ಸುರತ್ಕಲ್: ಕೃಷಿ ಉತ್ಪನ್ನ ಸಹಕಾರ ಸಮಿತಿಗಳು ಮತ್ತೂಂದು ಚುನಾವಣೆ ಸಮರಕ್ಕೆ ಸಜ್ಜಾಗಿದ್ದು, ಚುನಾವಣ ಸಂಬಂಧಿತ ಅಧಿಸೂಚನೆ ಶೀಘ್ರವೇ ಪ್ರಕಟವಾಗಲಿದೆ. ಅಧಿಕಾರಕ್ಕಾಗಿ ಪೈಪೋಟಿ ಏರ್ಪಡುವ ಸಾಧ್ಯತೆಗಳು ಕಂಡುಬರುತ್ತಿವೆ.
ಜಿಲ್ಲಾಧಿಕಾರಿಗಳು ಮೀಸಲು ನಿಗದಿಪಡಿಸಿ ಸರಕಾರಕ್ಕೆ ಕಳುಹಿಸಿದ ಬಳಿಕವೇ ಅಧಿಸೂಚನೆ ಹೊರಬಿದ್ದು ಚುನಾವಣೆ ಘೋಷಣೆಯಾಗುತ್ತದೆ. ಬಹುತೇಕ ಜಿಲ್ಲೆಗಳ ಚುನಾವಣೆ ಪೂರ್ವ ತಯಾರಿ ಮುಗಿದಿದ್ದು, ಘೋಷಣೆಯಾಗುವುದೊಂದೇ ಬಾಕಿಯಿದೆ. ಈ ನಿಟ್ಟಿನಲ್ಲಿ ದ.ಕ. ಜಿಲ್ಲೆಯೂ ಚುನಾವಣೆಗೆ ಸಜ್ಜಾಗುತ್ತಿದೆ.
ಎಪಿಎಂಸಿಗಳ ಅಧಿಕಾರಾವಧಿ ಫೆಬ್ರವರಿ ತಿಂಗಳಲ್ಲಿ ಕೊನೆಗೊಂಡಿತ್ತು. ಆದರೆ ಸರಕಾರವು ಅವರ ಚಟುವಟಿಕೆಗಳ ಮೇಲ್ವಿಚಾರಣೆಗೆ ಆಡಳಿತಾಧಿಕಾರಿಗಳನ್ನು ನೇಮಿಸಿತ್ತು. ಮುಂದಿನ ವರ್ಷ ರಾಜ್ಯ ವಿಧಾನ ಸಭೆಗೆ ಚುನಾವಣೆ ನಡೆಯ ಲಿರುವುದರಿಂದ ಹಿಡಿತ ಸಾಧಿಸಲು ಎಪಿಎಂಸಿ ಚುನಾವಣೆ ಪೂರಕವಾಗಲಿದೆ.
ಅಭ್ಯರ್ಥಿಗಳು ಪಕ್ಷದ ಚಿಹ್ನೆಗಳ ಮೇಲೆ ಚುನಾವಣೆಗೆ ನಿಲ್ಲದಿದ್ದರೂ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಳ್ಳುವುದು ಇತ್ತೀಚಿನ ವರ್ಷಗಳಲ್ಲಿ ಚುನಾವಣೆ ಕಣವನ್ನು ರಂಗೇರಿಸುತ್ತಿದೆ. ಕೋಟಿಗಟ್ಟಲೆ ವಹಿವಾಟು ನಡೆಸುವ, ರೈತರೊಂದಿಗೆ ನೇರ ಸಂಪರ್ಕ ಹೊಂದಿರುವ ಎಪಿಎಂಸಿಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವಂತೆ ಸ್ಥಳೀಯ ಶಾಸಕರು ಹಾಗೂ ಪಕ್ಷದ ಮುಖಂಡರು ಪ್ರಚಾರ ನಡೆಸುವುದು ಸಾಮಾನ್ಯ. ಈ ಎಲ್ಲ ವರ್ಷಗಳಲ್ಲಿ ರಾಜ್ಯಾದ್ಯಂತ ಬಹುತೇಕ ಎಪಿಎಂಸಿಗಳಲ್ಲಿ ಈ ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳ ಪ್ರಾಬಲ್ಯವಿತ್ತು. ಬಿಜೆಪಿಯ ಪ್ರಭಾವ ಶಿವಮೊಗ್ಗ, ಉಡುಪಿ, ದ.ಕ. ಜಿಲ್ಲೆಗಳ ಕೆಲವು ತಾಲೂಕುಗಳಿಗೆ ಸೀಮಿತವಾಗಿತ್ತು. ಇದೀಗ ಬದಲಾದ ಸಂದರ್ಭದಲ್ಲಿ ಬಿಜೆಪಿ ಪ್ರಭಾವ ಹೆಚ್ಚುವಂತಾಗಿದೆ.
ಎಎಂಪಿಸಿ ಕಾಯ್ದೆಗೆ ತಿದ್ದುಪಡಿ ತಂದು ಕೇಂದ್ರ ಮತ್ತು ರಾಜ್ಯಗಳೆರಡೂ ರೈತರ ಖಾತೆಗೆ ನೇರವಾಗಿ ಹಣ ವರ್ಗಾವಣೆ, ಬೆಳೆ ವಿಮಾ ಯೋಜನೆ ಮತ್ತು ಸಾಲದ ಕವರೇಜ್ ಹೆಚ್ಚಳದೊಂದಿಗೆ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯನ್ನು ಪರಿಚಯಿಸಿದೆ. ಅಭಿವೃದ್ಧಿಯ ಮಂತ್ರದೊಂದಿಗೆ ಈ ಬಾರಿ ಬಿಜೆಪಿ ಎಲ್ಲೆಡೆ ಸ್ಪರ್ಧಿಸುವ ಹುಮ್ಮಸ್ಸು ತೋರಿಸುತ್ತಿದೆ. ಎಪಿಎಂಸಿಗಳಿಗೆ ನಡೆಯುವ ಚುನಾವಣೆಯಲ್ಲಿ ರಾಜ್ಯದಲ್ಲಿ ಸುಮಾರು 33 ಲಕ್ಷ ಸದಸ್ಯರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಹಲವು ಸ್ಥಳೀಯ ಮುಖಂಡರು ತಮ್ಮ ಬೆಂಬಲಕ್ಕಾಗಿ ಶಾಸಕರ, ಸಹಕಾರಿ ಸಂಘಗಳ ಬಾಗಿಲು ತಟ್ಟುತ್ತಿದ್ದಾರೆ.
ಸರಕಾರ ತಿದ್ದುಪಡಿ ಮೂಲಕ ಎಪಿಎಂಸಿಗಳನ್ನು ಬಲಪಡಿಸಿದೆ. ಖಾಸಗಿ ಸಂಸ್ಥೆಗಳಿಗೆ ಸಮಾನಾಂತರ ವ್ಯವಸ್ಥೆಗೆ ಉತ್ತೇಜನ ನೀಡಿರುವುದರಿಂದ ರೈತರಿಗೆ ಲಾಭವಾಗುತ್ತಿದೆ. ಚುನಾವಣೆ ಪ್ರತಿಷ್ಠೆಯ ಹೋರಾಟ ವಾಗುವುದಿಲ್ಲ ಎಂಬುದು ಮಂಗಳೂರು ಉತ್ತರ ವಿಧಾನ ಸಭೆ ಕ್ಷೇತ್ರದ ಶಾಸಕ ಡಾ| ಭರತ್ ಶೆಟ್ಟಿ ವೈ. ಅಭಿಪ್ರಾಯ.
ರಾಜ್ಯದಲ್ಲಿ ಸುಮಾರು 160 ಎಪಿಎಂಸಿಗಳಿದ್ದು, ಕೋವಿಡ್-19 ನಿರ್ಬಂಧಗಳನ್ನು ಸಡಿಲಿಸಿರುವುದರಿಂದ ಚುನಾವಣೆ ನಡೆಯಲಿದೆ. ಆಯಾ ಜಿಲ್ಲೆಯ ಜಿಲ್ಲಾ ಧಿಕಾರಿಗಳು ಚುನಾವಣೆಗೆ ಮೀಸಲಾತಿ ನಿಗದಿಪಡಿ ಸಲಿದ್ದಾರೆ ಎಂದು ಎಪಿಎಂಸಿ ನಿರ್ದೇಶಕರು ತಿಳಿಸಿದ್ದಾರೆ.
ಒಟ್ಟು 18 ಸದಸ್ಯರು
ಸರಕಾರವು ರೈತರಿಂದ ಚುನಾಯಿತರಾಗಲು 11 ಸದಸ್ಯರಿಗೆ ಮೀಸಲಾತಿ ಘೋಷಿಸಲಿದ್ದು, ತೋಟಗಾರಿಕೆ, ವ್ಯಾಪಾರಿಗಳು ಮತ್ತು ತಾಲೂಕು ಕೃಷಿ ಉತ್ಪನ್ನ ಸಹಕಾರ ಸಂಘಗಳಿಂದ ತಲಾ ಒಬ್ಬರು ಆಯ್ಕೆಯಾಗಲಿದ್ದಾರೆ. ಸರಕಾರವು ಪ್ರತಿ ಎಪಿಎಂಸಿಗೆ ಮೂರು ಸದಸ್ಯರನ್ನು ನಾಮನಿರ್ದೇಶನ ಮಾಡಬಹುದು, ಅವರು ಮತದಾನದ ಅಧಿಕಾರವನ್ನು ಸಹ ಚಲಾಯಿಸಬಹುದಾಗಿದೆ. ಹೀಗೆ ಒಟ್ಟು 18 ಸದಸ್ಯರು ಇರುತ್ತಾರೆ.
ಪೂರಕ ಕ್ರಮ ಪೂರ್ಣ
ಮಂಗಳೂರು ತಾಲೂಕು ಎಪಿಎಂಸಿ ಸದಸ್ಯರ ಚುನಾವಣೆಗೆ ಪೂರ್ವತಯಾರಿ ಮುಗಿದಿದೆ. ಸರಕಾರಕ್ಕೆ ಬೇಕಾದ ಮಾಹಿತಿ ಕಳಿಸಲಾಗಿದೆ. ಸರಕಾರದಿಂದ ಸೂಚನೆ ಬಂದ ಕೂಡಲೇ ಜಿಲ್ಲಾಧಿಕಾರಿಗಳು ಚುನಾವಣೆಗೆ ಪೂರಕ ಕ್ರಮಕೈಗೊಳ್ಳಲಿದ್ದಾರೆ.
-ಪುರಂದರ ಹೆಗ್ಡೆ, ತಹಶೀಲ್ದಾರ್