Advertisement

ಆ್ಯಮಿ ಮೇಲೆ ಪ್ರೇಮ್‌ ಗರಂ

12:04 PM Oct 07, 2018 | Team Udayavani |

ನಿರ್ದೇಶಕ ಪ್ರೇಮ್‌ ಸಾಮಾನ್ಯವಾಗಿ ಕೋಪ, ಬೇಸರ ಮಾಡಿಕೊಳ್ಳುವ ಮನುಷ್ಯ ಅಲ್ಲ. ನಗು ನಗುತ್ತಲೇ ಎಲ್ಲರಿಂದ ಕೆಲಸ ತೆಗೆಸುವುದು ಪ್ರೇಮ್‌ಗೆ ಗೊತ್ತಿದೆ. ಆದರೆ, ಈ ಬಾರಿ ಮಾತ್ರ ಪ್ರೇಮ್‌ ಒಬ್ಬರ ಮೇಲೆ ಬೇಸರಿಸಿಕೊಂಡಿದ್ದಾರೆ. ನೀವು ಬೇಕಾದರೆ ಅದನ್ನು ಗರಂ ಎಂದಾದರೂ ಕರೆಯಬಹುದು. ಅಷ್ಟಕ್ಕೂ ಪ್ರೇಮ್‌ ಯಾರ ಮೇಲೆ ಗರಂ ಆಗಿದ್ದಾರೆಂದರೆ ಅದಕ್ಕೆ ಉತ್ತರ ನಟಿ ಆ್ಯಮಿ ಜಾಕ್ಸನ್‌.

Advertisement

“ದಿ ವಿಲನ್‌’ ಚಿತ್ರದಲ್ಲಿ ಫಾರಿನ್‌ ಬೆಡಗಿ ಆ್ಯಮಿ ಜಾಕ್ಸನ್‌ ಅನ್ನು ಕರೆತಂದು ಎಲ್ಲರು ಹುಬ್ಬೇರುವಂತೆ ಮಾಡಿದ್ದರು ಪ್ರೇಮ್‌. ಆ್ಯಮಿ ವೀಸಾ ಹಾಗೂ ಡೇಟ್ಸ್‌ ಸಮಸ್ಯೆಯಿಂದ ಚಿತ್ರ ಸಾಕಷ್ಟು ತಡವಾದರೂ ಅವೆಲ್ಲವನ್ನು ನುಂಗಿಕೊಂಡು ಚಿತ್ರೀಕರಣ ಮಾಡಿದ್ದ ಪ್ರೇಮ್‌, ಮೊನ್ನೆ ಅಕ್ಟೋಬರ್‌ 01 ರಂದು ನಡೆದ ಚಿತ್ರದ ಟೀಸರ್‌ ಬಿಡುಗಡೆ ಹಾಗೂ ಪತ್ರಿಕಾಗೋಷ್ಠಿವರೆಗೂ ಕೂಲ್‌ ಆಗಿಯೇ ಇದ್ದರು.

ಆದರೆ, ಅಂದಿನಿಂದ ಪ್ರೇಮ್‌ ಆ್ಯಮಿ ಮೇಲೆ ಗರಂ ಆಗಿದ್ದಾರೆ. ಆ್ಯಮಿ ವರ್ತನೆ ಪ್ರೇಮ್‌ಗೆ ಸರಿ ಕಾಣಿಸುತ್ತಿಲ್ಲ. ಅಷ್ಟಕ್ಕೂ ಪ್ರೇಮ್‌, ಆ್ಯಮಿ ಮೇಲೆ ಬೇಸರವಾಗಲು ಕಾರಣವೇನೆಂದರೆ ಆ್ಯಮಿ ಚಿತ್ರದ ಪ್ರಮೋಶನ್‌ನಿಂದ ದೂರ ಉಳಿದಿರುವುದು. ಅದಕ್ಕಿಂತ ಹೆಚ್ಚಾಗಿ ಚಿತ್ರತಂಡದ ಸಂಪರ್ಕಕ್ಕೆ ಸಿಗದಿರುವುದು. ಇವೆಲ್ಲದರಿಂದ ಪ್ರೇಮ್‌ಗೆ “ಯಾಕಪ್ಪಾ ಈ ಹುಡುಗಿನಾ ಕರೆತಂದ್ನೋ’ ಎಂಬಂತಹ ಬೇಸರವಾಗಿದೆ.

ಇತ್ತೀಚೆಗೆ ನಡೆದ ಚಿತ್ರದ ಪತ್ರಿಕಾಗೋಷ್ಠಿಗೂ ಆ್ಯಮಿ ಜಾಕ್ಸನ್‌ ಬರುತ್ತಾರೆಂದೇ ಹೇಳಲಾಗಿತ್ತು. ಮಾಧ್ಯಮ ಮಂದಿ ಕೂಡಾ ಆ್ಯಮಿ ಜಾಕ್ಸನ್‌ನ “ವಿಲನ್‌’ ಬಗ್ಗೆ ಮಾತನಾಡಿಸಲು ಸಿದ್ಧರಾಗಿದ್ದರು. ಪ್ರೇಮ್‌ ಕೂಡಾ ಆ್ಯಮಿ ಬರುತ್ತಾಳೆಂದೇ ನಂಬಿ, “ಈಗ ಬತ್ತಾಳೆ ಬಾಸ್‌’ ಎಂದು ಮಾಧ್ಯಮ ಮಂದಿಯಲ್ಲಿ ಹೇಳುತ್ತಲೇ ಇದ್ದರು. ಆದರೆ, ಆ್ಯಮಿ ಬರಲಿಲ್ಲ. ಇದರಿಂದ ಪ್ರೇಮ್‌ಗೆ ಬೇಸರವಾಗಿದೆ. ಅದೇ ಕಾರಣದಿಂದ ಪ್ರೇಮ್‌, ಈ ಬೇಜವಾಬ್ದಾರಿ ಸರಿಯಲ್ಲ ಎಂದು ಖಡಕ್‌ ಆಗಿ ಹೇಳಿದ್ದಾರೆ. 

“ಆ್ಯಮಿ ಜಾಕ್ಸನ್‌ ಪ್ರಮೋಶನ್‌ಗೆ ಬರಲೇಬೇಕೆಂಬ ಯಾವ ನಿಯಮವೂ ಇಲ್ಲ. ಆದರೆ, ಯಾವುದಕ್ಕಾದರೂ ಸರಿಯಾಗಿ ಪ್ರತಿಯಿಸಬೇಕು. ಫೋನ್‌ಗೆ ಸಿಗಲ್ಲ, ಮೇಲ್‌ ಹಾಕಿದರೂ ಅದಕ್ಕೆ ಉತ್ತರವಿಲ್ಲ. ಒಂದು ದಿನ ಬಿಝಿ, ಎರಡು ದಿನ ಬಿಝಿ, ಕಡೆ ಪಕ್ಷ ಮೂರನೇ ದಿನವಾದರೂ ನೋಡಿ, ಉತ್ತರಿಸಬಹುದಲ್ವಾ? ಆದರೆ, ಆ್ಯಮಿ ಚಿತ್ರತಂಡದ ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ತರಹ ಆದರೆ ಹೇಗೆ? ಇವತ್ತು ರಜನಿಕಾಂತ್‌, ಅಮಿತಾಬ್‌ ಬಚ್ಚನ್‌ ಅವರಂತಹ ಸೂಪರ್‌ಸ್ಟಾರ್‌ಗಳು ಅವರು ನಟಿಸಿದ ಚಿತ್ರತಂಡದೊಂದಿಗೆ ಸಂಪರ್ಕದಲ್ಲಿರುತ್ತಾರೆ,

Advertisement

ಊರೂರು ಹೋಗಿ ಚಿತ್ರದ ಪ್ರಚಾರ ಮಾಡುತ್ತಾರೆ. ಅವರಿಗೆ ಗೊತ್ತಿದೆ, ಸಿನಿಮಾ ಜನರಿಗೆ ತಲುಪಬೇಕಾದರೆ ಪ್ರಚಾರ ಮಾಡಬೇಕೆಂದು. ಆದರೆ, ಆ್ಯಮಿ ಮಾತ್ರ ಪ್ರಚಾರಕ್ಕೂ ಬರುತ್ತಿಲ್ಲ, ಚಿತ್ರತಂಡದ ಸಂಪರ್ಕಕ್ಕೂ ಸಿಗುತ್ತಿಲ್ಲ. ಆಕೆ ಪ್ರಚಾರಕ್ಕೆ ಬಂದ ಕೂಡಲೇ ಅದರಿಂದ ನನ್ನ ಸಿನಿಮಾಕ್ಕೆ ದೊಡ್ಡ ಲಾಭವಾಗುತ್ತದೆ ಅಥವಾ ಇನ್ನೇನೋ ಆಗುತ್ತದೆ ಎಂದು ನಾನು ನಂಬಿಲ್ಲ.

ಆದರೆ, ಯಾವುದಕ್ಕೂ ಪ್ರತಿಕ್ರಿಯಿಸದೇ ಇರೋದು ನನಗೆ ಬೇಸರವಾಗಿದೆ. ಆಕೆಯ ಡೇಟ್ಸ್‌ಗೆ ಹೊಂದಿಕೊಂಡು ನಾವು ಚಿತ್ರೀಕರಿಸಿದ್ದೇವೆ. ಹಾಗಂತ ಆ್ಯಮಿ ಕೆಟ್ಟ ಹುಡುಗಿ ಎಂದು ಹೇಳುತ್ತಿಲ್ಲ. ಚಿತ್ರೀಕರಣದಲ್ಲಿ ನಮಗೆ ಯಾವುದೇ ತೊಂದರೆ ಕೊಟ್ಟಿಲ್ಲ. ತುಂಬಾ ಡೆಡಿಕೇಶನ್‌ ಇದೆ. ಆದರೆ ಈಗ ಪ್ರಚಾರದ ವಿಷಯದಲ್ಲಿ ದೂರ ಉಳಿದಿರುವುದು ನನಗೆ ಇಷ್ಟವಾಗಿಲ್ಲ’ ಎಂದು ನೇರವಾಗಿ ಹೇಳುತ್ತಾರೆ ಪ್ರೇಮ್‌. 

ಮಲ್ಟಿಪ್ಲೆಕ್ಸ್‌ ಅನುಪಾತದ ಮೇಲೆ ವಿಲನ್‌ ಗರಂ: ಪ್ರಸ್ತುತ ಮಲ್ಟಿಪ್ಲೆಕ್ಸ್‌ಗಳಲ್ಲಿ 50:50 ಅನುಪಾತದಲ್ಲಿ ನಿರ್ಮಾಪಕರ ಹಾಗೂ ಮಲ್ಟಿಪ್ಲೆಕ್ಸ್‌ಗಳ ನಡುವೆ ಹಂಚಿಕೆ ನಡೆಯುತ್ತಿದೆ. ಸಿನಿಮಾದ ಒಟ್ಟು ಕಲೆಕ್ಷನ್‌ನಲ್ಲಿ ಶೇ 50 ನಿರ್ಮಾಪಕರಿಗಾದರೆ, ಉಳಿದ ಶೇ 50 ಮಲ್ಟಿಪ್ಲೆಕ್ಸ್‌ ಕೈ ಸೇರುತ್ತದೆ. ಇದನ್ನು ಈಗ “ದಿ ವಿಲನ್‌’ ತಂಡ ವಿರೋಧಿಸಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಟ್ಟಿದೆ.

ಮಲ್ಟಿಪ್ಲೆಕ್ಸ್‌ಗಳ ಈ ಧೋರಣೆಯಿಂದ ಕನ್ನಡ ನಿರ್ಮಾಪಕರಿಗೆ ತೊಂದರೆಯಾಗುತ್ತಿದೆ. ಕಲೆಕ್ಷನ್‌ನ ಅರ್ಧಕ್ಕರ್ಧ ಹಣವನ್ನು ಮಲ್ಟಿಪ್ಲೆಕ್ಸ್‌ ಪಡೆದರೆ ಇದರಿಂದ ನಿರ್ಮಾಪಕನಿಗೆ ಕಷ್ಟವಾಗುತ್ತಿದೆ. ಹಾಗಾಗಿ, ಕನ್ನಡ ಸಿನಿಮಾ ವಿಷಯದಲ್ಲಿ ಮಲ್ಟಿಪ್ಲೆಕ್ಸ್‌ಗಳು ತಮ್ಮ ಧೋರಣೆಯನ್ನು ಬದಲಿಸಬೇಕು ಎಂದು ಮನವಿ ಮಾಡಿದೆ. ಮಂಡಳಿಯಲ್ಲಿ ಒಂದು ಸುತ್ತಿನ ಮಾತುಕತೆಯಾಗಿದ್ದು, ಸೋಮವಾರ ಇನ್ನೊಂದು ಸುತ್ತಿನ ಸಭೆ ನಡೆಯಲಿದೆ.

ಈ ಬಗ್ಗೆ ಮಾತನಾಡುವ ಪ್ರೇಮ್‌, “ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳಲ್ಲಿ ನೀವು ವಾರದ ಬಾಡಿಗೆ ಕಟ್ಟಿದ ನಂತರ ಎಷ್ಟೇ ಕಲೆಕ್ಷನ್‌ ಆದರೂ ಅದು ನಿರ್ಮಾಪಕನಿಗೆ ಸೇರುತ್ತದೆ. ಆದರೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಶೇ 50 ಮಾತ್ರ ನಿರ್ಮಾಪಕರಿಗೆ ಹೋಗುವುದರಿಂದ ಆತನ ನಷ್ಟ. ಹಾಗಾಗಿ, ಕನ್ನಡ ಸಿನಿಮಾ ವಿಷಯದಲ್ಲಿ ಇದು ಬದಲಾಗಬೇಕು. ನಿರ್ಮಾಪಕನಿಗೆ ಕಡೆ ಪಕ್ಷ ಶೇ 70 ಆದರೂ ಸೇರಬೇಕು. ಈ ಬದಲಾವಣೆ “ದಿ ವಿಲನ್‌’ ಸಿನಿಮಾದಿಂದಲೇ ಆಗಲಿ. ಈ ಬಗ್ಗೆ ಮನವಿ ಪತ್ರ ನೀಡಿದ್ದು, ಸೋಮವಾರ ಸಭೆ ಇದೆ’ ಎಂದು ವಿವರ ಕೊಡುತ್ತಾರೆ ಪ್ರೇಮ್‌. 

Advertisement

Udayavani is now on Telegram. Click here to join our channel and stay updated with the latest news.

Next