ನಟ ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ 25ನೇ ಚಿತ್ರ “ಪ್ರೇಮಂ ಪೂಜ್ಯಂ’ ತೆರೆಗೆ ಬರೋದಕ್ಕೆ ಮುಹೂರ್ತ ನಿಗಧಿಯಾಗಿದೆ. ಚಿತ್ರ ಇದೇ ನವೆಂಬರ್ 12ರಂದು ತೆರೆಗೆ ಬರುತ್ತಿದ್ದು, ಕರ್ನಾಟಕದಲ್ಲಿ ಮಾತ್ರವಲ್ಲದೆ, ಬೇರೆ ರಾಜ್ಯಗಳು ಮತ್ತು ವಿದೇಶಗಳಲ್ಲೂ “ಪ್ರೇಮಂ ಪೂಜ್ಯಂ’ ರಿಲೀಸ್ ಮಾಡಲು ಚಿತ್ರತಂಡ ಮುಂದಾಗಿದೆ.
ಇತ್ತೀಚೆಗಷ್ಟೇ “ಪ್ರೇಮಂ ಪೂಜ್ಯಂ’ ಹಾಡುಗಳು ಬಿಡುಗಡೆಯಾಗಿದ್ದು, ಕೇಳುಗರ ಗಮನ ಸೆಳೆಯುತ್ತಿದೆ. ಇದರ ಬೆನ್ನಲ್ಲೇ ಚಿತ್ರದ ಬಿಡುಗಡೆ ಘೋಷಿಸಿರುವ ಚಿತ್ರತಂಡ, ಸದ್ಯ “ಪ್ರೇಮಂ ಪೂಜ್ಯಂ’ ಅನ್ನು ಪ್ರೇಕ್ಷಕರಿಗೆ ತಲುಪಿಸುವ ಕೊನೆ ಹಂತದ ಕಸರತ್ತಿನಲ್ಲಿ ನಿರತವಾಗಿದೆ.
ಇನ್ನು “ಪ್ರೇಮಂ ಪೂಜ್ಯಂ’ ಚಿತ್ರದ ಪ್ರಚಾರ ಕಾರ್ಯದ ಸಲುವಾಗಿ ರಾಜ್ಯದ ಉದ್ದಗಲಕ್ಕೂ ಪ್ರವಾಸಕ್ಕೆ ಯೋಜನೆ ಹಾಕಿಕೊಂಡಿರುವ ಚಿತ್ರತಂಡ, ರಾಜ್ಯದ ವಿವಿಧ ನಗರಗಳಲ್ಲಿ ಕಾಲೇಜು ಕ್ಯಾಂಪಸ್ ಗಳಿಗೆ ಭೇಟಿಕೊಟ್ಟು ಚಿತ್ರದ ಪ್ರಚಾರ ನಡೆಸಲಿದೆ.
ಮೊದಲು ಹಂತದಲ್ಲಿ ಉತ್ತರ ಕರ್ನಾಟಕದ ಕಡೆ ಹೋಗುತ್ತಿರುವ ಚಿತ್ರತಂಡ, ಹುಬ್ಬಳ್ಳಿ, ಧಾರವಾಡ, ಗದಗ್, ಬೆಳಗಾವಿ ಮೊದಲಾದ ನಗರಗಳಲ್ಲಿರುವ ಪ್ರಮುಖ ಕಾಲೇಜುಗಳಿಗೆ ಭೇಟಿ ನೀಡಲಿದೆ. ಅದಾದ ಬಳಿಕ ಎರಡನೇ ಹಂತದಲ್ಲಿ ಮೈಸೂರು, ಮಂಡ್ಯ, ಹಾಸನ ಮೊದ ಲಾದ ನಗರಗಳಲ್ಲಿರುವ ಪ್ರಮುಖ ಕಾಲೇಜ್ ಕ್ಯಾಂಪಸ್‌ಗಳಿಗೆ ಭೇಟಿ ನೀಡಲಿದೆ. ಈ ಕ್ಯಾಂಪಸ್ ವಿಸಿಟ್ ಕ್ಯಾಂಪೇನ್‌ನಲ್ಲಿ ಚಿತ್ರದ ನಾಯಕ ನಟ ಪ್ರೇಮ್, ನಾಯಕಿ ವೃಂದಾ ಆಚಾರ್ಯ, ಐಂದ್ರಿತಾ ರೇ, ನಿರ್ದೇಶಕ ಡಾ. ರಾಘವೇಂದ್ರ ಸೇರಿದಂತೆ ಚಿತ್ರತಂಡ ಭಾಗಿಯಾಗಲಿದೆ.
ಇನ್ನು “ಪ್ರೇಮಂ ಪೂಜ್ಯಂ’ ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಡಾ. ರಾಘವೇಂದ್ರ, “ಸಿನಿಮಾದ ಟೈಟಲ್ಲೇ ಹೇಳುವಂತೆ ಇದೊಂದು ಕಂಪ್ಲೀಟ್ ಲವ್‌ಸ್ಟೋರಿ ಸಬ್ಜೆಕ್ಟ್ ಸಿನಿಮಾ. ಎಲ್ಲರೂ ನಮ್ಮದು ಡಿಫರೆಂಟ್ ಸಿನಿಮಾ ಅಂತ ಹೇಳ್ತಾರೆ. ಆದ್ರೆ ನಾನು ಹಾಗೆ ಹೇಳಲಾರೆ. ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಲವ್‌ಸ್ಟೋರಿ ಸಿನಿಮಾಗಳು ಬಂದಿವೆ. ಆದ್ರೆ, ಹಾಗೆ ಬಂದಿರುವ ಲವ್‌ಸ್ಟೋರಿ ಸಿನಿಮಾಗಳೆಲ್ಲ ಒಂದೇ ರೀತಿ ಇರುವುದಿಲ್ಲ. ಅದೇ ರೀತಿ ನಮ್ಮ ಸಿನಿಮಾದಲ್ಲೂ ಹೊಸ ಥರದ ಲವ್ ಸ್ಟೋರಿಯೊಂದಿದೆ. ಹೀರೋ ಹೇಗೆ ತನ್ನ ಪ್ರೀತಿಯನ್ನು ಕಾಪಾಡಿಕೊಂಡು ಹೋಗ್ತಾನೆ, ಹೀಗೂ ಪ್ರೀತಿಸಬಹುದಾ ಎನಿಸುವಂತಿದೆ’ ಎನ್ನುತ್ತಾರೆ.