ಶಿವಮೊಗ್ಗ: ಪಿಎಫ್‌ಐ, ಎಸ್ ಡಿಪಿಐ ಸಂಘಟನೆ ನಿಷೇಧ ಮಾಡುವ ದಿಕ್ಕಿನಲ್ಲಿ ಎಲ್ಲಾ ರೀತಿಯ ಪ್ರಯತ್ನ ನಡೆದಿದೆ. ಅದಕ್ಕೆ ಬೇಕಾದ ಪೂರ್ವಭಾವಿ ತಯಾರಿ, ದಾಖಲೆಗಳ ಸಂಗ್ರಹ ಆಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ| ಅಶ್ವತ್ಥ್ ನಾರಾಯಣ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಫ್‌ಐ, ಎಸ್‌ಡಿಪಿಐ ಸಂಸ್ಥೆಗಳು ಸಮಾಜದಲ್ಲಿ ಸಾಕಷ್ಟು ಗೊಂದಲ ನಿರ್ಮಾಣ ಮಾಡ್ತಿವೆ. ಈ ಬಗ್ಗೆ ಮೇಲ್ನೋಟಕ್ಕೆ ಹೇಳಿಕೆ ಕೊಡೋದಲ್ಲ. ಕಾಂಗ್ರೆಸ್ ಸರಕಾರವಿದ್ದಾಗ ಅವರ ಬದ್ಧತೆ ಏನಿತ್ತು. ಅಧಿಕಾರದಲ್ಲಿ ಇದ್ದಾಗ ಅವರ ಮೇಲಿದ್ದ ಕೇಸ್ ಹಿಂಪಡೆದು ಈಗ ನಿಷೇಧ ಮಾಡಿ ಎಂದು ಒತ್ತಾಯಿಸುತ್ತಿದ್ದಾರೆ. ಕಾಂಗ್ರೆಸ್‌ನವರು ಯಾವ ಲಾಜಿಕ್‌ನಲ್ಲಿ ಮಾತನಾಡ್ತಿದ್ದಾರೆ ಗೊತ್ತಾಗುತ್ತಿಲ್ಲ ಎಂದರು.
ವಿಎಚ್‌ಪಿ, ಆರ್‌ಎಸ್‌ಎಸ್ ಸಮಾಜದ ಅಭಿವೃದ್ಧಿಗಾಗಿ ಒಳ್ಳೆಯ ಕೆಲಸ ಮಾಡುತ್ತಿವೆ. ಕಾಂಗ್ರೆಸ್‌ನವರು ಇಂತಹ ಸಂಸ್ಥೆಯನ್ನು ಪಿಎಫ್ ಐ, ಎಸ್ ಡಿಪಿಐ ಸಂಸ್ಥೆಗೆ ಹೋಲಿಸುತ್ತಾರೆ. ಇದರಿಂದ ಅವರ ಮನಸ್ಥಿತಿ ಹೇಗಿದೆ ಎಂಬುದು ಗೊತ್ತಾಗಲಿದೆ. ಗೃಹ ಸಚಿವರಾಗಿದ್ದ ಎಂ.ಬಿ.ಪಾಟೀಲ್ ಅವರಿಗೆ ಆರ್ ಎಸ್‌ಎಸ್ ಸಂಘಟನೆ ಬಗ್ಗೆ ಸರಿಯಾದ ಅರಿವಿಲ್ಲ ಎಂದರು.
ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದಲ್ಲಿ ತುಂಬಿ ತುಳುಕುತ್ತಿರುವ ಪಕ್ಷ. ಆ ಪಕ್ಷದ ಅಧ್ಯಕ್ಷ ಡಿಕೆಶಿ, ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದವರು. ಅವರಿಂದ ನೈತಿಕ ಪಾಠ ಕಲಿಯುವ ಅಗತ್ಯವಿಲ್ಲ. ನಾನು ಸಮಾಜಕ್ಕೋಸ್ಕರ ಕೊಡುಗೆ ಕೊಡಬೇಕು ಅಂತಾ ರಾಜಕಾರಣಕ್ಕೆ ಬಂದಿರುವವನು. ನನ್ನ ಮೇಲೆ ಒಂದೇ ಒಂದು ಭ್ರಷ್ಟಾಚಾರ ಇದ್ದರೆ ಮುಂದೆ ಬರಲಿ. ಈ ಮೊದಲು ಮಾರ್ಕ್ಸ್ ಕಾರ್ಡ್ ಪಡೆಯಲು ಹಣ ಕೊಡಬೇಕಿತ್ತು. ಆದರೆ ನಾವು ಬಂದ ಮೇಲೆ ಅಂತಹ ವ್ಯವಸ್ಥೆ ಹೋಗಲಾಡಿಸಿದ್ದೇವೆ. ಇತಿಹಾಸವೇ ನನ್ನ ಸವಾಲ್, ದೇಶದಲ್ಲಿ ನನ್ನ ಇಲಾಖೆಯಲ್ಲಿ ನಾನು ಮಾಡಿದ ರೀತಿ ಯಾರಾದ್ರೂ ಕೆಲಸ ಮಾಡಿದ್ದರೆ ಅವರು ಹೇಳಿದಂತೆ ರೀತಿ ಕೇಳುವೆ ಎಂದು ಸವಾಲು ಹಾಕಿದರು.
ಪಠ್ಯದಲ್ಲಿ ರಾಮಾಯಣ, ಮಹಾಭಾರತ ಸೇರಿಸುವ ಬಗ್ಗೆ ಚಿಂತನೆ ನಡೆದಿದೆ. ಮೌಲ್ಯಾಧಾರಿತ ಶಿಕ್ಷಣ ಕೊಡಲಿಕ್ಕೆ ಚರ್ಚೆ ನಡೆಯುತ್ತಿದೆ. ಸಾಧ್ಯವಾದರೆ ಈ ವರ್ಷದಿಂದಲೇ ಜಾರಿಗೊಳಿಸುತ್ತೇವೆ ಎಂದರು.