Advertisement

ರಾಸಾಯನಿಕ ಬಳಸದೆ ಶುದ್ಧ ಅಡುಗೆ ಎಣ್ಣೆ ತಯಾರಿಕೆ; ಆದಿವಾಸಿ ಮಹಿಳೆಯರ ಸಾಧನೆ

05:36 PM Nov 25, 2022 | Team Udayavani |

ಎಚ್‌.ಡಿ.ಕೋಟೆ: ತಾಲೂಕಿನ ಮಂಜೇಗೌಡನಹಳ್ಳಿ ಹಾಡಿಯಲ್ಲಿ ರಾಸಾಯನಿಕ ಬಳಕೆ ಮಾಡದೆ ಶುದ್ಧ ಅಡುಗೆ ಎಣ್ಣೆ ತಯಾರಿಕೆ ಘಟಕ ಆರಂಭಿಸಿದ ಆದಿವಾಸಿ ಮಹಿಳೆ ಯರು, ಶುದ್ಧ ತಾಜಾ ಅಡುಗೆ ಎಣ್ಣೆ ತಯಾರಿಸಿ ಮಾರಾಟ ಮಾಡುವ ಮೂಲಕ ತಾಲೂಕಿನಲ್ಲಿ ಹೆಸರಾಗಿದ್ದಾರೆ.

Advertisement

ತಾಲೂಕಿನ ಅಂತರಸಂತೆ ಹೋಬಳಿಯ ಮಂಚೇಗೌಡನಹಳ್ಳಿ ಹಾಡಿ ಆದಿವಾಸಿಗರೇ ವಾಸವಾಗಿರುವ ಹಾಡಿ. ಇಲ್ಲಿ ಮಹಿಳೆಯರು ಉದ್ಯೋಗ ಇಲ್ಲದೆ ಜೀವನೋಪಾಯಕ್ಕಾಗಿ ಕೂಲಿ ಕೆಲಸಕ್ಕಾಗಿ ನೆರೆಯ ಕೊಡಗು, ಕೇರಳ ರಾಜ್ಯಗಳಿಗೆ ಗುಳೆ ಹೋಗಬೇಕಾದ ಅನಿವಾರ್ಯತೆ ಇತ್ತು. ಜೀವನೋಪಾಯಕ್ಕಾಗಿ ಗುಳೆ ಹೋದರೆ ಮಕ್ಕಳು ಕೂಡ ಶಿಕ್ಷಣದಿಂದ ವಂಚಿತರಾಗ ಬೇಕಾದ ಸ್ಥಿತಿ ತಲೆದೂರಿತ್ತು.

ಆದಿವಾಸಿಗರ ಭವಣೆ ಅರಿತ ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ ಸಂಸ್ಥೆ ಹಾಡಿ ಮಹಿಳೆಯರೊಂದಿಗೆ ಚರ್ಚಿಸಿ ಹಾಡಿಯಲ್ಲಿಯೇ ಅಡುಗೆ ಎಣ್ಣೆ ತಯಾರಿಕೆ ಘಟಕ ಆರಂಭಿಸಿಕೊಟ್ಟರೆ ಅಡುಗೆ ಎಣ್ಣೆ ತಯಾರಿಕೆ ಕೆಲಸ ಮಾಡುವ ಹಂಬಲ ಇರುವುದನ್ನು ಖಚಿತ ಪಡಿಸಿಕೊಂಡಿದ್ದಾರೆ. ಸ್ವಾಮಿ ವಿವೇಕಾನಂದ ಸಂಸ್ಥೆ ಸಹಕಾರ: ಸ್ವಾಮಿ ವಿವೇಕಾನಂದ ಸಂಸ್ಥೆ ಸ್ವಂತ ಬಂಡವಾಳ ಹೂಡಿ ಅಡುಗೆ ಎಣ್ಣೆ ತಯಾರಿಕಾ ಘಟಕ ಆರಂಭಿಸಿಯೇ ಬಿಟ್ಟರು.

ಅಡುಗೆ ಎಣ್ಣೆ ತಯಾರಿಕೆ ಘಟಕದಲ್ಲಿ 9 ಮಂದಿ ಮಹಿಳೆಯರಿಗೆ ಉದ್ಯೋವನ್ನೂ ನೀಡಿದ್ದಾರೆ. ಅಡುಗೆ ಎಣ್ಣೆ ತಯಾರಿಕೆಗೆ ಬೇಕಾದ ಕಚ್ಚಾ ಸಾಮಗ್ರಿಗಳನ್ನು ಸಂಸ್ಥೆಯೇ ಭರಿಸಿಕೊಡುತ್ತಿದೆ. ಆದಿವಾಸಿ ಮಹಿಳೆಯರು ಶ್ರಮದ ಮೂಲಕ ಶುದ್ಧ ಅಡುಗೆ ಎಣ್ಣೆ ತಯಾರಿ ಮಾಡುತ್ತಿದ್ದಾರೆ. ಅವರಿಗೆ ದಿನದ ವೇತನ ನೀಡುವ ಸಂಸ್ಥೆ ಘಟಕದಿಂದ ಗಳಿಸುವ ಆದಾಯ ಮತ್ತು ನಷ್ಟದ ಹೊಣೆ ತಾನೇ ಹೊರಲಿದೆ.

ಮಾರಾಟದ ಅಂಗಡಿ ಆರಂಭ: ಕಲಬೆರಕೆ ಅಡುಗೆ ಎಣ್ಣೆ ಸೇವಿಸಿ ಆರೋಗ್ಯ ಕೆಡಿಸಿಕೊಂಡು ಆಸ್ಪತ್ರೆ ಸೇರಿ ಹಣ ವ್ಯಯ ಮಾಡಿಕೊಳ್ಳುವ ಬದಲು ಕೊಂಚ ದುಬಾರಿ ಬೆಲೆ ನೀಡಿದರೂ ಗುಣಮಟ್ಟದ ರಾಸಾಯನಿಕ ಬಳಕೆ ಮಾಡದೇ ಅಡುಗೆ ಎಣ್ಣೆಗೆ ಜನರು ದಿನದಿಂದ ದಿನಕ್ಕೆ ಮುಗಿ ಬೀಳುತ್ತಿದ್ದಾರೆ. ಸದ್ಯದಲ್ಲಿ ಎಚ್‌.ಡಿ.ಕೋಟೆ ಪಟ್ಟಣದ ತಾಪಂ ಬಳಿಯಲ್ಲಿ ಶುದ್ಧ ಅಡುಗೆ ಎಣ್ಣೆ ಮಾರಾಟದ ಅಂಗಡಿ ಆರಂಭಿಸಿದ್ದು, ಮಂಚೇಗೌಡನಹಳ್ಳಿ ಅಡುಗೆ ಎಣ್ಣೆ ತಯಾರಿಕ ಘಟಕದ ಎಣ್ಣೆ ಲಭ್ಯವಿದ್ದು, ಅಗತ್ಯ ಇರುವವರು ಅಲ್ಲೇ ಖರೀದಿಸುವಂತೆ ಆದಿವಾಸಿ ಮಹಿಳೆಯರು ಮನವಿ ಮಾಡಿಕೊಂಡಿದ್ದಾರೆ.

Advertisement

ಎಣ್ಣೆಗೆ ವಿಶೇಷವಾದ ಬೇಡಿಕೆ
ಘಟಕದಲ್ಲಿ ಎಳ್ಳೆಣ್ಣೆ 350 ರೂ., ಕಡಲೆಕಾಯಿ ಎಣ್ಣೆ 350 ರೂ., ಸೂರ್ಯಕಾಂತಿ ಎಣ್ಣೆ 330 ರೂ. ಹಾಗೂ ಕೊಬ್ಬರಿ ಎಣ್ಣೆ 340 ರೂ. ತಯಾರಿ ಮಾಡಲಾಗುತ್ತಿದೆ. ಕಳೆದ ಸುಮಾರು 6 ತಿಂಗಳಿಂದ ಆರಂಭಗೊಂಡಿರುವ ಶುದ್ಧ ಅಡುಗೆ ತಯಾರಿ ಎಣ್ಣೆ ಘಟಕದ ಅಡುಗೆ ಎಣ್ಣೆಗೆ ವಿಶೇಷವಾದ ಬೇಡಿಕೆ ಇದೆ. ಯಾವುದೇ ರಾಸಾಯನಿಕ ಬಳಕೆ ಮಾಡದೇ ಅಡುಗೆ ಎಣ್ಣೆ ತಯಾರಿಸುತ್ತಿರುವುದು ಇಲ್ಲಿನ ವಿಶೇಷ. ಈಗಾಗಲೇ ತಾಲೂಕಿನ ವಿವಿಧ ಭಾಗಗಳಿಂದ ಆರೋಗ್ಯದ ಹಿತದೃಷ್ಟಿಯಿಂದ ಅಡುಗೆ ಎಣ್ಣೆ ಖರೀದಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ಎಲ್ಲಿ ನೋಡಿದರಲ್ಲಿ ರಾಸಾಯನಿಕ ಮಿಶ್ರಿತ ಆಹಾರ ಮಾರಾಟ ಮತ್ತು ಸೇವನೆಯಾಗುತ್ತಿದೆ. ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದ್ದು ಸಾವು ನೋವಿನ ಪ್ರಮಾಣ ಏರಿಕೆ ಜೊತೆಗೆ ಹೃದಯಾಘಾತ, ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚಾಗುವ ಮೂಲಕ ಆರೋಗ್ಯ ಹಾಳಾಗುತ್ತಿದೆ. ಆರೋಗ್ಯದ ದೃಷ್ಟಿಯಿಂದ ರಾಸಾಯನಿಕ ಬಳಸದೇ ಅಡುಗೆ ಎಣ್ಣೆ ತಯಾರಿ ಮಾಡಿ ಮಾರಾಟ ಮಾಡಲಾಗುತ್ತಿದೆ.
●ಗುಲಾಬಿ, ಅಡುಗೆ ಎಣ್ಣೆ ಘಟಕದ ಮಹಿಳೆ

ಆಧುನಿಕ ಯುಗದಲ್ಲಿ ಎಲ್ಲೆಲ್ಲೂ ರಾಸಾಯನಿಕ ಬಳಕೆಯ ವಿಷಕಾರಿ ಆಹಾರ ಸೇವೆನೆ ಕಂಡೂ ಕಾಣದಂತೆ ನಡೆಯುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಆದಿವಾಸಿಗರಿರುವ ಹಾಡಿಯಲ್ಲಿ ಜನರ ಆರೋಗ್ಯದ ಸುಧಾರಣೆ ದೃಷ್ಟಿಯಿಂದ ಆರಂಭಗೊಂಡಿರುವ ಅಡುಗೆ ತಯಾರಿಕೆ ಘಟಕದಿಂದ ಗುಣಮಟ್ಟದ ಅಡುಗೆ ಎಣ್ಣೆ ತಾಲೂಕಿನ ಜನರಿಗಷ್ಟೇ ಅಲ್ಲದೆ ಜಿಲ್ಲೆ ರಾಜ್ಯಕ್ಕೆ ಹಂತಹಂತವಾಗಿ ವಿಸ್ತರಿಸಲಿ.
● ಸೆಂದಿಲ್‌ ಕುಮಾರ್‌,
ಹಿರಿಯ ವ್ಯವಸ್ಥಾಪಕ, ಕಬಿನಿ

ಎಚ್‌.ಬಿ.ಬಸವರಾಜು

Advertisement

Udayavani is now on Telegram. Click here to join our channel and stay updated with the latest news.

Next