Advertisement

ಬಂಪರ್‌ ಬೆಳೆ ಕಮರಿಸಿದ ಅಕಾಲಿಕ ಮಳೆ

02:15 PM Jan 11, 2021 | Team Udayavani |

ಹುಬ್ಬಳ್ಳಿ: ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿ, ಪ್ರವಾಹದಿಂದ ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಅನ್ನದಾತರು, ಹಿಂಗಾರು ಹಂಗಾಮಿಗೆ ಉತ್ತಮ ಬೆಳೆ ಬಂದಿದೆ ಎಂಬ ಸಂತಸದಲ್ಲಿರುವಾಗಲೇ ಅಕಾಲಿಕವಾಗಿ ಸುರಿದ ಮಳೆ ರೈತರ ಸಂತಸ ಕಿತ್ತುಕೊಂಡು ಮತ್ತದೇ ಸಂಕಷ್ಟಕ್ಕೆ ನೂಕಿದೆ.= ಶುಕ್ರವಾರ ಸಂಜೆ ಸುರಿದ ರಭಸದ ಮಳೆಯಿಂದ ಧಾರವಾಡ, ಹಾವೇರಿ, ಬೆಳಗಾವಿ, ಗದಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಜೋಳ, ಕಡಲೆ, ಗೋಧಿ  ಸೇರಿದಂತೆ ವಿವಿಧ ಬೆಳೆಗಳು ಹಾನಿಗೀಡಾಗಿವೆ. ಇನ್ನೇನು ಕಾಳು ಕಟ್ಟುತ್ತಿದೆ, ಉತ್ತಮ ಫಸಲು ನಿರೀಕ್ಷೆ ಮೂಡಿಸಿದೆ ಎಂಬ ಸಂತಸದಲ್ಲಿದ್ದ ರೈತರು ಇದೀಗ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.

Advertisement

ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ರೈತರು ಬೆಳೆದ ಲಕ್ಷಾಂತರ ಎಕರೆ ಪ್ರದೇಶದ ಬೆಳೆ ಹಾನಿಗೀಡಾಗಿತ್ತು. ಅದರ ನಷ್ಟದ ಬರೆ ಇನ್ನೂ ಮಾಸಿಲ್ಲ. ಅಷ್ಟರೊಳಗೆ ಮತ್ತೂಂದು ಬರೆ ಎಳೆಯುವ ಕಾರ್ಯವನ್ನು ಅಕಾಲಿಕ ಮಳೆ ಮಾಡಿದೆ. ಮುಂಗಾರು ಹಂಗಾಮಿಗೆ ಬಿತ್ತಿದ್ದ ಹೆಸರು, ಸೊಯಾಬಿನ್‌, ಸಜ್ಜೆ, ಶೇಂಗಾ, ಈರುಳ್ಳಿ, ಹತ್ತಿ, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳು ಹಾನಿಗೀಡಾಗಿದ್ದವು. ಕೊಯ್ಲು ಮಾಡಿ ರಾಶಿ ಮಾಡುವುದಕ್ಕೆಂದು ಗೂಡಿಸಿಟ್ಟಿದ್ದ ಬೆಳೆಯನ್ನು ರಾಶಿ ಮಾಡುವುದಕ್ಕೂ ಅವಕಾಶ ನೀಡದಂತೆ ಸತತವಾಗಿ ಮಳೆ ಸುರಿದಿದ್ದರಿಂದಾಗಿ, ಗೂಡು ರೂಪದಲ್ಲಿ ಇರಿಸಿದ್ದಲ್ಲಿಯೇ ಸಜ್ಜೆ, ಮೆಕ್ಕೆಜೋಳ ಮೊಳಕೆ ಬಂದಿದ್ದವು. ಹೆಸರು, ಸೊಯಾಬಿನ್‌ ಕೊಯ್ಲು ಮಾಡುವುದಕ್ಕೂ ಅವಕಾಶ ಇಲ್ಲದೆ ಅವೆಲ್ಲವೂ ಮಣ್ಣಲ್ಲಿ ಮಣ್ಣಾಗಿದ್ದವು. ಶೇಂಗಾ ಕೀಳಲು ಸಾಧ್ಯವಾಗದೆ ಭೂಮಿಯಲ್ಲಿಯೇ ಕೊಳೆತು ಹೋಗುವಂತಾಗಿತ್ತು.

ಮುಂಗಾರು ಹಂಗಾಮಿನ ಮಳೆಯ ಹೊಡೆತದಿಂದ ಅನ್ನದಾತರು ಇನ್ನೂ ಚೇತರಿಸಿಕೊಂಡಿಲ್ಲ. ಇದೀಗ ಹಿಂಗಾರು ಹಂಗಾಮಿನಲ್ಲೂ ಮತ್ತೂಂದು ಬಲವಾದ ಪೆಟ್ಟು ನೀಡುವ ಕೆಲಸವನ್ನು ಅಕಾಲಿಕ ಮಳೆ ಮಾಡಿದೆ. ಹವಾಮಾನ ತಜ್ಞರ ನಿರೀಕ್ಷೆಯಂತೆ ಸಾಧಾರಣ ಮಳೆ ಆಗಬಹುದಾಗಿದೆ ಎಂಬುದಾಗಿತ್ತು. ಆದರೆ, ಮಳೆಗಾಲದ ಮಳೆಗಳನ್ನು ಮೀರಿಸುವ ರಭಸದ ಮಳೆ ರೈತರ ಕೃಷಿ ಬದುಕೇ ಕೊಚ್ಚಿ ಹೋಗುವಂತೆ ಮಾಡಿದೆ.

ಬಂಪರ್‌ ಬೆಳೆ ಕಮರಿಸಿದ ಅಕಾಲಿಕ ಮಳೆ: ಹಿಂಗಾರುಹಂಗಾಮಿಗೆ ವಿಶೇಷವಾಗಿ ಬಿಜಾಪುರ ತಳಿ ಜೋಳ, ಕಡಲೆ, ಗೋ ಧಿ ಸೇರಿದಂತೆ ವಿವಿಧ ಬೆಳೆಗಳು ಬಂಪರ್‌ ಫಸಲು ನಿರೀಕ್ಷೆ ಮೂಡಸಿದ್ದವು. ಆದರೆ, ಅಕಾಲಿಕ ಮಳೆ ಬಂಪರ್‌ ಬೆಳೆಯೇ ಕಮರುವಂತೆ ಮಾಡಿದೆ. ಅಕಾಲಿಕ ಮಳೆ ಒಂದು ಕಡೆ ಬೆಳೆ ಹಾನಿ ಮೂಲಕ ರೈತರಿಗೆ ನಷ್ಟ ಸೃಷ್ಟಿಸಿದ್ದರೆ, ಮೇವು ಹಾನಿ ಮೂಲಕ ಜಾನುವಾರುಗಳಿಗೆ ಆಹಾರದ ಕೊರತೆ ತಂದೊಡ್ಡಿದೆ. ಕೆಲ ಜಿಲ್ಲೆಗಳಲ್ಲಿ ತರಕಾರಿ, ತೋಟಗಾರಿಕೆ ಬೆಳೆಗಳು ಸಹ ಅಕಾಲಿಕ ಮಳೆ ಹೊಡೆತಕ್ಕೆ ಸಿಕ್ಕು ನಲುಗಿವೆ.

ಇದನ್ನೂ ಓದಿ:ವಿಜಯಪುರ ಜಿಲ್ಲೆಗೆ ಮಂತ್ರಿ ಸ್ಥಾನದ ಆದ್ಯತೆ ನೀಡಬೇಕು: ಶಾಸಕ ಸಾಸನೂರ

Advertisement

ಕಪ್ಪಾಗಲಿದೆ ಜೋಳ: ಉತ್ತರ ಕರ್ನಾಟಕದ ಪ್ರಮುಖ ಬೆಳೆಗಳಲ್ಲಿ ಜೋಳವೂ ಒಂದಾಗಿದೆ. ಹಿಂಗಾರು ಹಂಗಾಮಿಗೆ ಈ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಜೋಳದ ಬೆಳೆ ಭರ್ಜರಿಯಾಗಿಯೇ ಬಂದಿತ್ತು. ರೈತರು ಸಹ ಈ ಬಾರಿಜೋಳದ ಫಸಲು ಉತ್ತಮವಾಗಿದ್ದು, ಮಾರುಕಟ್ಟೆಯಲ್ಲಿ ಉತ್ತಮ ದರ ಸಿಕ್ಕರೆ ಸಾಕು, ಮುಂಗಾರು ಹಂಗಾಮಿನ ಬೆಳೆ ನಷ್ಟದ ನೋವಿಗೆ ಒಂದಿಷ್ಟು ನೆಮ್ಮದಿ ಸಿಕ್ಕಂತಾಗುತ್ತದೆ ಎಂದು ಭಾವಿಸಿದ್ದರು.

ಕಾಳು ಕಟ್ಟುವ ಹಂತದಲ್ಲಿದ್ದ ಜೋಳಕ್ಕೆ ಅಕಾಲಿಕ ಮಳೆ ಮೇಲೇಳದ ರೀತಿಯಲ್ಲಿ ಹೊಡೆತ ಕೊಟ್ಟಿದೆ. ವಿಶೇಷವಾಗಿ ಹಾವೇರಿ, ಗದಗ ಜಿಲ್ಲೆಯಲ್ಲಿ ಬಿಜಾಪುರ ತಳಿ ಜೋಳ ಮಳೆಯ ಹೊಡೆತಕ್ಕೆ ಸಿಲುಕಿದ್ದು, ಹಾವೇರಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಬೆಳೆ ನೆಲಕ್ಕುರಳಿದೆ. ಜೋಳದ ಬೆಳೆ ಕಾಳು ಕಟ್ಟುವ ಹಂತದಲ್ಲಿ ಮಳೆ ಬಿದ್ದರೆ ಕಾಳು ಕಟ್ಟಲ್ಲ. ಜತೆಗೆ ಅಷ್ಟು ಇಷ್ಟು ಕಾಳು ಕಟ್ಟಿ ಫಸಲು ದೊರೆತರೂ ಜೋಳ ಕಪ್ಪಾಗುವ ಸಾಧ್ಯತೆ ಇದೆ. ಇದು ಜೋಳದ ಬೆಳೆಗಾರರನ್ನು ತೀವ್ರ ಚಿಂತೆಗೀಡು ಮಾಡಿದೆ. ಧಾರವಾಡ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಕಡಲೆ ಬೆಳೆ ಮಳೆಗೆ ಸಿಲುಕು ನಲುಗುತ್ತಿದೆ. ಕಡಲೆ ಬೆಳೆಗೆ ಮಳೆ ಬಿದ್ದರೆ ಬೆಳೆಯ ಹುಳಿ ಇಲ್ಲವಾಗಿ ಫಸಲು ಬರುವುದಿಲ್ಲ. ದೃಷ್ಟಿಯಾಗುವಂತೆ ಕಡಲೆ ಬೆಳೆ ಬೆಳೆದು ನಿಂತಿದೆ. ಆದರೆ ಮಳೆಯಿಂದ ಫಸಲೇ ಬರುವುದಿಲ್ಲ ಎಂಬುದನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಾಗದಾಗಿದೆ ಎಂಬುದು ಅನೇಕ ರೈತರ ಅಳಲು. ಬೆಳಗಾವಿಯ ವಿವಿಧ ಕಡೆಯ ಗ್ರಾಮೀಣ ಪ್ರದೇಶದಲ್ಲಿ ಶುಕ್ರವಾರ ಬಿದ್ದ ಅಕಾಲಿಕ ಮಳೆಯಿಂದ ಜೋಳ, ಭತ್ತ, ಈರುಳ್ಳಿ, ಆಲೂಗಡ್ಡೆ, ತೊಗರಿ, ಮೆಣಸಿನಕಾಯಿ, ಬಾಳೆ, ತರಕಾರಿ ಬೆಳೆ ಹಾನಿಗೀಡಾಗಿದೆ.

ಮೆಣಸಿನಕಾಯಿ ಬೆಳೆಗೆ ಈ ಭಾಗ ತನ್ನದೇ ಮಹತ್ವ ಪಡೆದಿದೆ. ಈಗಾಗಲೇ ಮೆಣಸಿನಕಾಯಿ ಕೊಯ್ಲು ಮಾಡಿ ಅನೇಕ ರೈತರು ಮಾರಾಟ ಮಾಡಿದ್ದಾರೆ. ಇನ್ನು ಅನೇಕರು ಒಣಗಿಸುವ ಕಾರ್ಯಕ್ಕೆಂದು ಇರಿಸಿಕೊಂಡಿದ್ದಾರೆ. ಕೆಲ ಕಡೆಗಳಲ್ಲಿ ಮೆಣಸಿನಕಾಯಿ ಮಳೆಗೆ ಸಿಲುಕಿದೆ ಎಂದು ಹೇಳಲಾಗುತ್ತಿದ್ದು, ಮಾರುಕಟ್ಟೆಯಲ್ಲಿ ದಾಖಲೆ ದರ ದೊರೆಯುತ್ತಿದ್ದರೂ ಮೆಣಸಿನಕಾಯಿ ಬೆಳೆ ಹಾನಿ ರೈತರನ್ನು ನೋವಿಗೆ ತಳ್ಳಿದೆ. ರಾಶಿ ಮಾಡುವುಕ್ಕೆಂದು ಇರಿಸಿದ ಮೆಕ್ಕೆಜೋಳ, ಇನ್ನಿತರೆ ಬೆಳೆಗಳು ಅಕಾಲಿಕ ಮಳೆಯಿಂದ ತತ್ತರಿಸಿವೆ. ಪ್ರಕೃತಿ ಮುನಿಸು ಒಂದು ಕಡೆಯಾದರೆ, ಇನ್ನೊಂದು ಕಡೆ ಸಂಕಷ್ಟ ಕಾಲಕ್ಕೆ ನೆರವಿಗೆ ಇರಲೆಂಬ ಉದ್ದೇಶದೊಂದಿಗೆ ಕೈಗೊಂಡ ಬೆಳೆ ವಿಮೆ ಯೋಜನೆಯೂ ರೈತರ ಪಾಲಿಗೆ ಇಲ್ಲವಾಗಿದೆ. ಇಂತಹ ದುಸ್ಥಿತಿಯಲ್ಲಿ ನಾವು ಕೃಷಿಯಲ್ಲಿ ಮುಂದುವರಿಯಬೇಕೆ ಎಂಬುದು ಹಲವು ರೈತರ ಅಸಹಾಯಕತೆಯ ಪ್ರಶ್ನೆ-ಅಳಲಾಗಿದೆ.

ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next