ಬೆಂಗಳೂರು: ಬೆಂಗಳೂರಿನಲ್ಲಿ ಸೆಪ್ಟೆಂಬರ್ 5 ರಿಂದ 11 ರವರೆಗೂ ಫಿಬಾ ಅಂಡರ್ 18 ಮಹಿಳಾ ಏಷ್ಯನ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್ ಶಿಪ್ ನಡೆಯಲಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ಹೇಳಿದರು.
ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣ ಹಾಗೂ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಬ್ಯಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್ ನಡೆಯಲಿದೆ. ಭಾರತ, ಜಪಾನ್, ಚೀನಾ, ಇಂಡೋನೇಷ್ಯಾ, ಮಲೇಷ್ಯಾ ಸೇರಿದಂತೆ ಒಟ್ಟು 16 ತಂಡಗಳು ಭಾಗಿಯಾಗಲಿವೆ. ಈ ಕ್ರೀಡಾಕೂಟದಲ್ಲಿ 16 ಅಂತರಾಷ್ಟ್ರೀಯ ತಂಡಗಳ 192 ಕ್ರೀಡಾಪಟುಗಳು, 96 ಅಧಿಕಾರಿಗಳು, 100 ಸ್ವಯಂಸೇವಕರು ಭಾಗವಹಿಸಲಿದ್ದಾರೆ. ಈ ಕ್ರೀಡಾಕೂಟದಲ್ಲಿ ವಿಜೇತರಾದ ಮೊದಲ 4 ತಂಡಗಳು 2023ರ ಜುಲೈನಲ್ಲಿ ಸ್ಪೈನ್‌ನಲ್ಲಿ ನಡೆಯಲಿರುವ ಅಂಡರ್- 19 ಮಹಿಳೆಯರ ಫಿಬಾ ವಿಶ್ವ ಕಪ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆಯಲಿದ್ದಾರೆ ಎಂದು ತಿಳಿಸಿದರು.
ಈ ಕ್ರೀಡಾಕೂಟಕ್ಕೆ ಫೆಡರೇಶನ್ ಆಫ್ ಬ್ಯಾಸ್ಕೆಟ್ ಬಾಲ್ ಅಸೋಸಿಯೇಶನ್ ಮಾರ್ಗಸೂಚಿ ಪ್ರಕಾರ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದ್ದು, ನಮ್ಮ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯೂ ಈ ಟೂರ್ನಿಗೆ ಅಗತ್ಯವಿರುವ ಎಲ್ಲಾ ಸಹಕಾರ ನೀಡುತ್ತಿದೆ. ಮುಕ್ತಾಯ ಸಮಾರಂಭ 11 ನೇ ತಾರೀಖಿನಂದು ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಗೌರವಾನ್ವಿತ ರಾಜ್ಯಪಾಲರು, ಸನ್ಮಾನ್ಯ ಮುಖ್ಯಮಂತ್ರಿಗಳು ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ. ಬೆಂಗಳೂರಿಗೆ ಈ ಕ್ರೀಡಾಕೂಟದ ಆತಿಥ್ಯವಹಿಸಲು ಅವಕಾಶ ಸಿಕ್ಕಿರುವುದು ನಮ್ಮೆಲ್ಲರಿಗೆ ಸಂತಸ ತಂದಿದೆ. ವಿಶ್ವದರ್ಜೆಯ ಯಾವುದೇ ಕ್ರೀಡಾಕೂಟವನ್ನು ಆಯೋಜಿಸಲು ನಾವು ಸಶಕ್ತರಾಗಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ಅತ್ಯಾಚಾರ ವಿರೋಧಿಸಿದ ಬ್ಯಾಸ್ಕೆಟ್‌ಬಾಲ್ ಆಟಗಾರ್ತಿ: 25 ಅಡಿ ಎತ್ತರದಿಂದ ತಳ್ಳಿದ ದುರುಳರು
Related Articles
ಇದೇ ವೇಳೆ ಇರಾನ್‌ನಲ್ಲಿ ನಡೆಯಲಿರುವ ಫಿಬಾ ಅಂಡರ್ 18 ಪುರುಷರ ಬ್ಯಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್‌ನಲ್ಲಿ ಪಾಲ್ಗೊಳ್ಳುವ ಭಾರತ ತಂಡದ ಆಟಗಾರರಿಗೆ ಕಿಟ್‌ಗಳನ್ನು ನೀಡಿ ಶುಭ ಹಾರೈಸಿದರು.
ಇಂಡಿಯನ್ ಬ್ಯಾಸ್ಕೆಟ್ ಬಾಲ್ ಫೆಡರೇಷನ್ ಅಧ್ಯಕ್ಷ ಕೆ ಗೋವಿಂದರಾಜು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಗೋಪಾಲಕೃಷ್ಣ ಉಪಸ್ಥಿತರಿದ್ದರು.