Advertisement
ಹೀಗೆ ಈ ಬ್ರಾಹ್ಮಣ ದಂಪತಿಗಳು ಪರಸ್ಪರ ಅನ್ಯೋನ್ಯತೆಯಿಂದ ಧನ-ಧಾನ್ಯಾದಿ ಭೋಗವಿಲಾಸದ ಜೀವನದಿಂದ ಸಂತೋಷದಿಂದಿದ್ದರೂ, ಸಂತಾನವಿಲ್ಲದ ದುಃಖದಿಂದ ದುಃಖಿಗಳಾಗಿದ್ದರು. ಪ್ರಾಯ ಸಂದು ಹೋದಂತೆ ಸಂತಾನಕ್ಕಾಗಿ ದೀನ ಬಡವರಿಗೆ ಗೋವು, ಸುವರ್ಣ , ಭೂಮಿ ,ವಸ್ತ್ರ ಮುಂತಾದವುಗಳನ್ನು ಯಥೇಚ್ಛವಾಗಿ ದಾನ ಮಾಡುವ ಮೂಲಕ ಪುಣ್ಯಕರ್ಮಗಳನ್ನು ಮಾಡಲು ಪ್ರಾರಂಭಿಸಿದರು.
Related Articles
Advertisement
ಇದನ್ನು ಕೇಳಿದ ಆತ್ಮದೇವನು ” ಹೆಂಡತಿ ಮಕ್ಕಳಿಲ್ಲದ ಸನ್ಯಾಸಾಶ್ರಮವು ಸರ್ವಥಾ ನೀರಸವಾಗಿದೆ ಮಕ್ಕಳು ಮೊಮ್ಮಕ್ಕಳು ತುಂಬಿದ ಗೃಹಸ್ಥಾಶ್ರಮವೇ ಸರಸವಾಗಿದ್ದು, ನಿಮ್ಮ ಯೋಗಬಲದಿಂದ ನನಗೆ ಪುತ್ರ ಸಂತಾನವನ್ನು ಕರುಣಿಸಿರಿ. ಇಲ್ಲವಾದಲ್ಲಿ ನಿಮ್ಮ ಮುಂದೆಯೇ ನಾನು ಪ್ರಾಣತ್ಯಾಗವನ್ನು ಮಾಡುವೆನು” ಎಂದು ಹೇಳಿದನು.
ಆತ್ಮದೇವನ ಆಗ್ರಹದ ಮಾತನ್ನು ಕೇಳಿದ ತಪೋನಿಷ್ಠರಾದ ಯತಿಯು ” ಎಲೈ ಬ್ರಾಹ್ಮಣನೇ ವಿಧಾತನ ಬರಹವನ್ನು ತಿದ್ದುವ ಹಠವನ್ನು ಮಾಡಿದ ರಾಜ ಚಿತ್ರಕೇತನು ಬಹಳಷ್ಟು ಕಷ್ಟವನ್ನು ಅನುಭವಿಸಬೇಕಾಯಿತು ಅವನಂತೆ ಭಾರಿ ಹಠವನ್ನು ತೊಟ್ಟು ನನ್ನ ಮುಂದೆ ನಿಂತಿರುವ ನಿನಗೆ ನಾನೇನು ಹೇಳಲಿ ಎಂದು ವಿಧವಿಧವಾಗಿ ಅರ್ಥೈಸಿದರು.
ಎಷ್ಟು ಹೇಳಿದರೂ ತನ್ನ ಆಗ್ರಹವನ್ನು ಬಿಡದಿರುವ ಆತ್ಮದೇವನಿಗೆ ಯತಿಯು ಒಂದು ಫಲವನ್ನಿತ್ತು ಇದನ್ನು ನಿನ್ನ ಪತ್ನಿಗೆ ತಿನ್ನಿಸು. ಆಕೆಯು ಒಂದು ವರ್ಷದ ತನಕ ಸತ್ಯ , ಶೌಚ , ದಯಾ, ದಾನ ಮತ್ತು ಒಪ್ಪತ್ತು ಊಟದ ನಿಯಮದಿಂದಿರಲು ನಿನಗೆ ಶುದ್ಧ ಸ್ವಭಾವದ ಪುತ್ರ ಸಂತಾನವಾಗುವುದು” ಎಂದು ಹೇಳಿ ಸನ್ಯಾಸಿಯು ಹೊರಟುಹೋದನು.
ಬ್ರಾಹ್ಮಣನು ಸಂತೋಷದಿಂದ ಮನೆಗೆ ಹಿಂತಿರುಗಿ ನಡೆದ ಘಟನೆಯನ್ನು ಹೆಂಡತಿಗೆ ವಿವರಿಸಿ ಆ ಫಲವನ್ನು ಅವಳ ಕೈಯಲ್ಲಿಟ್ಟು ಹೊರಗೆ ಹೊರಟುಹೋದನು.
ಕುಟಿಲ ಸ್ವಭಾವದ ಅವನ ಹೆಂಡತಿಯು ತನ್ನ ಗರ್ಭಿಣಿ ತಂಗಿಯನ್ನು ಕುರಿತು “ನನಗಾದರೋ ಭಾರಿ ಚಿಂತೆಯಾಗಿದೆ. ಈ ಫಲವನ್ನು ತಿಂದು ನಾನು ಗರ್ಭವತಿಯಾದರೆ ನನ್ನ ಹೊಟ್ಟೆಯು ಬೆಳೆಯುವುದು ನನಗಿಷ್ಟಬಂದ ಏನನ್ನೂ ತಿನ್ನುವುದು, ಕುಡಿಯುವುದು ಅಸಾಧ್ಯ. ಇದರಿಂದ ನನ್ನ ಶಕ್ತಿಯು ಕ್ಷಯವಾಗುವುದು ಆಸಮಯದಲ್ಲಿ ಊರಿನಲ್ಲಿ ದರೋಡೆಕೋರರ ಅಕ್ರಮಣವಾದರೆ ಗರ್ಭಿಣಿಯಾದ ನಾನು ಓಡಿಹೋಗಿ ತಪ್ಪಿಸಿಕೊಳ್ಳುವುದಾದರೂ ಹೇಗೆ? ಪ್ರಸವಕಾಲದ ಭಯಂಕರ ವೇದನೆಯನ್ನು ಸುಕುಮಾರಿಯಾದ ನಾನು ಹೇಗೆ ಸಹಿಸಬಲ್ಲೆ ಮಗುವನ್ನು ಹಡೆದ ನಂತರವೂ ನನಗೆ ಮಗುವಿನ ಲಾಲನೆ ಪಾಲನೆಯು ತುಂಬಾ ಕಷ್ಟವಾಗುವುದು. ಎಲ್ಲಕ್ಕಿಂತಲೂ ಬಂಜೆಯಾಗಿರುವುದೇ ಪರಮ ಸುಖ” ಎಂದು ಹೇಳಿದಳು.
ಆಗ ತಂಗಿಯು ನನ್ನ ಗಂಡನಿಗೆ ನೀನು ಹಣವನ್ನಿಟ್ಟು ಸಂತೋಷಪಡಿಸಿದರೆ ಗರ್ಭಿಣಿಯಾದ ನಾನು ನನ್ನ ಮಗುವನ್ನು ನಿನಗೆ ಕೊಡುವೆನು ನನಗೆ ಹೆರಿಗೆಯಾಗುವ ತನಕ ನೀನು ಮನೆಯಲ್ಲೇ ಗರ್ಭಿಣಿಯಂತೆ ನಟಿಸುತ್ತಾ ಇರು. ನನ್ನ ಮಗುವು ಸತ್ತುಹೋಯಿತು ಎಂದು ಎಲ್ಲರಿಗೂ ಹೇಳುವೆನು. ನಂತರ ನಾನು ನಿನ್ನ ಮನೆಯಲ್ಲೇ ಇದ್ದು ಮಗುವಿನ ಲಾಲನೆ, ಪೋಷಣೆಯನ್ನು ಮಾಡುವೆನು. ಈಗ ನೀನು ಋಷಿಯ ಮಾತನ್ನು ಪರೀಕ್ಷಿಸಲು ಈ ಫಲವನ್ನು ಹಸುವಿಗೆ ತಿನ್ನಿಸು ಎಂದಳು. ತಂಗಿಯ ಮಾತಿನಂತೆ ಸನ್ಯಾಸಿಕೊಟ್ಟ ಹಣ್ಣನ್ನು ಹಸುವಿಗೆ ತಿನಿಸಿದಳು.
ಅದೇ ಸಮಯಕ್ಕೆ ಮನೆಗೆ ಹಿಂತಿರುಗಿದ ಗಂಡನು ಫಲವನ್ನು ತಿಂದೆಯಾ ಎಂದು ಕೇಳಲು ದುಂಧುಲಿಯು ಹೌದೆಂದು ಹೇಳಿದಳು. ಸ್ವಲ್ಪ ದಿನದ ನಂತರ ಹಸುವು ಗರ್ಭ ಧರಿಸಿತು. ಇದಾದ ನಂತರ ಸಮಯಕ್ಕೆ ಸರಿಯಾಗಿ ತಂಗಿಗೆ ಹೆರಿಗೆ ಯಾಗಲು ಅವಳ ಗಂಡನು ಯಾರಿಗೂ ತಿಳಿಯದಂತೆ ಮಗುವನ್ನು ತಂದು ದುಂಧುಲಿಗೆ ಕೊಟ್ಟನು. ಮಗುವು ಸಿಕ್ಕಿದ ತಕ್ಷಣ ದುಂಧುಲಿಯು ತನಗೆ ಗಂಡು ಮಗು ಹುಟ್ಟಿತೆಂದು ತಿಳಿಸಿದಳು. ಸಂತೋಷಗೊಂಡ ಆತ್ಮದೇವನು ತನ್ನ ಮಗುವಿಗೆ ಜಾತಕರ್ಮಾದಿ ಸಂಸ್ಕಾರಗೈದು ದುಂಧುಕಾರಿ ಎಂದು ನಾಮಕರಣ ಮಾಡಿದನು.
ಪೂರ್ವ ನಿರ್ಧಾರದಂತೆ ಮಗುವಿನ ಪಾಲನೆಗೋಸ್ಕರ ತಂಗಿಯನ್ನು ತನ್ನ ಮನೆಗೆ ಕರೆಸಿಕೊಂಡಳು. ಇದಾದ ಮೂರು ತಿಂಗಳಿಗೆ ಹಣ್ಣು ತಿಂದ ಹಸುವು ಮನುಷ್ಯಾಕಾರದ ಸುಂದರ ಮಗುವಿಗೆ ಜನ್ಮನೀಡಿತು. ಇದರಿಂದ ಸಂತೋಷಗೊಂಡ ಬ್ರಾಹ್ಮಣನು ಆ ಮಗುವಿಗೆ ಜಾತಕರ್ಮಾದಿ ಸಂಸ್ಕಾರಗಳನ್ನು ಮಾಡಿದನು. ಆ ಮಗುವಿನ ಕಿವಿಯು ಹಸುವಿನ ಕಿವಿಯಂತಿದ್ದ ಕಾರಣ, ಅವನಿಗೆ ಗೋಕರ್ಣ ನೆಂದು ನಾಮಕರಣ ಮಾಡಿದನು.
ಮುಂದುವರೆಯುವುದು……
ಪಲ್ಲವಿ