ಪೂರ್ವ ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆಯ ಬಳಿ ಚೀನ ಹಾಗೂ ಭಾರತದ ನಡುವೆ ಸೃಷ್ಟಿಯಾಗಿರುವ ಬಿಕ್ಕಟ್ಟು ನಿಲ್ಲುವ ಲಕ್ಷಣ ತೋರಿಸುತ್ತಿಲ್ಲ. ಇದಕ್ಕೆ ಪೂರ್ಣವಾಗಿ ಚೀನದ ಉದ್ಧಟತನವೇ ಕಾರಣ ಎನ್ನುವುದು ಸ್ಪಷ್ಟ. ಚೀನದ ದುಬುìದ್ಧಿಯ ಅರಿವಿರುವ ಭಾರತೀಯ ಸೇನೆಯು ಕಳೆದ ಕೆಲವು ತಿಂಗಳಿಂದಲೂ ಗಡಿ ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಯುದ್ಧ ವಿಮಾನಗಳು, ಶಸ್ತ್ರಾಸ್ತ್ರಗಳು ಹಾಗೂ ಸೈನಿಕರನ್ನು ನಿಯೋಜಿಸಿದೆ. ಅಲ್ಲದೇ ಹಿಮ ವರ್ಷದ ಈ ಹೊತ್ತಲ್ಲಿ ಸೈನಿಕರಿಗೆ ಚಳಿಯಿಂದ ಸುರಕ್ಷತೆ ನೀಡುವಲ್ಲೂ ಮುತುವರ್ಜಿ ವಹಿಸಿದೆ.
ಇವೆಲ್ಲದರ ನಡುವೆಯೇ ಈಗ ಭಾರತೀಯ ಸೇನೆಯು 15 ದಿನಗಳ ಯುದ್ಧಕ್ಕೆ ಸಾಲುವಷ್ಟು ಶಸ್ತ್ರಾಸ್ತ್ರ, ಯುದ್ದೋಪಕರಣಗಳ ಸಂಗ್ರಹ ಆರಂಭಿಸಿದೆ. ಯುದೊœàಪಕರಣಗಳ ಬಿಡಿ ಭಾಗಗಳು, ಶಸ್ತ್ರಾಸ್ತ್ರ, ಕ್ಷಿಪಣಿ, ಟ್ಯಾಂಕರ್‌ಗಳಿಗೆ ಅಗತ್ಯವಾದ ಮದ್ದುಗುಂಡು ಹಾಗೂ ಫಿರಂಗಿಗಳ ಖರೀದಿಗೆ ಮುಂದಾಗಿದೆ ಭದ್ರತಾ ಪಡೆ. ಸೇನೆಗೆ ಮೀಸಲಾಗಿರುವ ತುರ್ತು ಆರ್ಥಿಕ ನಿಧಿ ಅಡಿಯಲ್ಲಿ ಹೆಚ್ಚುವರಿ ಶಸ್ತ್ರಾಸ್ತ್ರಗಳ ಖರೀದಿಗೆ 50 ಸಾವಿರ ಕೋಟಿ ರೂಪಾಯಿ ವೆಚ್ಚ ಆಗಲಿದೆ ಎಂದು ವರದಿಯಾಗಿದೆ.
ಚೀನಕ್ಕೆ ಭಾರತದ ಈ ನಡೆ ನಿಶ್ಚಿತವಾಗಿಯೂ ಕಠಿನ ಸಂದೇಶ ಕಳುಹಿಸಲಿದೆ. ಎಷ್ಟೇ ಮಾತುಕತೆಯಾಡಿದರೂ ಚೀನದ ವರ್ತನೆ ಬದಲಾಗದು ಎನ್ನುವುದು ರಕ್ಷಣ ಇಲಾಖೆಗೆ ಸ್ಪಷ್ಟವಾಗಿದೆ. ಏಕೆಂದರೆ, ಎರಡೂ ದೇಶಗಳ ನಡುವೆ 8 ಬಾರಿ ಮಿಲಿಟರಿ ಉನ್ನತ ಅಧಿಕಾರಿಗಳ ನಡುವೆ ಹಾಗೂ ರಾಜಕೀಯ ಸ್ತರದಲ್ಲಿ ಚರ್ಚೆಗಳು ನಡೆದಿವೆ. ವಾಸ್ತವಿಕ ನಿಯಂತ್ರಣ ರೇಖೆಯಿಂದ ಸೈನ್ಯವನ್ನು ಹಿಂಪಡೆಯು ವಿಚಾರದಲ್ಲಿ ಈ ಹಿಂದಿನ ಮಾತುಕತೆಯಲ್ಲೂ ಚೀನ ಭರವಸೆ ನೀಡಿದೆಯಾದರೂ ಅದರ ಮಾತನ್ನು ನಂಬಲಾಗದು.
ಈಗೆಂದಷ್ಟೇ ಅಲ್ಲ, ಗಡಿ ಭಾಗದಲ್ಲಿ ಶಾಂತಿ ಸ್ಥಾಪನೆಗಾಗಿ ಎರಡೂ ರಾಷ್ಟ್ರಗಳ ನಡುವೆ ಇಲ್ಲಿಯವರೆಗೂ ಆಗಿರುವ ಒಪ್ಪಂದಗಳನ್ನು ಚೀನ ಉಲ್ಲಂಘಿ ಸುತ್ತಲೇ ಬಂದಿದೆ. 2013ರಲ್ಲಿ ನಡೆದ ಗಡಿ ರಕ್ಷಣೆ ಸಹಯೋಗ ಒಪ್ಪಂದದಲ್ಲಿ, ಒಂದು ವೇಳೆ ಎರಡೂ ಕಡೆಗಳ ಸೈನಿಕರು ಎದುರುಬದುರಾದರೆ ಅವರು ಬಲಪ್ರಯೋಗ, ಗುಂಡಿನ ದಾಳಿ ಅಥವಾ ಸಶಸ್ತ್ರ ಸಂಘರ್ಷ ನಡೆಸಬಾರದು ಎಂಬ ಅಂಶವಿದೆ. ಆದರೆ ಗಾಲ್ವಾನ್ ಕಣಿವೆಯ ಘಟನೆಯಲ್ಲಿ ಚೀನದ ಪೈಶಾಚಿಕ ನಡೆಯನ್ನು ನಾವು ನೋಡಿದ್ದೇವೆ. ಅದಕ್ಕೆ ತಕ್ಕ ಎದಿರೇಟನ್ನೂ ನೀಡಿದ್ದೇವೆ. ಇನ್ನು ಇದೇ ಸೆಪ್ಟಂಬರ್ ತಿಂಗಳಲ್ಲಿ ಮಾಸ್ಕೋದಲ್ಲಿ ಎರಡೂ ದೇಶಗಳ ರಕ್ಷಣ ಸಚಿವರು ಮತ್ತು ವಿದೇಶಾಂಗ ಸಚಿವರ ಚರ್ಚೆಯಲ್ಲಿ ಬಿಕ್ಕಟ್ಟು ಶಮನಕ್ಕಾಗಿ ಪಂಚ ಸೂತ್ರಗಳ ಒಪ್ಪಂದ ನಡೆದಿತ್ತು. ಆದರೆ ಈ ವಿಚಾರವನ್ನೂ ಚೀನ ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ. ಕಳೆದ ಶನಿವಾರವಷ್ಟೇ ವಿದೇಶಾಂಗ ಸಚಿವ ಎಸ್. ಜಯಶಂಕರ್ ಅವರು ಪ್ರಸಕ್ತ ಬಿಕ್ಕಟ್ಟು ಎಷ್ಟು ದಿನ ಮುಂದುವರಿಯಲಿದೆ ಎನ್ನುವ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ ಎಂದಿರುವುದೂ
ಚೀನದೊಂದಿಗೆ ಕೇವಲ ಮಾತುಕತೆಗಳಿಂದ ಮಾತ್ರ ಫಲಪ್ರದ ಸಾಧ್ಯವಿಲ್ಲ ಎನ್ನುವುದನ್ನು ಸಾರುತ್ತದೆ.
ಈ ಕಾರಣಕ್ಕಾಗಿಯೇ, ಎಲ್ಲ ರೀತಿಯ ಸವಾಲುಗಳನ್ನು ಎದುರಿಸಲು ಭಾರತವಂತೂ ಸಿದ್ಧವಾಗುತ್ತಿದೆ. ಚೀನಕ್ಕೆ ಅದರದ್ದೇ ಆದ ಭಾಷೆಯಲ್ಲಿ ಉತ್ತರಿಸಲು ಭಾರತವೀಗ ಸರ್ವಸನ್ನದ್ಧವಾಗಿದೆ. ಹೀಗಿರುವಾಗ ಚೀನ ಬಿಕ್ಕಟ್ಟನ್ನು ಮತ್ತಷ್ಟು ದಿನ ಮುಂದುವರಿಸಿತೆಂದರೆ, ಅದರ ಪರಿಣಾಮವನ್ನು ಅದು ಎದುರಿಸಲಿದೆ.