ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ವ್ಯಕ್ತಿಗಳು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದು ಅಂತವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಚಿತ್ರ ನಿರ್ದೇಶನ ಪ್ರೇಮ್ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಸಂಬಂಧ ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ ಚೆನ್ನಣ್ಣನವರ್ ಅವರನ್ನು ಮಂಗಳವಾರ ಭೇಟಿಯಾದ ನಿರ್ದೇಶಕ ಪ್ರೇಮ್, ದಿ ವಿಲನ್ ಚಿತ್ರಕ್ಕೆ ಸಂಬಂಧಿಸಿದಂತೆ ಕೆಲವು ಮಂದಿ ಕಿಡಿಗೇಡಿಗಳು ಅಭಿಮಾನಿಗಳ ಹೆಸರು ಹೇಳಿಕೊಂಡು ಸಾಮಾಜಿಕ ಜಾಲತಾಣಗಲ್ಲಿ ವ್ಯಕ್ತಿತ್ವ ತೇಜೋವಧೆ ಆಗುವ ರೀತಿ ಮಾತನಾಡುತ್ತಿದ್ದಾರೆ.
ಅವಹೇಳನಾಕಾರಿ ಮಾತುಗಳನ್ನಾಡಿ ವ್ಯಕ್ತಿ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ. ಹೀಗಾಗಿ ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕೋರಿ ದೂರು ಹಾಗೂ ಅವಹೇಳನಕಾರಿಯಾಗಿ ನಿಂದಿಸಿರುವ ವಿಡಿಯೋಗಳಿರುವ ಪೆನ್ ಡ್ರೈವ್‌ನ್ನು ನೀಡಿದರು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೆಲವು ಕಿಡಿಗೇಡಿಗಳು ದುರುದ್ದೇಶದಿಂದ ಸಿನಿಮಾ ಹೊರತುಪಡಿಸಿ ವೈಯಕ್ತಿಕ ಹಾಗೂ ಕುಟುಂಬದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸುತ್ತಿದ್ದಾರೆ. ನನ್ನ ಹೆಸರು ಹಾಳು ಮಾಡುವ ಉದ್ದೇಶದಿಂದ ಈ ಕೃತ್ಯ ಎಸಗುತ್ತಿದ್ದಾರೆ.
ಅಂತಹ ಕೆಲವು ವ್ಯಕ್ತಿಗಳ ವಿರುದ್ಧ ವಿಡಿಯೋ ಸಮೇತ ದೂರು ನೀಡಿದ್ದೇನೆ ಎಂದರು. ಪ್ರೇಮ್ ಅವರ ದೂರಿಗೆ ಸಂಬಂಧಿಸಿದಂತೆ ಕಾನೂನು ಪ್ರಕಾರ ಕ್ರಮ ವಹಿಸುವಂತೆ ಚಂದ್ರ ಲೇಔಟ್ ಪೊಲೀಸರಿಗೆ ಸೂಚನೆ ನೀಡುತ್ತೇನೆ ಎಂದು ಡಿಸಿಪಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.