ಬೆಳಗಾವಿ: ಕೇಂದ್ರ ಗ್ರಹ ಸಚಿವ, ಬಿಜೆಪಿ ಚಾಣಕ್ಯ ಅಮಿತ್ ಶಾ ಆಗಮನಕ್ಕಾಗಿ ಬೆಳಗಾವಿ ನಗರದಲ್ಲಿ ಬಿಜೆಪಿ ಮುಖಂಡರು ಸಿದ್ಧತೆಯಲ್ಲಿ ತೊಡಗಿದ್ದು, ದಿನದ 24 ಗಂಟೆಯೂ ಶ್ರಮವಹಿಸಿ ಹೆಚ್ಚೆಚ್ಚು ಸಂಖ್ಯೆಯ ಜನರನ್ನು ಸೇರಿಸಲು ತಯಾರಿ ನಡೆಸಿದ್ದಾರೆ. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜ. 17ರಂದು ನಡೆಯಲಿರುವ ಬಿಜೆಪಿ ಜನಸೇವಕ ಕಾರ್ಯಕ್ರಮದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸಲು ಬಿಜೆಪಿ ತಯಾರಿ ನಡೆಸಿದೆ. ಸುಮಾರು 2.50 ಲಕ್ಷ ಕಾರ್ಯಕರ್ತರರನ್ನು ಸೇರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.
ಅಚ್ಚುಕಟ್ಟು ಸಮಾವೇಶಕ್ಕೆ ಸಿದ್ಧತೆ: ಜನಸೇವಕ ಸಮಾವೇಶದ ಸಂಪೂರ್ಣ ಉಸ್ತುವಾರಿ ವಹಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಬೆಳಗಾವಿಯಲ್ಲಿಯೇ ಠಿಕಾಣಿ ಹೂಡಿದ್ದಾರೆ. ಲಕ್ಷ ಲಕ್ಷ ಜನರನ್ನು ಸೇರಿಸಲು ಜಾರಕಿಹೊಳಿ ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದಾರೆ. ಎಲ್ಲ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದಾರೆ. ಸಮಾವೇಶಕ್ಕೆ ಅಗತ್ಯ ಇರುವ ಎಲ್ಲ ಸಿದ್ಧತೆಗಳು ಸಚಿವ ಜಾರಕಿಹೊಳಿ ಅವರ ನೇತೃತ್ವದಲ್ಲಿಯೇ ನಡೆದಿದ್ದು, ಯಾವುದೇ ಸಮಸ್ಯೆ ಆಗದಂತೆ ಅಚ್ಚುಕಟ್ಟಾಗಿ ಸಮಾವೇಶ ನಡೆಸಲು ಶ್ರಮಿಸುತ್ತಿದ್ದಾರೆ.
ದಿನಕ್ಕೆ ನಾಲ್ಕೈದು ಸಭೆಗಳನ್ನು ನಡೆಸಿ ಎಲ್ಲಿ, ಏನು ಆಗಬೇಕು ಎಂಬುದರ ಬಗ್ಗೆ ಮುಖಂಡರೊಂದಿಗೆ ಚರ್ಚಿಸುತ್ತಿದ್ದಾರೆ. ಊಟ, ವಾಹನದ ವ್ಯವಸ್ಥೆ, ಬೇರೆ ಕಡೆಯಿಂದ ಬರುವವರೆಗೆ ವಸತಿ ವ್ಯವಸ್ಥೆ ಸೇರಿದಂತೆ ಎಲ್ಲ ಸಿದ್ಧತೆಯಲ್ಲಿ ತೊಡಗಿದ್ದಾರೆ. ಇಡೀ ನಗರವನ್ನು ಬಿಜೆಪಿಮಯಗೊಳಿಸಲು ಬಿಜೆಪಿ ಮುಖಂಡರು ಬ್ಯಾನರ್, ಫ್ಲೆಕ್ಸ್, ಬಾವುಟಗಳನ್ನು ಹಚ್ಚಲು ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಪುಣ್ಯಸ್ನಾನ ನಿಷೇಧ ನಡುವೆಯೇ ಭಕ್ತರ ದಂಡು
ಮುಖ್ಯ ವೇದಿಕೆ ಸಿದ್ಧ: ಜಿಲ್ಲಾ ಕ್ರೀಡಾಂಗಣದಲ್ಲಿ ವೇದಿಕೆ ಸಿದ್ಧಗೊಂಡಿದ್ದು, ಜಿಲ್ಲೆಯ ಬಿಜೆಪಿ ನಾಯಕರು ಆಗಾಗ ಭೇಟಿ ನೀಡುತ್ತಿದ್ದಾರೆ. ಕೇಂದ್ರದಿಂದ ಬಂದಿರುವ ತಂಡದ ಸೂಚನೆಯಂತೆ ವೇದಿಕೆ ಮಾಡಿಕೊಳ್ಳಲಾಗುತ್ತಿದೆ. ಮುಖ್ಯ ವೇದಿಕೆ ಹಾಗೂ ಅದರ ಪಕ್ಕದಲ್ಲಿ ವಿಐಪಿಗಳಿಗಾಗಿ ಮತ್ತೂಂದು ವೇದಿಕೆ ಮಾಡಿಕೊಳ್ಳಲಾಗಿದೆ. ಇದರಲ್ಲಿ ಶಾಸಕರು, ಮಾಜಿ ಶಾಸಕರು, ರಾಜ್ಯ ನಾಯಕರು ಸೇರಿದಂತೆ ಗಣ್ಯರಿಗೆ ಅವಕಾಶ ಇದೆ. ಒಟ್ಟು ನಾಲ್ಕು ಗೇಟ್‌ಗಳನ್ನು ಮಾಡಲಾಗಿದೆ. ಮುಖ್ಯ ವೇದಿಕೆಗೆ ಬರುವ ಗೇಟ್‌ನಲ್ಲಿ ಅಮಿತ್ ಶಾ ಹಾಗೂ ತಂಡದವರಿಗೆ ಅವಕಾಶ ಇದೆ. ಎರಡನೇ ಗೇಟ್‌ನಲ್ಲಿ ವಿಐಪಿ, ಮೂರು ಮತ್ತು ನಾಲ್ಕನೇ ಗೇಟ್‌ನಲ್ಲಿ ಸಾರ್ವಜನಿಕರಿಗೆ ಬರಲು ಅವಕಾಶವಿದೆ. ಮುಖಂಡರು ಹಾಗೂ ಸಾರ್ವಜನಿಕರು ಬರುವ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತಿದೆ. ನಗರದಲ್ಲಿ ಕೆಲವೊಂದು ಕಡೆ ಮಾರ್ಗ ಬದಲಾವಣೆ ಮಾಡುವ ಸಾಧ್ಯತೆಯೂ ಇದೆ.
ಎಲ್ಲರಿಗೂ ಊಟದ ವ್ಯವಸ್ಥೆ: 2.50 ಲಕ್ಷ ಜನರನ್ನು ಸೇರಿಸಲು ಉದ್ದೇಶಿಸಿರುವ ಬಿಜೆಪಿ, ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿದೆ. ಜಿಲ್ಲಾ ಕ್ರೀಡಾಂಗಣ ಎದುರಿನ ಕೆಪಿಟಿಸಿಎಲ್ ಆವರಣದಲ್ಲಿ ಊಟ ಇರಲಿದೆ. ಅನ್ನ, ಸಾಂಬಾರು, ಶಿರಾ ಹಾಗೂ ಭಾಜಿ ವ್ಯವಸ್ಥೆ ಇದೆ. 250 ಮಿ.ಲೀ.ನ ಕುಡಿಯುವ ನೀರಿನ 2.50 ಲಕ್ಷ ಪಾಕೆಟ್‌ಗಳನ್ನು ಮಾಡಲಾಗಿದೆ. ಬಿಜೆಪಿಯ 500ಕ್ಕೂ ಹೆಚ್ಚು ಕಾರ್ಯಕರ್ತರನ್ನು ನಿರ್ವಹಣೆಗೆ ಸ್ವಯಂ ಸೇವಕರನ್ನಾಗಿ ನೇಮಿಸಲಾಗಿದೆ. ಬೆಳಗಾವಿ ಹಾಗೂ ಚಿಕ್ಕೋಡಿ ಭಾಗದ ಗ್ರಾಪಂನಲ್ಲಿ ಗೆಲುವು ಸಾಧಿಸಿದ ಸುಮಾರು 6 ಸಾವಿರ ಸದಸ್ಯರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದೆ. ಮುಖ್ಯ ವೇದಿಕೆಯ ಎದುರಿನ ಮೊದಲ ಆವರಣ ಬ್ಲಾಕ್ ಸಂಪೂರ್ಣ ಗ್ರಾಪಂ ಸದಸ್ಯರಿಗಾಗಿಯೇ ಮೀಸಲಿಡಲಾಗಿದೆ. ಸದಸ್ಯರಿಗೆ ಪೇಟಾ ವ್ಯವಸ್ಥೆ ಮಾಡುವ ಬಗ್ಗೆ ಯೋಚಿಸಲಾಗುತ್ತಿದೆ.
ಕೇಂದ್ರ ಗೃಹ ಸಚಿವ, ಬಿಜೆಪಿ ಚಾಣಕ್ಯ ಅಮಿತ್ ಶಾ ಅವರ ಆಗಮನಕ್ಕೆ ಬೆಳಗಾವಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸಮಾವೇಶದಲ್ಲಿ ಸೇರಿಸಿ ಶಕ್ತಿ ಪ್ರದರ್ಶನ ಮಾಡಲಾಗುವುದು. ಜಿಲ್ಲೆಯ ಮೂಲೆ ಮೂಲೆಯಿಂದ ಜನರು ಸಮಾವೇಶಕ್ಕೆ ಆಗಮಿಸಲಿದ್ದಾರೆ.
ರಮೇಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವರು
ಭೈರೋಬಾ ಕಾಂಬಳೆ