ಕರಾಚಿ: ಕೋವಿಡ್ 19 ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಜಾರಿಗೊಳಿಸಿರುವ ಲಾಕ್ ಡೌನ್ ನಿಂದಾಗಿ ಗರ್ಭಿಣಿ ಮಹಿಳೆಯೊಬ್ಬಳು ಉಪವಾಸದಿಂದ ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಕಳೆದ ವಾರ ಸಿಂಧ್ ನ ಮೀರ್ ಪುರ್ ಖಾಸ್ ಜಿಲ್ಲೆಯ ಜಹುಡೋ ನಗರದ ನಿವಾಸಿ ಸುಗ್ರಾ ಬೀಬಿ(30ವರ್ಷ) ಊಟವಿಲ್ಲದೇ ಸಾವನ್ನಪ್ಪಿರುವುದಾಗಿ ಡೈಲಿ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಸುಗ್ರಾ ಬೀಬಿ ಪತಿ ಅಲ್ಲಾ ಬಕ್ಷ್ ದಿನಗೂಲಿ ಕೆಲಸ ಮಾಡುತ್ತಿದ್ದು, ಲಾಕ್ ಡೌನ್ ನಿಂದಾಗಿ ಯಾವುದೇ ಕೆಲಸ ಸಿಕ್ಕಿರಲಿಲ್ಲವಾಗಿತ್ತು. ಇದರಿಂದಾಗಿ ಕುಟುಂಬಕ್ಕೆ ಆಹಾರದ ಸಮಸ್ಯೆ ಎದುರಾಗಿದ್ದು, ಈತನಿಗೆ ಆರು ಮಂದಿ ಮಕ್ಕಳಿರುವುದಾಗಿ ವರದಿ ವಿವರಿಸಿದೆ.
ಪತ್ನಿ ಊಟವಿಲ್ಲದೇ ಹಸಿವಿನಿಂದ ಸಾವನ್ನಪ್ಪಿದ್ದು, ಆಕೆಯ ಶವಸಂಸ್ಕಾರ ಮಾಡಲು ತನ್ನ ಬಳಿ ಹಣ ಇಲ್ಲವಾಗಿತ್ತು. ಸ್ಥಳೀಯ ಜನರೇ ಹಣ ಸಂಗ್ರಹಿಸಿ ದೇಣಿಗೆ ನೀಡಿದ್ದರು. ನಂತರ ಪತ್ನಿಯನ್ನು ಸಮಾಧಿ ಮಾಡಲಾಯಿತು ಎಂದು ವರದಿ ವಿವರಿಸಿದೆ.
ಹಸಿವಿನಿಂದ ಗರ್ಭಿಣಿ ಸಾವನ್ನಪ್ಪಿರುವ ಪ್ರಕರಣವನ್ನು ತನಿಖೆ ನಡೆಸುವಂತೆ ಸಿಂಧ್ ಸರ್ಕಾರ ಆದೇಶ ನೀಡಿದೆ. ಈ ಬಗ್ಗೆ ಕೂಡಲೇ ವರದಿ ಒಪ್ಪಿಸುವಂತೆ ಮೀರ್ ಪಿರ್ ಆಡಳಿತ ಸೂಚನೆ ನೀಡಿರುವುದಾಗಿ ವರದಿ ತಿಳಿಸಿದೆ.