ಸಂಡೂರು: ಕೋವಿಡ್ ನಂತರ ಮೊದಲ ಬಾರಿ ವಿದ್ಯಾರ್ಥಿಗಳು ಉತ್ಸಾಹದಿಂದ ಪರೀಕ್ಷೆಯನ್ನು ಸವಾಲಾಗಿ ತೆಗೆದುಕೊಂಡು ಪರೀಕ್ಷೆಗಳನ್ನು ಬರೆಯಲು ಸಜ್ಜಾಗಿದ್ದಾರೆ.
ವಿದ್ಯಾರ್ಥಿಗಳ ಮಾನಸಿಕ ಸ್ಥಿತಿ ಗಮನದಲ್ಲಿಟ್ಟುಕೊಂಡು ಮಾ. 28ರಿಂದ ನಡೆಯುವ ಪರೀಕ್ಷೆಗೆ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ| ಐ.ಆರ್. ಅಕ್ಕಿ ತಿಳಿಸಿದರು.
ಅವರು ಕಚೇರಿಯಲ್ಲಿ ವಿಶೇಷ ಸಭೆ ನಡೆಸಿ ಮಾತನಾಡಿ, 28ರಂದು ಆರಂಭವಾಗಲಿರುವ ಪರೀಕ್ಷೆ ವೇಳೆ ಹಿಜಾಬ್‌ಗ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ಆದೇಶಗಳನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಿದ್ದು, ಹೈಕೋರ್ಟ್ ಆದೇಶವನ್ನು ಸರ್ವರು ಪಾಲಿಸಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅಕ್ರಮ ತಡೆಗಟ್ಟಲು ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿ ಕಾಮೆರಾ ಅಳವಡಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಜಿಲ್ಲಾಮಟ್ಟದ ಸಮಿತಿಗಳಿಗೆ ಪ್ರತಿದಿನ ಸಲ್ಲಿಸಬೇಕಾಗಿದೆ. ವಿದ್ಯಾರ್ಥಿಗಳು ಅನಗತ್ಯ ಗೊಂದಲಗಳನ್ನು ಸೃಷ್ಟಿಸದೇ ಪರೀಕ್ಷೆ ಬರೆಯಲು ಮನವಿ ಮಾಡಿದರು.
ತಾಲೂಕಿನಾದ್ಯಂತ ಒಟ್ಟು 57 ಪ್ರೌಢಶಾಲೆಗಳಿದ್ದು, 2003 ಬಾಲಕರು, 1939 ಬಾಲಕಿಯರು ಒಟ್ಟು 3942 ವಿದ್ಯಾರ್ಥಿಗಳು 8 ಕೇಂದ್ರಗಳಲ್ಲಿ ಪರೀಕ್ಷೆಗಾಗಿ ನೋಂದಾಯಿಸಿಕೊಂಡಿದ್ದಾರೆ. ಮುಖ್ಯ ಅಧಿಧೀಕ್ಷಕರು 8, ಕೊಠಡಿ ಮೇಲ್ವಿಚಾರಕರು 299, ಸ್ಥಾನಿಕ ಜಾಗೃತ ದಳದವರು 8, 16ಜನ ಪೊಲೀಸರನ್ನು ನಿಯೋಜಿಸಲಾಗಿದೆ.
ವಿಶೇಷ ಸೋಂಕಿತ ಲಕ್ಷಣಗಳಿರುವ ಮಕ್ಕಳಿಗಾಗಿ 8 ಕೊಠಡಿಗಳು, 20 ಪ್ರೌಢಶಾಲೆ, 7 ಸಮಾಜ ಕಲ್ಯಾಣ ಇಲಾಖೆ ಶಾಲೆ, 10 ಅನುದಾನಿತ ಪ್ರೌಢಶಾಲೆ, 20 ಅನುದಾನ ರಹಿತ ಪ್ರೌಢಶಾಲೆಗಳಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ದೈಹಿಕ ಪರಿವೀಕ್ಷಕ ಶಿಕ್ಷಕ ಎಸ್.ಡಿ. ಸಂತಿ, ಇಸಿಒಗಳಾದ ಬಸವರಾಜ, ಪಾಲಾಕ್ಷಪ್ಪನವರು ಉಪಸ್ಥಿತರಿದ್ದರು.