ಮಲಪ್ಪುರಂ: ಆಹಾರ ಅರಸಿ ನಾಡಿಗೆ ಬಂದ ಗರ್ಭಿಣಿ ಕಾಡಾನೆ ಬಾಯಿಗೆ ಪಟಾಕಿ ಇಟ್ಟು ಸ್ಫೋಟಿಸಿ, ಬಳಿಕ ಅದರ ಸಾವಿಗೆ ಕಾರಣವಾದ ಅತಿ ಕ್ರೂರ ಘಟನೆ ಇಲ್ಲಿನ ಕೇರಳ ಮಲಪ್ಪುರಂನ ಗ್ರಾಮವೊಂದರಿಂದ ವರದಿಯಾಗಿದೆ.
ನಾಡಿಗೆ ಬಂದ ಕಾಡಾನೆಗೆ ಅನನಾಸಿನಲ್ಲಿ ಪಟಾಕಿ ಇಟ್ಟು ಕೊಡಲಾಗಿದೆ. ಏನೂ ಅರಿಯದ ಆನೆ ಅದನ್ನು ಜಗಿದಿದ್ದು, ಪಟಾಕಿ ಸ್ಫೋಟಿಸಿದೆ. ಇದರಿಂದ ಆನೆಯ ಇಡೀ ಬಾಯಿಗೆ ಹಾನಿಯಾಗಿದ್ದು, àಳಿಡುತ್ತಾ ಹೋದ ಆನೆ ಹೋಗಿ ಸನಿಹದ ವೆಲ್ಲಿಯೂರ್ ನದಿಯಲ್ಲಿ ನಿಂತಿದೆ. ಅಲ್ಲೇ ನೋವಿನಿಂದ ನಿಂತಿದ್ದ ಆನೆ ಬಳಿಕ ಕೊನೆಯುಸಿರೆಳೆದಿದೆ.
ಅಂದಹಾಗೆ ಈ ಆನೆ ಊರಿಗೆ ಬರುತ್ತಿದ್ದುದು ಮೊದಲೇನಲ್ಲ. ಹಿಂದೆಯೂ ಬರುತ್ತಿತ್ತು. ಮಾನವರಿಗೆ ಅದು ಹಾನಿ ಮಾಡುತ್ತಿರಲಿಲ್ಲ. ಅದು ಜನರು ಕೊಟ್ಟಿದ್ದನ್ನು ತಿಂದುಕೊಂಡು ಹೋಗುತ್ತಿತ್ತು. ಹಲವು ವರ್ಷದಿಂದ ಅದು ಏನೂ ಹಾನಿ ಮಾಡಿದ ಉದಾಹರಣೆ ಇಲ್ಲ ಎಂದು ಹಳ್ಳಿಯವರು ಹೇಳುತ್ತಾರೆ.ಆದರೆ ಕಟುಕರ ಈ ಕೃತ್ಯ ಆನೆ ನದಿಯಲ್ಲಿ ನಿಂತಾಗಲೇ ಅರಿವಿಗೆ ಬಂದಿದೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.
ಈ ಪ್ರಕರಣ ಫೇಸ್‌ಬುಕ್‌ನಲ್ಲಿರುವ ಆನೆ ಸಂರಕ್ಷಣಾ ದಳವೊಂದರ ಅರಿವಿಗೆ ಬಂದಿದ್ದು, ಅವರು ನೆರವಿಗೆ ಧಾವಿಸಿದ್ದಾರೆ. ಜತೆಗೆ ಅರಣ್ಯಾಧಿಕಾರಿಗಳು ಪಳಗಿದ ಆನೆಗಳೊಂದಿಗೆ ಅದನ್ನು ನೀರಿನಿಂದ ಹೊರತಂದು ಚಿಕಿತ್ಸೆ ನೀಡಲು ಯತ್ನಿಸಿದ್ದಾರೆ. ಆದರೆ ಜಪ್ಪಯ್ಯ ಎಂದರೂ ಅದು ನೀರಿನಿಂದ ಹೊರಗೆ ಬರಲು ಒಪ್ಪಿಲ್ಲ. ನಾಲಗೆ, ಬಾಯಿಗೆ ಆದ ತೀವ್ರ ಹಾನಿ ಮತ್ತು ನೋವಿನಿಂದಾಗಿ ಆನೆ ಹೀಗೆ ಮಾಡಿದೆ ಎಂದು ಅರಣ್ಯಾಧಿಕಾರಿಗಳು ಹೇಳುತ್ತಾರೆ. ಇದರಿಂದಾಗಿ ಆನೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. 18-20 ತಿಂಗಳಲ್ಲಿ ಆನೆ ಮರಿಗೆ ಜನ್ಮ ನೀಡುವುದಿತ್ತು ಎಂದು ಹೇಳಲಾಗಿದೆ.