Advertisement

Mangaluru ಪಿಡಿಒಗಳ ಅಕಾಲಿಕ ವರ್ಗಾವಣೆ, ನಾಗರಿಕ ಸೇವೆಗಳಲ್ಲಿ ವ್ಯತ್ಯಯ

12:54 AM Sep 30, 2023 | Team Udayavani |

ಮಂಗಳೂರು: ರಾಜ್ಯದಲ್ಲಿ ಮೊದಲ ಬಾರಿಗೆ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗಳ ರಾಜ್ಯವ್ಯಾಪಿ ವರ್ಗಾವರ್ಗಿ ಅಕಾಲಿಕವಾಗಿ ನಡೆಯುತ್ತಿರುವುದರಿಂದ ನಾಗರಿಕ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ.

Advertisement

ಪಿಡಿಒಗಳು ಬದಲಾಗುವಾಗ ಅಲ್ಲಿ ಬರುವ ಹೊಸ ಪಿಡಿಒ ಅಧಿಕಾರಿಯ ಬೆರಳಚ್ಚು ಹಾಗೂ ಡಿಜಿಟಲ್‌ ಸಹಿ ಮ್ಯಾಪಿಂಗ್‌ ಕೆಲಸ ತ್ವರಿತವಾಗಿ ಆಗಬೇಕು, ಅದು ಆಗದ ಕಾರಣ ಹಲವು ಸೇವೆಗಳಲ್ಲಿ ಸಮಸ್ಯೆಯಾಗಿದೆ.

9/11 ನೀಡುವುದು, ಹಲವು ತೆರಿಗೆಗಳ ರಶೀದಿ ನೀಡುವುದು, ಹಕ್ಕು ಪತ್ರ ಬದಲಾವಣೆ, ವ್ಯಾಪಾರ ಪರವಾನಿಗೆ, ಕಟ್ಟಡ ಪರವಾನಿಗೆ, ಮನೆ ತೆರಿಗೆ, ಪಾವತಿ, ಡೋರ್‌ ನಂಬರ್‌ನಂತಹ ಹಲವು ಸೇವೆಗಳಿಗೆ ಪಿಡಿಒ ಅವರ ಲಾಗಿನ್‌ ಹಾಗೂ ಬೆರಳಚ್ಚು ಅತ್ಯಗತ್ಯ. ಸದ್ಯ ಎಲ್ಲವೂ ಪಂಚತಂತ್ರ 2 ತಂತ್ರಾಂಶದ ಮೂಲಕವೇ ಆಗುತ್ತಿದೆ. ತೆರಿಗೆ ಪಾವತಿಗೆ ಕೂಡ ಹಿಂದಾದರೆ ಕೈ ಬರಹದ ರಶೀದಿ ಕೊಡಲಾಗುತ್ತಿತ್ತು. ಸಣ್ಣಪುಟ್ಟ ಕೆಲಸಗಳಿಗೂ ಈಗ ಪಿಡಿಒ ಲಾಗಿನ್‌ ಇಲ್ಲದೆ ಮಾಡಲಾಗುತ್ತಿಲ್ಲ.

ಸಾಮಾನ್ಯವಾಗಿ ಹೊಸದಾಗಿ ಬರುವ ಪಿಡಿಒಗಳ ಲಾಗಿನ್‌, ಬೆರಳಚ್ಚು ವಿವರಗಳನ್ನು ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಅನುಮೋದನೆ ಮಾಡುವ ಮೂಲಕ ಅದನ್ನು ಅಧಿಕೃತಗೊಳಿಸಬೇಕು, ಆದರೆ ಈ ಪ್ರಕ್ರಿಯೆ ಇನ್ನೂ ಸುಗಮವಾಗಿ ನಡೆದಿರದ ಕಾರಣ ಬಹುತೇಕ ಕಡೆ ನಾಗರಿಕ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.

9/11 ನಮೂನೆಗಳಿಗಾಗಿ ಹಲವು ಬಾರಿ ಪಂಚಾಯತ್‌ ಸುತ್ತಾಡಿ ಬಂದೆ, ಆದರೆ ಇದುವರೆಗೆ ಸಿಕ್ಕಿಲ್ಲ. ಪಿಡಿಒ ಇದ್ದಾರೆ, ಆದರೆ ಅವರ ಬೆರಳಚ್ಚು ಇನ್ನೂ ಮ್ಯಾಪ್‌ ಆಗಿಲ್ಲ ಎಂದು ನಾಗರಿಕರೊಬ್ಬರು ಉದಯವಾಣಿಗೆ ತಿಳಿಸಿದ್ದಾರೆ.

Advertisement

ಅಸಮರ್ಪಕ/ಅಕಾಲಿಕ ವರ್ಗಾವಣೆ
ಈ ಮೊದಲು ಜಿಲ್ಲೆಯೊಳಗೆ ಆಗುತ್ತಿರುವ ವರ್ಗಾವಣೆ ಈ ಬಾರಿ ಇದೇ ಮೊದಲ ಬಾರಿಗೆ ರಾಜ್ಯದ ಮಟ್ಟದಲ್ಲಿ ಆಗುತ್ತಿದೆ. ಕಳೆದ ಆಗಸ್ಟ್‌ನಲ್ಲಿ ಆರಂಭವಾಗಿರುವ ವರ್ಗಾವಣೆ ಪ್ರಕ್ರಿಯೆ ಇನ್ನೂ ಮುಗಿದಿಲ್ಲ, ಇದುವರೆಗೆ ಒಟ್ಟು 7 ವರ್ಗಾವಣೆ ಪಟ್ಟಿಗಳು ಬಂದಿವೆ. ಒಂದು ತಿಂಗಳೊಳಗೆ ಮುಗಿಯಬೇಕಿರುವ ಪ್ರಕ್ರಿಯೆ ಇದುವರೆಗೆ ಮುಗಿಯದಿರುವುದು ಕೂಡ ಈ ಸಮಸ್ಯೆಗೆ ಕಾರಣ ಎನ್ನುತ್ತಾರೆ ಪಿಡಿಒ ಒಬ್ಬರು.

15 ದಿನವೋ ಅಥವಾ ತಿಂಗಳ ಕಾಲಮಿತಿಯೊಳಗಾಗಿ ವರ್ಗಾವಣೆಯಾದರೆ ಸಮಸ್ಯೆಯಾಗುತ್ತಿರಲಿಲ್ಲ, ಈಗ ಎರಡು ತಿಂಗಳಿನಿಂದ ಈ ವರ್ಗಾವಣೆ ಆಗುತ್ತಲೇ ಇದೆ. ಹಿಂದೆ ಜಿ.ಪಂ. ವ್ಯಾಪ್ತಿಯಲ್ಲಿ, ಅದರ ಮಟ್ಟದಲ್ಲಿ ಆಗುವ ಕಾರಣ ಖಾಲಿ ಹುದ್ದೆ ಉಳಿಯುತ್ತಿರಲಿಲ್ಲ, ಈಗ ರಾಜ್ಯ ಮಟ್ಟದ್ದಾದ ಕಾರಣ ಒಬ್ಬ ಪಿಡಿಒ ವರ್ಗಾವಣೆಯಾಗಿ ಹೋದ ಬಳಿಕ ಇನ್ನೊಬ್ಬರು ಬರಬೇಕಾದರೆ ಪೋಸ್ಟಿಂಗ್‌ನಲ್ಲಿ ವಿಳಂಬವಾಗುತ್ತದೆ. ವರ್ಷದ ನಡುವೆ ಈ ಸಮಯದಲ್ಲಿ ಆಗಬಾರದಿತ್ತು, ಸರಕಾರ ಬದಲಾಗಿರುವುದರಿಂದಲೂ ಇದು ಆಗಿದೆ. ಈ ಕಾರಣದಿಂದ ನಮಗೂ ಸಮಸ್ಯೆಯಾಗಿದೆ, ಜಿಲ್ಲೆಯ ನಾಲ್ಕು ಮಂದಿ ಪಿಡಿಒಗಳಿಗೆ ಇನ್ನೂ ಜಾಗ ತೋರಿಸಿಲ್ಲ ಎನ್ನುತ್ತಾರೆ ಪಿಡಿಒವೊಬ್ಬರು.

ದ.ಕ. ಜಿಲ್ಲೆ
ಒಟ್ಟು ಗ್ರಾ. ಪಂ: 229
ಪಿಡಿಒ ಹುದ್ದೆ: 200
(ಬೇರೆ ಜಿಲ್ಲೆಗೆ ಹೋದವರು 11 ಮಂದಿ.)

ಉಡುಪಿ ಜಿಲ್ಲೆ
ಒಟ್ಟು ಗ್ರಾ.ಪಂ.: 155
ಪಿಡಿಒ ಹುದ್ದೆ 137

ವರ್ಗಾವಣೆ ನಡೆಯುತ್ತಿದೆ, ಆದರೆ ಇದರಿಂದ ಜನರ ಸೇವೆಗಳಲ್ಲಿ ವ್ಯತ್ಯಯ ಆಗಬಾರದು, ಡಿಜಿಟಲ್‌ ಸಹಿ, ಲಾಗಿನ್‌, ಬೆರಳಚ್ಚು ಮ್ಯಾಪಿಂಗ್‌ ಪ್ರಕ್ರಿಯೆ ತ್ವರಿತಗೊಳಿಸುವಂತೆ ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸುತ್ತೇನೆ.
-ಡಾ| ಆನಂದ್‌, ಸಿಇಒ, ದ.ಕ. ಜಿ. ಪಂ.

-ವೇಣುವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next