ಕುಷ್ಟಗಿ: ಮಳೆ ಕಡಿಮೆ, ಚಳಿ ಹೆಚ್ಚಾಗಿ ಮಾವು ಹೂವು ಬಿಡುವುದು ಮೊದಲೇ ವಿಳಂಬವಾಗಿದೆ. ಈ ಪರಿಸ್ಥಿತಿಯಲ್ಲಿ ಕಳೆದ ರವಿವಾರ ರಾತ್ರಿ ಸುರಿದ ಅಕಾಲಿಕ ಮಳೆಯಿಂದ ಹೂವು ಉದುರಿದ್ದು, ಇಳುವರಿ ಕುಂಟಿತಗೊಳ್ಳುವ ಆತಂಕ ಎದುರಾಗಿದೆ.
ತಾಲೂಕಿನಲ್ಲಿ 130 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಹೂವು ಕಟ್ಟುವ ಹಂತದಲ್ಲೇ ದಲ್ಲಾಳಿಗಳು ಬೆಳೆಗೆ ಬೆಲೆ ಕಟ್ಟುತ್ತಾರೆ. ಪ್ರಸಕ್ತ ವರ್ಷದಲ್ಲಿ ಹವಮಾನದ ವೈಪರಿತ್ಯದಿಂದಾಗಿ ನವೆಂಬರ್, ಡಿಸೆಂಬರ್ ತಿಂಗಳಿನಲ್ಲಿ ಮಾವು ಹೂವು ಬಿಡುವುದು ಶುರುವಾಗಬೇಕಿದ್ದರೂ ಇದೀಗ ಜನವರಿಯಲ್ಲಿ ಹೂವು ಬಿಟ್ಟಿದೆ. ಕೆಲವು ಮರಳಲ್ಲಿ ಹೂವು ಬಿಟ್ಟಿಲ್ಲ.
ಬದಲಾದ ಈ ಪರಿಸ್ಥಿತಿಯಲ್ಲಿ ಹಣ್ಣುಗಳ ರಾಜ ಮಾವು ಬೇಸಿಗೆಯಲ್ಲಿ ಸಿಗದು ಎನ್ನುವುದು ಖಾತ್ರಿಯಾಗಿದ್ದು, ಮಳೆಗಾಲದಲ್ಲಿ ಫಸಲು ನಿರೀಕ್ಷಿಸುವಂತಾಗಿದೆ. ಈ ಪರಿಸ್ಥಿತಿಯಲ್ಲಿ ಕಳೆದ ರವಿವಾರ ಸುರಿದ ಮಳೆಯಿಂದಾಗಿ ಮಾವಿನ ಗಿಡಗಳಲ್ಲಿ ಬಿಟ್ಟಿದ್ದ ಹೂವು ಉದುರಿವೆ. ಮಾವು ಬೆಳೆಗಾರರನ್ನು ಹವಾಮಾನ ವೈಪರಿತ್ಯ ಹಾಗೂ ಅಕಾಲಿಕ ಮಳೆ ಸಂಕಷ್ಟಕ್ಕೀಡು ಮಾಡಿದೆ. ಅಲ್ಲದೇ ಪರಿಸ್ಥಿತಿಯಲ್ಲಿ ಚಿಬ್ಬು ರೋಗದ ಹತೋಟಿ ಮಾಡಲು ಮಾವು ಬೆಳೆಗಾರರಿಗೆ ಹೆಚ್ಚುವರಿ ಖರ್ಚಾಗುತ್ತಿದೆ.
ಈ ಕುರಿತು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕೆ.ಎಂ. ರಮೇಶ ಅವರು ಪ್ರತಿಕ್ರಿಯಸಿ, ಮಾವು ಹೂವು ಮೂಡುವ ಹಂತದಲ್ಲಿ ಗಿಡಗಳಿಗೆ ನೀರುಣಿಸಬಾರದು. ನೀರುಣಿಸಿದರೆ ಹೂವು ಉದುರುವುದು ಹಾಗೂ ಹೂ ಎಲೆಗಳಾಗಿ ಬೆಳವಣಿಗೆಯಾಗುವ ಸಾಧ್ಯತೆಗಳಿವೆ. ಈ ಪರಿಸ್ಥಿತಿಯಲ್ಲಿ ರವಿವಾರ ಮಳೆಯಾಗಿದ್ದು, ಹೂ ಉದುರುವುದು ಅಲ್ಲದೇ, ಗಿಡಗಳಿಗೆ ನೀರಿನ ಲಭ್ಯತೆಯಿಂದಾಗಿ ಹೂವಿನ ಸಂಖ್ಯೆ ಕ್ಷೀಣಿಸಲಿದೆ. ಚಿಬ್ಬು ರೋಗ ಹೂವಿನ ಗೊಂಚಲು ಒಣಗಲಾರಂಭಿಸುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಶಿಲೀಂದ್ರ ನಾಶಕ ಬಳಸಿ ನಿಯಂತ್ರಿಸಬಹುದು. ಜಿಗಿ, ಬೂದಿ ರೋಗ ಕಂಡು ಬಂದರೆ ನೀರಿನಲ್ಲಿ ಕರಗುವ ಗಂಧಕ ಪ್ರತಿ ಲೀಟರ್‌ಗೆ ಎರಡೂವರೆ ಎಂ.ಎಲ್., ರೋಗರ್ ಪ್ರತಿ ಲೀಟರ್ 2 ಎಂ.ಎಲ್ 15 ದಿನದಲ್ಲಿ ಮೂರು ಬಾರಿ ಸಿಂಪಡಿಸಿ ನಿಯಂತ್ರಿಸಬಹುದಾಗಿದೆ ಎಂದರು.
ರವಿವಾರ ರಾತ್ರಿ ಸುರಿದ ಮಳೆ ದಾಳಿಂಬೆ, ದ್ರಾಕ್ಷಿ ಹಾಗೂ ಮಾವಿಗೆ ಪ್ರತಿಕೂಲವಾಗಿದೆ. ಮಾವಿನ ಹೂವು ಉದುರಿ ಇಳುವರಿ ಕ್ಷೀಣಿಸಿದರೆ, ದಾಳಿಂಬೆ ದುಂಡಾಣು ಅಂಗಮಾರಿ ರೋಗಕ್ಕೆ ತುತ್ತಾಗುವ ಸಾಧ್ಯತೆಗಳಿದ್ದು, ದ್ರಾಕ್ಷಿ ಬೆಳೆ ಸಧ್ಯ ಫಸಲು ಕಟಾವು ಹಂತದಲ್ಲಿ ನೀರುಣಿಸುವುದಿಲ್ಲ. ಈ ಮಳೆಯಿಂದ ದ್ರಾಕ್ಷಿ ಬೆಳೆ ನೀರು ಹೀರಿಕೊಂಡು ದ್ರಾಕ್ಷಿ ಹಣ್ಣಾಗುವ ಹಂತದಲ್ಲಿ ಕೊಳೆಯಲಾರಂಭಿಸುತ್ತಿದೆ. ಸಿಹಿ ಅಂಶ ಕಡಿಮೆಯಾಗಿ ಕೀಟಬಾಧೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
•ಕೆ.ಎಂ. ರಮೇಶ,
ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ