೆರೆಯುವಂತೆ ಆದೇಶಿಸಿದರು. ಸಭೆಯಲ್ಲಿ ವಿಧಾನಸಭೆ ಉಪಸಭಾಧ್ಯಕ್ಷ ಎಂ.ಕೃಷ್ಣಾರೆಡ್ಡಿ, ಜಿಲ್ಲಾಧಿಕಾರಿ ಆರ್‌.ಲತಾ, ಜಿಪಂ ಸಿಇಒ ಬಿ.ಫೌಜಿಯಾ ತರನ್ನುಮ್‌, ಉಪವಿಭಾಗಾಧಿಕಾರಿ ಎ.ಎನ್‌.ರಘುನಂದನ್‌, ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಸಚಿವರಿಗೆ ಪ್ರಸ್ತಾವನೆ ಸಲ್ಲಿಕೆ: ಜಿಲ್ಲೆಯ ಪ್ರವಾಸಿ ತಾಣಗಳಾದ ನಂದಿಗಿರಿಧಾಮದಿಂದ ಚೆನ್ನಗಿರಿಗೆ ಕೇಬಲ್‌ ಕಾರ್‌ ಯೋಜನೆ, ನಂದಿಗಿರಿಧಾಮದಲ್ಲಿ ಪ್ರವಾಸಿಗರ ಆಕರ್ಷಣೆಗಾಗಿ ಟಾಯ್‌ ಟ್ರೈನ್‌, ಗುಮ್ಮನಾಯಕನಪಾಳ್ಯ ಕೋಟೆಯನ್ನು ಗೋಲ್ಕೊಂಡಕೋಟೆ ಮಾದರಿ ರೂಪಿಸುವುದು ಹಾಗೂ ಧ್ವನಿ ಮತ್ತು ಬೆಳಕು ಯೋಜನೆ ರೂಪಿಸುವುದು, ದಂಡಿಗಾನಹಳ್ಳಿ ಟ್ಯಾಂಕ್‌ ನಲ್ಲಿ ಪ್ರವಾಸಿಗರಿಗೆ ಬೋಟಿಂಗ್‌ ವ್ಯವಸ್ಥೆ, ಗಡಿದಂ ದೇವಾಲಯದ ಬಳಿ ಉದ್ಯಾನವನ ನಿರ್ಮಾಣ, ಸುರಸದ್ಮಗಿರಿ ಬೆಟ್ಟಕ್ಕೆ ಕೇಬಲ್‌ ಕಾರ್‌ ಹಾಗೂ ಧ್ವನಿ ಮತ್ತು ಬೆಳಕು ಯೋಜನೆ, ರಂಗಸ್ಥಳದಲ್ಲಿ ಸಮಕಾಲೀನ ಶಿಲ್ಪಕಲೆ ಹಾಗೂ ಉದ್ಯಾನವನ, ವರ್ಲಕೊಂಡ ಬೆಟ್ಟದಲ್ಲಿ ಸಾಹಸ ಕ್ರೀಡೆ ಆಯೋಜಿಸುವ ಕುರಿತು ನೂತನ ಯೋಜನೆಯ ಪ್ರಸ್ತಾಪವನ್ನು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಷರೀಫ್ ಸಲ್ಲಿಸಿದರು.

ಟ್ಯಾಕ್ಸಿ ಬೇಡಿಕೆ ಬಗ್ಗೆ ಸಮೀಕ್ಷೆ ನಡೆಸಿ: ಜಿಲ್ಲೆಯಲ್ಲಿ ಪ್ರವಾಸಿ ಟ್ಯಾಕ್ಸಿ ಸೌಲಭ್ಯಗಳಿಗೆ ಹೆಚ್ಚು ಬೇಡಿಕೆ ಇಲ್ಲದ ಬಗ್ಗೆ ಸಭೆಯಲ್ಲಿ ಅಧಿಕಾರಿಗಳು ನೀಡಿದ ಮಾಹಿತಿಗೆ ಪ್ರತಿಕ್ರಿಯೆ ನೀಡಿದ ಸಚಿವ ಸಿ.ಟಿ.ರವಿ, ಜಿಲ್ಲೆಯಲ್ಲಿ ಪ್ರವಾಸಿ ಟ್ಯಾಕ್ಸಿಗಳ ಬೇಡಿಕೆ ಬಗ್ಗೆ ಸಮೀಕ್ಷೆ ನಡೆಸುವಂತೆ ಸೂಚಿಸಿದರು. ಬೇಡಿಕೆ ಇಲ್ಲದ ಸೌಲಭ್ಯ ವಿತರಿಸಿ ಏನು ಪ್ರಯೋಜನ. ಅದರ ಬಗ್ಗೆ ಪ್ರವಾಸೋದ್ಯಮಕ್ಕೆ ಪೂರಕವಾದ ಸಂಚಾರಿ ಮೊಬೈಲ್‌ ಶಾಪ್‌, ಕರಕುಶಲ ವಸ್ತುಗಳ ಮಾರಾಟ, ಜಲ ಕ್ರೀಡೆಗೆ ಸಂಬಂಧಿಸಿದಂತೆ ವಿವಿಧ ಸೌಲಭ್ಯಗಳನ್ನು ವಿತರಿಸಬಹುದು ಎಂದರು. ಇದೇ ಸಂದರ್ಭದಲ್ಲಿ ಐದು ಮಂದಿ ಫ‌ಲಾನುಭವಿಗಳಿಗೆ ಸಚಿವರು ಪ್ರವಾಸೋದ್ಯಮ ಇಲಾಖೆಯಡಿ ಪ್ರವಾಸಿ ಟ್ಯಾಕ್ಸಿಗಳನ್ನು ವಿತರಿಸಿದರು.

Advertisement

2020 ರೊಳಗೆ ರಾಜ್ಯಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸುವುದರ ಜೊತೆಗೆ ಪ್ರವಾಸಿಗರು ಈಗಿರುವ ಸಂಖ್ಯೆಯನ್ನು ಮೂರ್ನಾಲ್ಕು ಪಟ್ಟು ಹೆಚ್ಚಿಸಿ ರಾಜ್ಯಕ್ಕೆ ಆದಾಯ ತರುವ ದಿಸೆಯಲ್ಲಿ ಬರುವ 2020 ರೊಳಗೆ ರಾಜ್ಯಕ್ಕೆ ಹೊಸ ಪ್ರವಾಸೋದ್ಯಮ ನೀತಿ ರೂಪಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ರಾಜ್ಯ ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತದೊಂದಿಗೆ ತಮ್ಮ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ನಾಲ್ಕು ವಿಭಾಗಗಳಲ್ಲಿ ಪ್ರವಾಸೋದ್ಯಮ ನೀತಿ: ರಾಜ್ಯದಲ್ಲಿ 3 ವಿಶ್ವ ಪರಂಪಾರಿಕ ತಾಣಗಳಿವೆ. 5 ರಾಷ್ಟ್ರೀಯ ಉದ್ಯಾನವನ, 30 ವ್ಯನ್ಯಜೀವಿ ತಾಣಗಳು, 40 ವಾಟರ್‌ ಫಾಲ್ಸ್‌, 17 ಗಿರಿಶ್ರೇಣಿಗಳು, ಪ್ರವಾಸೋದ್ಯಮ ಅಭಿವೃದ್ಧಿಗೆ ರಾಜ್ಯದಲ್ಲಿ ವಿಪುಲವಾದ ಅವಕಾಶಗಳಿವೆ. ಪ್ರಮುಖವಾಗಿ ಹೆರಿಟೇಜ್‌, ಕೋಸ್ಟಲ್‌, ಟೆಂಪಲ್‌ ಹಾಗೂ ಗ್ರಾಮೀಣ ಅನುಭವ ಪ್ರವಾಸ ಸೇರಿ ನಾಲ್ಕು ವಿಭಾಗಗಳಲ್ಲಿ ಪ್ರವಾಸೋದ್ಯಮ ನೀತಿ ರೂಪಿಸಲು ನಿರ್ಧರಿಸಲಾಗಿದೆ ಎಂದರು.

ಶೇ.62 ರಷ್ಟು ಹುದ್ದೆಗಳು ಖಾಲಿ: ಇಲಾಖೆಯಲ್ಲಿ ಶೇ.81 ರಷ್ಟು ಹುದ್ದೆಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಶೇ.62 ರಷ್ಟು ಹುದ್ದೆಗಳು ಖಾಲಿ ಇದ್ದು, ಹಂತ ಹಂತವಾಗಿ ಭರ್ತಿ ಮಾಡಲಾಗುವುದು ಎಂದರು.

ಯಾವ ರಾಜ್ಯಕ್ಕೂ ಪರಿಹಾರ ಘೋಷಿಸಿಲ್ಲ: ರಾಷ್ಟ್ರದಲ್ಲಿ 11 ರಾಜ್ಯಗಳಲ್ಲಿ ನೆರೆ ಹಾವಳಿ ಸಂಭವಿಸಿದೆ. ಯಾವ ರಾಜ್ಯಕ್ಕೂ ಕೇಂದ್ರ ಇದುವರೆಗೂ ಪರಿಹಾರ ಘೋಷಿಸಿಲ್ಲ. ರಾಜ್ಯದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕಾರ ಮಾಡಿಲ್ಲ. ಕೆಲವೊಂದು ಸ್ಪಷ್ಟನೆ ಕೇಳಿದೆ. ಆದರೆ ಕೆಲವರು ತಪ್ಪು ಮಾಹಿತಿ ಹರಡಿಸುತ್ತಿದ್ದಾರೆ ಎಂದರು.

ಚುನಾವಣೆಯಲ್ಲಿ ಪ್ರಕಾಶ್‌ ರೈಗೆ ಉಗಿದಿದ್ದಾರೆ: ಕೇಂದ್ರ ಸರ್ಕಾರ ನೆರೆ ಸಂತ್ರಸ್ತರಿಗೆ ಪರಿಹಾರ ಕೊಡದಿದ್ದಕ್ಕೆ ಜನ ಬಿಜೆಪಿ ಸಂಸದರನ್ನು ಉಗಿಯುತ್ತಿದ್ದಾರೆಂಬ ನಟ ಪ್ರಕಾಶ್‌ ರೈ ಟ್ವೀಟ್‌ ಮಾಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಸಿ.ಟಿ.ರವಿ, ಈಗಾಗಲೇ ಪ್ರಕಾಶ್‌ ರೈರನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರದಲ್ಲಿ ಸ್ಪರ್ಧಿಸಿದ್ದ ವೇಳೆ ಜನ ಚೆನ್ನಾಗಿ ಉಗಿದು ಕಳಿಸಿದ್ದಾರೆ ಎಂದು ಲೇವಡಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರ ಪರಿಹಾರ ಕೊಡಲಿ ಎಂದು ಹೇಳಿಕೆ ಹಾಗೂ ಸಂಸದರ ಕಾರ್ಯವೈಖರಿ ಬಗ್ಗೆ ಹಿರಿಯ ನಾಯಕ ಬಸವರಾಜ ಪಾಟೀಲ್‌ ಯತ್ನಾಳ್‌ಗೆ ಪಕ್ಷದ ಕೇಂದ್ರ ಸಮಿತಿ ಶೋಕಾಸ್‌ ನೋಟಿಸ್‌ ನೀಡಿರುವ ಕುರಿತು ಪತ್ರಿಕ್ರಿಯಿಸಿ, ಪಕ್ಷದ ನಾಯಕರಾಗಿ ತಮ್ಮ ಅಭಿಪ್ರಾಯವನ್ನು ಪಕ್ಷದ ವೇದಿಕೆಯಲ್ಲಿ ಹಂಚಿಕೊಳ್ಳಬೇಕು. ಪಕ್ಷಕ್ಕೆ ಮುಜುಗರ ಅಥವಾ ಅಗೌರವ ತರುವ ರೀತಿಯಲ್ಲಿ ಯಾರು ಕೂಡ ನಡೆದುಕೊಳ್ಳಬಾರದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next